More

    ಬಸವಂತಪ್ಪಗೆ ಮಾಯಕೊಂಡ ಮಾಯೆ- ಮತಗಳ ವಿಭಜನೆ ಕಾಂಗ್ರೆಸ್ಗೆ ವರದಾನ,

    ದಾವಣಗೆರೆ: ಪ್ರತಿ ಚುನಾವಣೆಯಲ್ಲೂ ಬದಲಿ ತೀರ್ಪು ನೀಡುವ ಸಂಪ್ರದಾಯನ್ನು ಮಾಯಕೊಂಡ ಕ್ಷೇತ್ರದ ಮತದಾರರು ಈ ಬಾರಿಯೂ ಮುಂದುವರಿಸಿದರು. ಹೀಗಾಗಿ ಕಾಂಗ್ರೆಸ್‌ನ ಕೆ.ಎಸ್.ಬಸವಂತಪ್ಪ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲೇರಿದ್ದಾರೆ.
    6458 ಮತಗಳ ಅಂತರದಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪ್ರೊ. ಲಿಂಗಣ್ಣ ವಿರುದ್ಧ ಸೋಲುಂಡಿದ್ದ ಬಸವಂತಪ್ಪ ಈ ಬಾರಿ 33302 ಮತಗಳ ಅಂತರದ ಜಯ ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಪುಷ್ಪಾ ವಾಗೀಶಸ್ವಾಮಿ ಈ ಬಾರಿ ಅವರಿಗೆ ಎದುರಾಳಿಯಾಗಿದ್ದು ವಿಶೇಷ.
    ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡಿದ್ದರೂ ಪಕ್ಷ ಮಣೆ ಹಾಕಿದ್ದು ಬಸವಂತಪ್ಪ ಅವರನ್ನು. ಮಾಜಿ ಸಚಿವ ಎಚ್.ಆಂಜನೇಯ ಅವರ ಅಳಿಯ ಹಾಗೂ ಹಿಂದಿನ ಚುನಾವಣೆಯ ಪರಾಜಿತ ಅಭ್ಯರ್ಥಿಯೆಂಬ ಮಾನದಂಡ ಅದರ ಹಿಂದಿತ್ತು. ಕೈ ವರಿಷ್ಠರ ಎಣಿಕೆಯಂತೆ ಮತದಾರರು ಮಣಿದರು.
    ಬಿಜೆಪಿಯಲ್ಲಿ ಡಜನ್ ಆಕಾಂಕ್ಷಿಗಳಿದ್ದರೂ ಎಂ.ಬಸವರಾಜನಾಯ್ಕರಿಗೆ ಟಿಕೆಟ್ ನೀಡಿದ್ದು ಟಿಕೆಟ್ ವಂಚಿತರು ಸಿಟ್ಟಿಗೆದ್ದು ಬಂಡಾಯ ಅಭ್ಯರ್ಥಿಯಾಗಿ ಶಿವಪ್ರಕಾಶ್ ಅವರನ್ನು ಕಣಕ್ಕಿಳಿಸುವ ಪ್ರಯತ್ನ ಪ್ರಹಸನವಾಗುಳಿಯಿತು. ಬಿಜೆಪಿಗರ ನಡುವಿನ ಮುಸುಕಿನ ಗುದ್ದಾಟ ಕಾಂಗ್ರೆಸ್‌ಗೆ ಲಾಭವಾಯಿತು.
    ಭಾನುವಳ್ಳಿಯ ಬಿಜೆಪಿ ಮುಖಂಡ ಜಿಪಂ ಮಾಜಿ ಸದಸ್ಯ ವಾಗೀಶಸ್ವಾಮಿ ಜಾತಿ ಪ್ರಮಾಣಪತ್ರ ಗೊಂದಲದಿಂದಾಗಿ ನಾಮಪತ್ರ ತಿರಸ್ಕೃತವಾಯಿತು. ಆದರೆ ಪತ್ನಿ ಪುಷ್ಪಾರನ್ನು ಕಣಕ್ಕಿಳಿಸಿದರು. ನಾಮಪತ್ರ ಅಂಗೀಕಾರದ ಬಳಿಕ ಗೊಂದಲವಾಗಿತ್ತು. ಅವರು 37614 ಮತಗಳನ್ನು ಪಡೆದರು. ಲಿಂಗಾಯತ ಮತಗಳು ವಿಭಜನೆಯಾದವು. ಜೆಡಿಎಸ್‌ನ ಎಚ್.ಆನಂದಪ್ಪ 12915 ಮತ ಪಡೆದದ್ದರಿಂದಲೂ ಬಿಜೆಪಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.
    ಮಾನಹಾನಿ ಫೋಟೋಗಳನ್ನು ಜಾಲತಾಣಗಳಿಗೆ ಹರಿಬಿಟ್ಟ ಆರೋಪದಡಿ ಬಸವಂತಪ್ಪ ವಿರುದ್ಧವಾಗಿ ಬಂಡಾಯ ಸ್ಪರ್ಧಿಸಿದ್ದ ಸವಿತಾ ಮಲ್ಲೇಶನಾಯ್ಕ ಅವರ ಸ್ವಾಭಿಮಾನದ ಹೋರಾಟ ಪಲ್ಲಟಗೊಂಡಿತು.
    ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಬಸವಂತಪ್ಪಗೆ ಆಡಳಿತ ಪಕ್ಷದ ವಿರೋಧಿ ಅಲೆ, ಯಡಿಯೂರಪ್ಪನವರ ಕಡೆಗಣನೆ ವಿಚಾರ ಪ್ಲಸ್ ಆಯಿತು. ಹಿಂದುಳಿದ ವರ್ಗ ಹಾಗೂ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‌ಗೆ ಬಲ ತುಂಬಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts