More

    ಬರದ ಹಣ ಸಾಲಕ್ಕೆ ಜಮೆ ಮಾಡಿದರೆ ಕ್ರಮ

    ಯಾದಗಿರಿ: ರೈತರ ಬರ ಪರಿಹಾರದ ಹಣ ಅನುಮತಿ ಇಲ್ಲದೆ ಸಾಲದ ಖಾತೆಗೆ ಜಮೆ ಮಾಡಿಕೊಂಡರೆ ಅಂತಹ ಬ್ಯಾಂಕ್ ಅಧಿಕಾರಿ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಜಿಲ್ಲೆಯ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
    ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಜಿಲ್ಲೆಯ ಎಲ್ಲ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬರ ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನವನ್ನು ರೈತರ ಒಪ್ಪಿಗೆ ಇಲ್ಲದೆ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಹಾಗೊಂದು ವೇಳೆ ಅವರು ಒಪ್ಪಿಗೆ ಸೂಚಿಸಿದ್ದಲ್ಲಿ ಮಾತ್ರ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
    ರೈತರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಏನಾದರೂ ತಾಂತ್ರಿಕ ದೋಷಗಳಿದ್ದರೆ ತಿಳಿವಳಿಕೆ ಮೂಡಿಸಿ ಇತ್ಯರ್ಥಪಡಿಸಿಬೇಕು. ಬ್ಯಾಂಕ್‌ಗಳ ವಿರುದ್ಧ ಸಾರ್ವಜನಿಕರ ದೂರು ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
    ಈಗಾಗಲೇ ಸರ್ಕಾರದಿಂದ ಬರ ಪರಿಹಾರದ ಮೊತ್ತವನ್ನು ರೈತರಿಗೆ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದ್ದು, ಆದರೆ ಕೆಲ ರೈತರು ಬ್ಯಾಂಕ್ ಅಧಿಕಾರಿಗಳು ಸದರಿ ಪರಿಹಾರದ ಮೊತ್ತವನ್ನು ಸಾಲ ರೂಪದಲ್ಲಿ ಕಡಿತಗೊಳಿಸುತ್ತಿರುವ ದೂರು ಬಂದಿದ್ದು, ಇನ್ಮುಂದೆ ಇಂತಹ ಸಮಸ್ಯೆಗೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದರು.
    ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪದಡಿ ಸಂದಾಯವಾಗುವ ಹಣ ಯಾವುದೇ ಕಾರಣಕ್ಕೂ ರೈತರ ಸಾಲದ ಖಾತೆಗೆ ಜಮೆ ಮಾಡುವಂತಿಲ್ಲ. ಸ್ಪಷ್ಟವಾದ ಸರ್ಕಾರದ ನಿರ್ದೇಶನವಿರುತ್ತದೆ. ಈ ರೀತಿ ಮಾಡಿದಲ್ಲಿ ತಾವು ಸರ್ಕಾರದ ನಿದರ್ಶನ ಉಲ್ಲಂಘಿಸಿದAತಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
    ಈ ವಿಷಯ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ತಪ್ಪು ಮಾಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.
    ಡೇ-ನಲ್ಮ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ನೋಂದಣಿ ಪ್ರಮಾಣ ಪತ್ರ ಅವಶ್ಯಕತೆ ಇರುವುದಿಲ್ಲ ಹೀಗಾಗಿ ಸ್ವ-ಸಹಾಯ ಸಂಘಗಳ ಖಾತೆ ತೆರೆಯಲು ಅವಕಾಶ ಕಲ್ಪಿಸಿಕೊಡಬೇಕು. ಅಲ್ಲದೆ ಪಿ.ಎಂ.ಸ್ವನಿಧಿ ಯೋಜನೆಯಡಿ ಸಾಲ ನೀಡುವಾಗ ಫಲಾನುಭವಿಗಳಿಗೆ ಯಾವುದೇ ಸ್ಟಾö್ಯಂಪ್ ಶುಲ್ಕ ವಿಧಿಸಬಾರದು ಎಂದು ತಾಕೀತು ಮಾಡಿದರು.
    ಜಿಪಂ ಸಿಇಒ ಗರೀಮಾ ಪನ್ವಾರ್, ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಲೋಕೇಶ್, ಎಸ್‌ಬಿಐ ಪ್ರಾದೇಶಿಕ ಕಚೇರಿ ಮುಖ್ಯ ವ್ಯವಸ್ಥಾಪಕ ಲೋಯಿಸ್ ಸಿ.ಎಂ, ಕೆಜಿಬಿ ಪ್ರಾದೇಶಿಕ ವ್ಯವಸ್ಥಾಪಕ ಗುರುಪ್ರಸಾದ ಸ್ವಾಮಿ, ಕೆಜಿಬಿ ರಿಜಿನಲ್ ಆಫೀಸರ್ (ಸಿಎಂ ಕ್ರೆಡಿಟ್) ಸುಬೇದಾರ, ಲೀಡ್ ಬ್ಯಾಂಕ್ ಸಿಬ್ಬಂದಿ ಕುಮಾರಸ್ವಾಮಿ, ಅಮೀರ್ ಪಟೇಲ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts