More

    ಬದುಕಿಗೆ ಬರೆ ಎಳೆದ ನೆರೆ

    ಕಾರವಾರ: ಕಾಳಿ ನದಿಯ ನೆರೆ ಇಳಿದಿದೆ. ಆದರೆ, ಸಂತ್ರಸ್ತರ ದುಸ್ಥಿತಿ ಕಣ್ಣೀರು ತರಿಸುವಂತಿದೆ. ಗೋಡೆ, ಮೇಲ್ಛಾವಣಿ ಬಿದ್ದ ಮನೆಗಳು, ರಾಡಿ ತುಂಬಿದ ಅನ್ನದ ಬಟ್ಟಲು. ಒದ್ದೆ ಮುದ್ದೆಯಾದ ಬಟ್ಟೆಗಳು….ಕಾಳಿ ನೆರೆ ಪೀಡಿತ ಪ್ರದೇಶಗಳಲ್ಲಿ ಓಡಾಡಿದರೆ ಕಾಣುವ ಸಾಮಾನ ದುಸ್ಥಿತಿ ಇದು.

    ತುಂಬಿದ್ದ ನೀರು ಇಳಿಯುತ್ತಿದ್ದಂತೆ ಭಾನುವಾರ ಜನ ತಮ್ಮ ಮನೆಗಳತ್ತ ತೆರಳಿದ್ದಾರೆ. ಒಳಗೆ ನೋಡಿ ದಂಗಾಗಿದ್ದಾರೆ. ಹಾಕಲು ಬಟ್ಟೆಯಿಲ್ಲ. ಅಡುಗೆ ಮಾಡಲು ಅಕ್ಕಿ ಒದ್ದೆಯಾಗಿ ವಾಸನೆ ಬರುತ್ತಿದೆ. ನೆಲದ ಮೇಲೆಲ್ಲ ಅರ್ಧ ಅಡಿ ರಾಡಿ ನಿಂತಿದೆ. ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಹೆಂಚುಗಳು ತೇಲಿ ಹೋಗಿವೆ. ಕಪಾಟು, ಸೋಪಾ ಕುಶನ್ ಎಲ್ಲ ಒದ್ದೆಯಾಗಿ ವಾಸನೆ ಬರುತ್ತಿದೆ. ಕಪಾಟಿನಲ್ಲಿದ್ದ ಬಟ್ಟೆಗಳು ಬಳಕೆಗೆ ಬರದಂತಾಗಿವೆ. ಟಿವಿ, ಫ್ರಿಜ್, ಫ್ಯಾನ್, ಮಿಕ್ಸರ್, ಬೈಕ್ ಎಲ್ಲ ನೀರು ಹೊಕ್ಕು ಹಾಳಾಗಿದೆ. ಅಡುಗೆ ಸಾಮಗ್ರಿಗಳೆಲ್ಲ ಒದ್ದೆಯಾಗಿವೆ. ಒಟ್ಟಿನಲ್ಲಿ ಹತ್ತಾರು ವರ್ಷಗೂಡಿ ಹಣ ಕೂಡಿಹಾಕಿ ಕೊಂಡಿದ್ದ ಸಾಮಗ್ರಿ ಹಾಳಾಗಿವೆ. ವಿದ್ಯುತ್ ಸಂಪರ್ಕ ಇನ್ನೂ ಬಂದಿಲ್ಲ. ಕುಡಿಯಲು ನೀರೂ ಸಮರ್ಪಕವಾಗಿಲ್ಲ. ಒಟ್ಟಿನಲ್ಲಿ ಏನು ಮಾಡಬೇಕೆಂದು ತಿಳಿಯದೇ ದಿಕ್ಕು ತೋಚದಂತಾಗಿದ್ದಾರೆ.

    ‘ಎರಡು ವರ್ಷದ ಹಿಂದೆ ನೆರೆ ಬಂದಿತ್ರಿ, ಮನೆಯಲ್ಲಿನ ಸಾಮಾನೆಲ್ಲ ಹಾಳಾಗ್ಹೋಗಿತ್ತು. ಗೋಡೆ ಬಿದ್ದಿತ್ತು. ಪರಿಹಾರಕ್ಕಾಗಿ ಎಂಟು ಬಾರಿ ಕಾರವಾರಕ್ಕೆ ಅಲೆದು ಸೋತೆ. ನಯಾ ಪೈಸೆ ಸಿಕ್ಕಿಲ್ಲ. ಕಳೆದ ವರ್ಷ ಕರೊನಾ ಬಂದು ಕೆಲಸ ಇಲ್ಲದಾಯ್ತು. ಮಕ್ಕಳಿಗೆ ಕಲಿಸೋಣ ಎಂದು ಒಟ್ಟಾಕಿಟ್ಟ ದುಡ್ಡೆಲ್ಲ ಖರ್ಚು ಮಾಡಿ ಮನೆ ರಿಪೇರಿ ಮಾಡಿಸಿದೆ. ಎರಡು ಮಕ್ಕಳು, ಅರಾಮಿಲ್ಲದ ತಂದೆ ತಾಯಿ. ಈ ಬಾರಿ ಮತ್ತೆ ಬಿದ್ದು ಹೋಯ್ತು’ ಎಂದು ಕಣ್ಣೀರು ಹಾಕುತ್ತಾರೆ ಕದ್ರಾ ಲೇಬರ್ ಕಾಲನಿಯ ಗಣೇಶ. ಇಂಥ ಅದೆಷ್ಟೋ ಗೋಳಿನ ಕತೆಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಕದ್ರಾ ರಾಜೀವ ನಗರ, ಮಲ್ಲಾಪುರದ ಗಾಂಧಿ ನಗರ, ಕುರ್ನಿಪೇಟೆ, ಹಿಂದುವಾಡ, ಕ್ರಿಶ್ಚಿಯನ್​ವಾಡ, ಬೋಳ್ವೆ, ಇರ್ಪಾಗೆ, ಹಳಗಾ ಧೋಲ್, ಕಾತ್ನೆ, ಹಣಕೋಣ ಜೂಗ, ಖಾರ್ಗೆಜೂಗ, ಬೋಡಜೂಗ, ಅಂಬೆಜೂಗ, ಉಮ್ಮಳೆಜೂಗ, ಸಿದ್ದರ, ಕಿನ್ನರ ಭಾಗದ ಹೆಚ್ಚಿನ ಮನೆಗಳ ಪರಿಸ್ಥಿತಿ ಇದೇ ಆಗಿದೆ.

    ಕದ್ರಾ ಮಾರುಕಟ್ಟೆಯ ಐದಕ್ಕೂ ಹೆಚ್ಚು ಅಂಗಡಿಗಳು ಸಂಪೂರ್ಣ ನೆಲಸಮವಾಗಿದೆ. ನದಿಯ ನೀರಿನ ಜತೆ ಬಂದ ಕಟ್ಟಿಗೆ ತುಂಡು ಹೊಡೆದು ಮನೆಗಳ ಗೋಡೆ ಕಿತ್ತಿವೆ. ಕಿಟಕಿ ಬಾಗಿಲುಗಳು ಒಡೆದಿವೆ. ಕದ್ರಾ, ಮಲ್ಲಾಪುರದ ಕುರ್ನಿಪೇಟೆ ಸೇರಿ ವಿವಿಧೆಡೆ ಅಂಗಡಿಗಳಲ್ಲಿ ಇಟ್ಟ ಸಾಮಗ್ರಿಗಳಲ್ಲಿ ಸಂಪೂರ್ಣ ರಾಡಿ ತುಂಬಿಕೊಂಡಿದೆ. ಗ್ಯಾರೇಜ್, ಜೆರಾಕ್ಸ್ ಅಂಗಡಿಗಳ ಯಂತ್ರಗಳು ಹಾಳಾಗಿವೆ. ಕದ್ರಾ ಲೇಬರ್ ಕಾಲನಿಯಲ್ಲಿ 10 ಕ್ಕೂ ಅಧಿಕ, ಗಾಂಧಿನಗರದಲ್ಲಿ 20 ಮನೆಗಳು ಬಿದ್ದಿವೆ.

    ಕಾಳಜಿ ಕೇಂದ್ರದಲ್ಲಿ ಪೊಲೀಸ್ ಕುಟುಂಬಗಳು

    ಅಪಾಯದಲ್ಲಿ ಸಿಲುಕಿದ ಜನರ ರಕ್ಷಣೆಗಾಗಿ ಅವರು ವಿವಿಧೆಡೆ ತೆರಳಿದ್ದರು. ಆದರೆ, ಅವರ ಕುಟುಂಬವನ್ನೇ ರಕ್ಷಿಸುವವರಿರಲಿಲ್ಲ. ಇದು ಮಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ದುಸ್ಥಿತಿ. ಪೊಲೀಸ್ ಸಿಬ್ಬಂದಿ ಹಾಗೂ ಸಿಐಎಸ್​ಎಫ್ ಸಿಬ್ಬಂದಿ ವಾಸವಿದ್ದ ಮಲ್ಲಾಪುರ ಪಿ ಆಂಡ್ ಟಿ ಕ್ವಾರ್ಟರ್ಸ್​ನಲ್ಲಿ ನೀರು ತುಂಬಿದ್ದು, ಅವರ ಕುಟುಂಬದವರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪೊಲೀಸ್ ಠಾಣೆಯೂ ಸಂಪೂರ್ಣ ಮುಳುಗಿದ್ದು, ಭಾನುವಾರ ಅದನ್ನು ಸ್ವಚ್ಛ ಮಾಡಲಾಯಿತು.

    ನಾನು ಮತ್ತೊಬ್ಬರ ಮನೆ ಕೆಲಸ ಮಾಡಿ, ಸಣ್ಣ ಅಂಗಡಿ ಇಟ್ಟು ಜೀವನ ನಡೆಸುತ್ತಿದ್ದೇನೆ. 2019 ರಲ್ಲಿಯೂ ನಮ್ಮ ಮನೆಗೆ ನೀರು ತುಂಬಿತ್ತು. ರಿಪೇರಿ ಮಾಡಿಸಿದ್ದೆವು. ಈ ಬಾರಿ ಸಂಪೂರ್ಣ ಬಿದ್ದು ಹೋಗಿದೆ. ಬದುಕು ತುಂಬಾ ಕಷ್ಟವಾಗಿದೆ.

    ಗ್ರೇಸಿ ಎಂ. ಸ್ವಾಮಿ ಕದ್ರಾ ಸಂತ್ರಸ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts