More

    ಬನವಾಸಿಗೆ ಅರೆಬರೆ ಅನುದಾನ

    ರಾಜೇಂದ್ರ ಶಿಂಗನಮನೆ ಶಿರಸಿ

    ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಅಭಿವೃದ್ಧಿಗೆಂದು ರಚನೆಯಾಗಿದ್ದ ಬನವಾಸಿ ಅಭಿವೃದ್ಧಿ ಪ್ರಾಧಿಕಾರವು ನಾಮ್ೇ ವಾಸ್ತೆ ಎಂಬಂತಾಗಿದೆ. ಮಂಜೂರಾದ ಅನುದಾನದಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಬಿಡುಗಡೆಯಾಗದೆ ಅಭಿವೃದ್ಧಿ ನಿಂತ ನೀರಾಗಿದೆ.

    2014ರಲ್ಲಿ ಕದಂಬೋತ್ಸವದ ಉದ್ಘಾಟನೆಗೆ ಬನವಾಸಿಗೆ ಬಂದಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಘೊಷಣೆ ಮಾಡಿದ್ದರು. ಆದರೆ, ಅದಾದ ನಂತರ 2017-18ನೇ ಸಾಲಿನ ಬಜೆಟ್​ನಲ್ಲಿ ಪ್ರಾಧಿಕಾರಕ್ಕೆ 5 ಕೋಟಿ ರೂಪಾಯಿ ಅನುದಾನ ಘೊಷಣೆಯಾಗಿತ್ತು. ಪ್ರಾಧಿಕಾರವು ಅಧಿಕೃತ ಅನುಮೋದನೆ ಪಡೆಯುವಲ್ಲಿ ಆಗಿನ ಶಾಸಕರಾಗಿದ್ದ ಶಿವರಾಮ ಹೆಬ್ಬಾರ ವಿಶೇಷ ಶ್ರಮ ವಹಿಸಿದ್ದರು. ಆದರೆ, ಮಂಜೂರಿಯಾದ 5 ಕೋಟಿ ರೂಪಾಯಿಯಲ್ಲಿ ಈವರೆಗೆ 2.25 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಉಳಿದ 2.75 ಕೋಟಿ ರೂ. ಬಿಡುಗಡೆಯಾಗದೆ ಬಾಕಿಯುಳಿದಿದೆ. ಹೀಗಾಗಿ, ಈಗಾಗಲೇ ಅಂದಾಜು 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಆತಂಕ ಶುರುವಾಗಿದೆ.

    ಅನುದಾನ ಬಿಡುಗಡೆ ಮಾಡಿಸಿ: ಪ್ರಾಥಮಿಕವಾಗಿ ದೊರೆತಿರುವ ಅನುದಾನದಲ್ಲಿ ಧಾರ್ವಿುಕ ಕ್ಷೇತ್ರದ ಪ್ರಮುಖ ರಸ್ತೆಗಳು, ಚರಂಡಿಗಳ ಮರು ನಿರ್ಮಾಣ ಸೇರಿ ಈವರೆಗೆ ಬನವಾಸಿಯ ಪ್ರಮುಖ ಗಲ್ಲಿಯ ರಸ್ತೆಗಳ 17 ಕಾಮಗಾರಿಗಳು ಮುಕ್ತಾಯಗೊಂಡಿವೆ. ಕುಡಿಯುವ ನೀರಿನ ಘಟಕ ಹಾಗೂ ಶೌಚಗೃಹ ನಿರ್ವಣಕ್ಕೆ ಅನುದಾನದ ಅಲಭ್ಯದಿಂದಾಗಿ ಕ್ರಿಯಾಯೋಜನೆ ಸಿದ್ಧ್ದಡಿಸಿಲ್ಲ. ಬಸ್ ನಿಲ್ದಾಣದಿಂದ ರಥಬೀದಿಯವರೆಗೆ ಕಾಂಕ್ರೀಟ್ ರಸ್ತೆ, ಬನವಾಸಿಗೆ ಬರುವ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಸುಸಜ್ಜಿತ ಯಾತ್ರಿ ನಿವಾಸ, ಮಧುಕೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕೆ ಶೌಚಗೃಹ, ಕುಡಿಯುವ ನೀರಿನ ಘಟಕ ನಿರ್ವಣದಂತಹ ಕೆಲಸಗಳು ಆಗಬೇಕಿದೆ.

    100 ಕೋಟಿ ರೂ. ಪ್ರಸ್ತಾವ: ಒಮ್ಮೆ ದೊರೆತಿರುವ ಅನುದಾನ ಹೊರತುಪಡಿಸಿದರೆ, ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ಅನುದಾನ ಬಂದಿಲ್ಲ. ‘ಬನವಾಸಿಯೊಂದು ಬೆರಗು’ ಕಾರ್ಯಕ್ರಮ ಬಿಟ್ಟರೆ ಬೇರೆ ಯಾವ ಚಟುವಟಿಕೆಗಳು ಪ್ರಾಧಿಕಾರದ ವತಿಯಿಂದ ನಡೆದಿಲ್ಲ. ಅಧ್ಯಯನ ಕೇಂದ್ರ ಸ್ಥಾಪನೆ, ಉತ್ಖನನ, ಕದಂಬ ಪ್ರತಿಮೆ ನಿರ್ವಣ, ಗ್ರಂಥಾಲಯ ನಿರ್ವಣ, ವರದಾ ನೀರಿನ ವೈಜ್ಞಾನಿಕ ಸಂಗ್ರಹಣೆ ಹಾಗೂ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಕಚೇರಿ ನಿರ್ವಣ, ಮಯೂರವರ್ಮ ಬಯಲು ರಂಗ ಮಂದಿರ ನಿರ್ವಣ, ಪ್ರವಾಸಿ ತಾಣಗಳ ಮಾಹಿತಿ ಕೇಂದ್ರ ಸ್ಥಾಪನೆ, ಸಭಾಂಗಣ ನಿರ್ವಣ, ಐತಿಹಾಸಿಕ ಥೀಮ್ ಪಾರ್ಕ್ ನಿರ್ಮಾಣ ಸೇರಿ ಜಿಲ್ಲಾಡಳಿತ ಸಲ್ಲಿಸಿದ್ದ 100 ಕೋಟಿ ರೂ. ಪ್ರಸ್ತಾವಕ್ಕೆ ಸರ್ಕಾರ ಅನುದಾನ ನೀಡಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

    ಈಗಾಗಲೇ ಮಂಜೂರಾದ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಸ್ವಲ್ಪ ಆರ್ಥಿಕ ಮುಗ್ಗಟ್ಟು ಎದುರಾದ ಕಾರಣ ವಿಳಂಬವಾಗಿದೆ. 15 ದಿನಗಳಲ್ಲಿ ಬಾಕಿ ಉಳಿದ ಹಣವನ್ನು ಬಿಡುಗಡೆ ಮಾಡಿಸಲು ಕ್ರಮ ವಹಿಸಲಾಗುವುದು. | ಶಿವರಾಮ ಹೆಬ್ಬಾರ ಸಚಿವ

    ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು ಬಿಟ್ಟರೆ ಅನುದಾನ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಮಂಜೂರಿಯಾದ ಹಣದಲ್ಲೂ ಅರ್ಧಕ್ಕಿಂತ ಹೆಚ್ಚು ಅನುದಾನ ಬಿಡುಗಡೆ ಬಾಕಿಯಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕು. ಜತೆಗೆ ಪ್ರಾಧಿಕಾರದ ಕಾರ್ಯದರ್ಶಿಗಳಾಗಿರುವ ಜಿಲ್ಲಾಧಿಕಾರಿಗಳು ಸಹ ಇದರತ್ತ ಹೆಚ್ಚಿನ ಗಮನಹರಿಸಬೇಕು. | ಸಿ.ಎಫ್. ನಾಯ್ಕ ಪ್ರಾಧಿಕಾರದ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts