More

    ಬಲಿಯಾದ ಮೇಲೆ ಗುಂಡಿಗೆ ಬೇಲಿ!

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿನ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ನಿರ್ವಿುಸಲಾಗುತ್ತಿರುವ ಇಂಗು ಗುಂಡಿಯಲ್ಲಿ ಸೋಮವಾರ ಬಾಲಕಿ ತ್ರಿಶಾ ಯರಂಗಳಿ (10) ಬಿದ್ದು ಸಾವನ್ನಪ್ಪಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಂಡಿ ಸುತ್ತ ಬೇಲಿ ನಿರ್ವಿುಸಿದ್ದಾರೆ.

    ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಆಟವಾಡುವಾಗ ಆಯತಪ್ಪಿ ಬಿದ್ದು ತ್ರಿಶಾ ಮೃತಪಟ್ಟಿದ್ದಳು. ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಉಡುಪಿ ಮೂಲದ ಮಾಸ್ ಕನ್​ಸ್ಟ್ರಕ್ಷನ್ ಏಜೆನ್ಸಿ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಂತೂ ಮಂಗಳವಾರ ಇಂಗು ಗುಂಡಿ ಸುತ್ತ ನೆಟ್ ಹಾಕಿ ಪ್ರವೇಶ ನಿರ್ಬಂಧಿಸಿದ್ದಾರೆ.

    ‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ ಗ್ಲಾಸ್ ಹೌಸ್ ನವೀಕರಣದ ಗುತ್ತಿಗೆದಾರರು ಬಾಲಕಿ ಸಾವನ್ನಪ್ಪಿದ ಬಳಿಕ ಇಂಗು ಗುಂಡಿ ಸುತ್ತ ಬೇಲಿ ನಿರ್ವಿುಸಿ, ಅದರಲ್ಲಿ ಸಂಗ್ರಹವಾಗಿದ್ದ ಕೊಳಚೆ ಹಾಗೂ ಮಳೆ ನೀರನ್ನು ಪಂಪ್​ಸೆಟ್ ಮೂಲಕ ಹೊರಗೆ ಹಾಕುತ್ತಿದ್ದಾರೆ. ಈ ಕೆಲಸವನ್ನು ಮೊದಲೇ ಮಾಡಿದ್ದರೆ, ಮುಗ್ಧ ಬಾಲಕಿ ಪ್ರಾಣಹಾನಿ ಸಂಭವಿಸುತ್ತಿರಲಿಲ್ಲ.

    ಕಾಲು ಸ್ವಾಧೀನ ಕಳೆದುಕೊಂಡಿದ್ದರೂ, ಜೀವದ ಹಂಗು ತೊರೆದು ಇಬ್ಬರು ಬಾಲಕಿಯರನ್ನು ರಕ್ಷಿಸುವ ಮೂಲಕ ಸಾಹಸ ಮೆರೆದ ಗುತ್ತಿಗೆ ಸಿಬ್ಬಂದಿ ಸುರೇಶ ಅರಕೇರಿಗೆ ಕನಿಷ್ಠ ಪ್ರಶಂಸನಾ ಪತ್ರ ನೀಡುವ ಸೌಜನ್ಯವನ್ನೂ ಸಂಬಂಧಿಸಿದವರು ತೋರಿಲ್ಲ.

    ಘಟನೆ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಗೆ ಯಾರು ಹೊಣೆ? ಅವರಿಗೆ ಯಾವ ಶಿಕ್ಷೆ ಎಂಬ ಪ್ರಶ್ನೆ ಉದ್ಭವವಾಗಿದೆ.

    ಜನಪ್ರತಿನಿಧಿಗಳಿಗಿಲ್ಲ ಕಾಳಜಿ: ಘಟನೆ ನಡೆದು ಎರಡು ದಿನವಾದರೂ ಯಾವೊಬ್ಬ ಜನಪ್ರತಿನಿಧಿಯೂ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಮೃತ ತ್ರಿಶಾ ಯರಂಗಳಿ ಕುಟುಂಬಕ್ಕೆ ಪರಿಹಾರ ಕೊಡುವಲ್ಲಿ ಸ್ಮಾರ್ಟ್ ಸಿಟಿ ಸಂಸ್ಥೆ ಹಾಗೂ ಗುತ್ತಿಗೆದಾರರು ಮೀನಮೇಷ ಎಣಿಸುತ್ತಿದ್ದಾರೆ. ಗುತ್ತಿಗೆದಾರರ ಮೂಲಕ ಬಾಲಕಿ ಕುಟುಂಬದವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

    ತಂದೆಯಿಂದ ದೂರು: ತನ್ನ ಮಗಳ ಸಾವಿಗೆ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಗುತ್ತಿಗೆದಾರರ ನಿಲಕ್ಷ್ಯೇ ಕಾರಣ ಎಂದು ಬಾಲಕಿ ತ್ರಿಶಾಳ ತಂದೆ ಪರಶುರಾಮ ಯರಂಗಳಿ ಮಂಗಳವಾರ ಉಪನಗರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts