More

    ಬಬಲೇಶ್ವರ ಕ್ಷೇತ್ರದಲ್ಲಿ ಚುನಾವಣೆ ಪ್ಯಾಕೇಜ್ ಶುರು, ಇನ್ನು ಆರು ತಿಂಗಳ ಕಾಲ ಮತದಾರರೆಲ್ಲರೂ ಕುಟುಂಬಸ್ಥರೇ….ಎಂ.ಬಿ. ಪಾಟೀಲರ ಬಗ್ಗೆ ವಾಗ್ದಾಳಿ ನಡೆಸಿದ ಈ ನಾಯಕ ಯಾರು?

    ವಿಜಯಪುರ: ಬಬಲೇಶ್ವರ ವಿಧಾನ ಸಭೆ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಜನರ ಕೈಗೆ ಸಿಗದ ಶಾಸಕ ಎಂ.ಬಿ. ಪಾಟೀಲರಿಂದ ಇದೀಗ ಪ್ಯಾಕೇಜ್ ರಾಜಕಾರಣ ಶುರುವಾಗಿದೆ. ಇನ್ನು ಮುಂದಿನ ಆರು ತಿಂಗಳ ಕಾಲ ಮತದಾರರೆಲ್ಲರೂ ಇವರಿಗೆ ಕುಟುಂಬ ಸದಸ್ಯರೇ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹೊನವಾಡ ಲೇವಡಿ ಮಾಡಿದರು.

    ಚುನಾವಣೆ ಬಂದಾಗ ಓಡೋಡಿ ಬರುವ ಶಾಸಕರು ಆ ಬಳಿಕ ಇತ್ತ ತಿರುಗಿಯೂ ನೋಡಲ್ಲ.ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವಾಡುತ್ತಿವೆ. ಯಾವುದೇ ಅಭಿವೃದ್ಧಿ ಆಗಿಲ್ಲ. ಕಿಲಾರಹಟ್ಟಿಯಂಥ ಹಳ್ಳಿಗೆ ಈವರೆಗೂ ರಸ್ತೆ ಮಾಡಿಲ್ಲ. ಕಳ್ಳಬಟ್ಟಿ ಸಾರಾಯಿ ಮಾರುತ್ತಿದ್ದರೂ ತಡೆಯಲಾಗಿಲ್ಲ. ಇವರ ಬೆಂಬಲಿಗರೇ ಕಳ್ಳಬಟ್ಟಿ ದಂಧೆ‌ನಡೆಸುತ್ತಿದ್ದಾರೆ ಎಂದ ಹೊನವಾಡ, ಅಪಘಾತಗಳಾದರೂ ಸ್ಥಳಕ್ಕೆ ಬಂದವರಲ್ಲ ಇವರು. ಅಭಿವೃದ್ಧಿ ಎನ್ನುವುದು ಕೇವಲ ಇವರ ಕುಟುಂಬಕ್ಕೆ ಮಾತ್ರ ಆಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಕಿಚಾಯಿಸಿದರು.

    ಇವರೊಂದು ಫೌಂಡೇಶನ್ ಮಾಡಿಕೊಂಡಿದ್ದಾರೆ. ಈ ಫೌಂಡೇಶನ್ ಕೇವಲ ಚುನಾವಣೆಗಾಗಿ. ಸೀರೆ ಹಂಚುವುದಕ್ಕೆ ಮಾತ್ರ ಸೀಮಿತ ಆಗಿದೆ.

    ಎಂ.ಬಿ. ಪಾಟೀಲರಿಗೆ ಶ್ರೀಮಂತರೇ ಬೇಕು. ಬಡವರು ಬೇಡವಾಗಿದೆ. ಇವರಿಗೆ ತಮ್ಮ ತಮ್ಮ ಕುಟುಂಬ ಮಾತ್ರ ರಾಜಕೀಯ ಮಾಡಬೇಕು. ಬೇರೆ ಯಾರೂ ರಾಜಕೀಯ ವಾಗಿ ಮುಂದುವರಿಯಬಾರದು. ಇವರೊಬ್ಬ ಕುತಂತ್ರ ರಾಜಕಾರಣಿ. ರೈತರ ಮಕ್ಕಳನ್ನು ತುಳಿಯುತ್ತಾರೆ. ಇವರ ಕುಟುಂಬವೇ ಮಾತ್ರ ಬೆಳೆಯಬೇಕು. ಸರ್ಕಾರದ ಕಾರ್ಯಕ್ರಮದಲ್ಲೂ ಇವರ ಕುಟುಂಬಸ್ಥರ ಹಸ್ತಕ್ಷೇಪ ಇದೆ ಎಂದು ಆರೋಪಿಸಿದರು.

    ಕುರುಬರ ಮತ ಬ್ಯಾಂಕ್:

    ಎಂ.ಬಿ. ಪಾಟೀಲರು ನಮ್ಮ ಕುರುಬ ಸಮುದಾಯದ ಮತ ಸೆಳೆಯಲು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬರುತ್ತಾರೆ. ಆದರೆ, ಈ ಬಾರಿ ಸಿದ್ದರಾಮಯ್ಯ ಅವರ ಮಾತು ಸಹ ಜನ ಕೇಳಲ್ಲ. ಕುರುಬರು ಶಾಸಕರಾಗೋದು ಸಿದ್ದರಾಮಯ್ಯಗೆ ಬೇಡವಾ? ಸಿದ್ದರಾಮಯ್ಯಗೆ ಕುರುಬರ ಕಾಳಜಿ ಇದ್ದರೆ ಸಿಂದಗಿ ಉಪ‌ಚುನಾವಣೆಯಲ್ಲಿ ಟಿಕೆಟ್ ಕೊಡಿಸಬೇಕಿತ್ತು ನೋಡೋಣ. ಸಿದ್ದರಾಮಯ್ಯ ರಾಜ್ಯಕ್ಕೆ ಸಮೀತವಾಗಿರಲಿ. ಇನ್ಮುಂದೆ ಬಬಲೇಶ್ವರ ಕ್ಷೇತ್ರದಲ್ಲಿ ಕುರುಬರು ಯಾರ ಮಾತು ಸಹ ಕೇಳಲ್ಲ. ಎಂ.ಬಿ. ಪಾಟೀಲ ಬದುಕಿದ್ದೇ ಕುರುಬರ ಋಣದಲ್ಲಿ. ಇಲ್ಲವೆನ್ನಲಿ‌ ನೋಡೋಣ ಎಂದು ಸವಾಲು ಹಾಕಿದರು.

    ಎಂ.ಬಿ. ಪಾಟೀಲರು ಈ ಭೂಮಿ ಮೇಲೆ ತಾವು ಒಬ್ಬರೇ ಶ್ರೇಷ್ಠ ಎಂದು ಭಾವಿಸಿಕೊಂಡಿದ್ದಾರೆ. ಈಗ ಜನ ನಿಮ್ಮ ಯೋಗ್ಯತೆ ಅಳೆದಿದ್ದಾರೆ. ಈ ಬಾರಿ ಜನ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

    ಹಿಂದುಳಿದ ವರ್ಗದ ವಿರೋಧಿ:
    2013 ರಲ್ಲಿ ನಾನು ಚುನಾವಣೆಗೆ ನಿಂತಾಗ ನನ್ನ ವಿರುದ್ದ ಅಪಪ್ರಚಾರ ಮಾಡಿದರು. ಹಿಂದುಳಿದವರು ಬೆಳೆಯಬಾರದು ಎಂಬುದು ಇವರ ಕುತಂತ್ರ ಎಂದರು.

    ಬಬಲೇಶ್ವರ ಕ್ಷೇತ್ರದಲ್ಲಿ ಐವತ್ತಾರು ಸಾವಿರ ಕುರುಬರು ಇದ್ದಾರೆ. ಆ ಸಮಾಜದ ಒಬ್ಬ ನಾಯಕನನ್ನೂ ಬೆಳೆಯಲು ಬಿಡಲಿಲ್ಲ. ಕೇವಲ‌ ಜಿಲ್ಲಾ ಪಂಚಾಯಿತಿಗೆ ಸೀಮಿತಗೊಳಿಸಿದ್ದಾರೆ. ಗಾಣಿಗ ಸಮಾಜದ ಮುಖಂಡರನ್ನೂ ತುಳಿದರು. ಯಾರೊಬ್ಬರನ್ನೂ ಬೆಳೆಯಲು ಬಿಡಲಿಲ್ಲ. ಜಮಖಂಡಿ ಕ್ಷೇತ್ರದಲ್ಲಿ ಅನುಕಂಪದಿಂದ‌ ಗಾಣಿಗ ಅಭ್ಯರ್ಥಿ‌ ಗೆದ್ದರು. ಗೆದ್ದಿದ್ದನ್ನು ಮಾತ್ರ ತನ್ನದೆನ್ನುವುದು ಇವರ‌ ಚಾಳಿ ಎಂದರು.

    ಇವರ ಸರಿಸಮಕ್ಕೆ ಹಿಂದುಳಿದ ಸಮಾಜ ಬೆಳೆಯಬಾರದು. ಅದರಲ್ಲೂ ಕುರುಬರು ಬೆಳೆಯಬಾರದು ಎಂಬ ಭಾವನೆ ಇವರದ್ದು ಎಂದರು.

    ಸಂಸ್ಥೆಯ ದುರುಪಯೋಗ:

    ಬಿಎಲ್ ಡಿಇ ಸಂಸ್ಥೆ ಚುನಾವಣೆ ವಿಂಗ್ ಆಗಿದೆ. ಅಲ್ಲಿನ ಸಿಬ್ಬಂದಿಯನ್ನು‌ ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಮತದಾರರನ್ನು ಗುರುತಿಸಿ ಬಿಎಲ್ ಡಿಇಯಲ್ಲಿ ಉದ್ಯೋಗ ಕೊಡುವ ಇವರು ಅವರನ್ನು
    ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತ ಹಾಕಿಸುತ್ತಿದ್ದಾರೆ. ಚುನಾವಣೆ ಆಯೋಗ ಈ ಬಗ್ಗೆ ಗಂಭೀರವಾಗಿ
    ಪರಿಗಣಿಸಬೇಕು.
    ಸೋಶಿಯಲ್ ಮೀಡಿಯಾಕ್ಕೆ‌ಬಡ ಮಕ್ಕಳನ್ನು ಬಳಸಿಕೊಳ್ಳುವ‌ ಎಂ.ಬಿ. ಪಾಟೀಲ‌ ಪಕ್ಷದ ಪ್ರಮುಖ ಹುದ್ದೆಗೆ ತಮ್ಮ ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಇನ್ಮುಂದಿನ ಆರು ತಿಂಗಳು ಸೋಶಿಯಲ್‌ಮೀಡಿಯಾ ನಿಭಾಯಿಸುವ ಹುಡುಗರೆಲ್ಲರೂ ಫ್ಯಾಮಿಲಿ‌ ಮೇಂಬರ್ ಗಳೇ. ಇದು ಆರು ತಿಂಗಳ ಪ್ಯಾಕೇಜ್ ಎಂದು ಲೇವಡಿ ಮಾಡಿದರು.

    ಇವರಿಗೆ ಒಬ್ಬ ಶಾಸಕ ಮಾಡುವ‌ ಯೋಗ್ಯತೆ ಇಲ್ಲ. ಉಪ ಚುನಾವಣೆಯಲ್ಲಿ 30 ಸಾವಿರ ಮತಗಳಿಂದ‌ ಪಕ್ಷದ ಅಭ್ಯರ್ಥಿ ಸೋತರು. ಇದು ನಿಮ್ಮ ಯೋಗ್ಯತೆ ಎಂದ ಹೊನವಾಡ ಗೆದ್ದರೆ ಕ್ರೆಡಿಟ್ ತೆಗೆದುಕೊಳ್ಳುವುದು, ಸೋತರೆ ಸುಮ್ಮನಾಗುವುದು ಎಂಬ ಧೋರಣೆ. ಇವರೊಬ್ಬ ಹೊಟ್ಟೆ‌‌ ಕಿಚ್ಚಿನ ಮನುಷ್ಯ.ಇವರು ಯಾರದಾದರೂ ಹೆಗಲ ಮೇಲೆ‌ ಕೈ ಹಾಕಿದರೆ ಅವರ ಸರ್ವನಾಶ ಖಂಡಿತ ಎಂದು ಭಾವಿಸಬೇಕು ಎಂದು ಕಿಚಾಯಿಸಿದ ಬಸವರಾಜ ಹೊನವಾಡ ಈ ಬಾರಿ ಎಂ‌.ಬಿ. ಪಾಟೀಲ ವಿರುದ್ದ ಸ್ಪರ್ಧೆ ಮತ್ತು ಗೆಲುವು ನಿಶ್ಚಿತ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts