More

    ಬದಲಾವಣೆಗೆ ಸಾಕ್ಷಿಯಾಗಲಿದೆ ಎನ್‌ಇಪಿ – ಸಿ.ಎನ್. ಅಶ್ವತ್ಥನಾರಾಯಣ

    ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದಲ್ಲಿ ಮುಂದೆ ದೊಡ್ಡ ಬದಲಾವಣೆ ಆಗಲಿವೆ. ಉತ್ಕೃಷ್ಟ ತಂತ್ರಜ್ಞಾನ, ಆವಿಷ್ಕಾರಗಳು ಹೊರಹೊಮ್ಮಿ ಗುಣಮಟ್ಟದ ಶಿಕ್ಷಣಕ್ಕೆ ನಾಂದಿಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಲಘು ಉದ್ಯೋಗ ಭಾರತ ಕರ್ನಾಟಕ, ಐಎಂಎಸ್ ಫೌಂಡೇಶನ್ ಆಶ್ರಯದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಟೆಕ್ ಭಾರತ’ 3ನೇ ಹಂತದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕಕ್ಕೆ ಉಜ್ವಲ ಭವಿಷ್ಯ ಇದೆ. ಇಲ್ಲಿ ಒಳ್ಳೆಯ ತಂತ್ರಜ್ಞಾನ, ಭೂಮಿಯೂ ಇದೆ. ಈ ತಂತ್ರಜ್ಞಾನವನ್ನು ಗ್ರಾಮಗಳಿಗೆ ತೆಗೆದುಕೊಂಡು ಹೋಗಿ ಜನರ ವರಮಾನ ಹೆಚ್ಚಿಸಬೇಕಾಗಿದೆ ಎಂದರು.

    ತಂತ್ರಜ್ಞಾನದ ಸದ್ಬಳಕೆಯಾಗಲಿ: ಪ್ರಸ್ತುತ ಅನೇಕ ಸಂಶೋಧನೆಗಳು ವಿಶ್ವವಿದ್ಯಾಲಯದಲ್ಲಿ ಆಗುತ್ತಿದ್ದರೂ ಅದರ ಲಾಭ ಬಹಳಷ್ಟು ರೈತರಿಗೆ ಮುಟ್ಟಿಲ್ಲ. ಸಂಶೋಧಕರು, ಅನ್ವೇಷಕರು ಹೊಲಕ್ಕೆ ಹೋಗಿ ತರಬೇತಿ ಕೊಟ್ಟರೆ ರೈತರು ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಡೀ ದೇಶದಲ್ಲಿ ಕರ್ನಾಟಕ ಮಾಹಿತಿ-ತಂತ್ರಜ್ಞಾನ, ಕೃಷಿ ಆಧರಿತ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ತಂತ್ರಜ್ಞಾನದ ಸದ್ಬಳಕೆಯಾಗಿ ರೈತರ ಕೃಷಿ ಆದಾಯ ದ್ವಿಗುಣಗೊಳಿಸಬೇಕಾಗಿದೆ. ಕೈಗಾರಿಕೆ, ಕೃಷಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಸವಾಲುಗಳನ್ನು ತಂತ್ರಜ್ಞಾನದ ಸಹಾಯದಿಂದ ರೈತರು ಬೆರಳು ತುದಿಯಲ್ಲಿ ನಿವಾರಿಸಿಕೊಳ್ಳಬಹುದು ಎಂದರು.

    ಲಘು ಉದ್ಯೋಗ ಭಾರತಿ ಕರ್ನಾಟಕದ ಅಧ್ಯಕ್ಷ ಸಚಿನ ಸಬನೀಸ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವಾರು ಯೋಜನೆ, ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಕರ್ನಾಟಕದ 24 ಜಿಲ್ಲೆಗಳಲ್ಲಿ ಸಂಸ್ಥೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿದೆ. ಗ್ರಾಮೀಣ ಜನರ ವರಮಾನ ಹೆಚ್ಚಿಸುವುದಕ್ಕೆ ನೆರವಾಗಿದೆ. ರೈತರ ಹಾಗೂ ನವೋದ್ಯಮಿಗಳ ವ್ಯಾಪಾರ-ವಹಿವಾಟಿಗೆ ಮಾರ್ಗದರ್ಶನ, ಬೆಂಬಲ ನೀಡುತ್ತಿದೆ ಎಂದರು.

    ಶಾಸಕ ಅಭಯ ಪಾಟೀಲ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಕರಿಸಿದ್ದಪ್ಪ, ಎಸ್‌ಟಿಪಿಐ ಮಾಜಿ ನಿರ್ದೇಶಕ ಡಾ. ಬಿ.ವಿ. ನಾಯ್ಡು, ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ. ಛಟ್ಟಿ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ವಿವಿ ಕುಲಪತಿ ಡಾ.ವಿಷ್ಣುಕಾಂತ ಚಟಪಲ್ಲಿ, ಲಘು ಉದ್ಯೋಗ ಭಾರತ ಕರ್ನಾಟಕದ ಕಾರ್ಯದರ್ಶಿ ಶ್ರೀಧರ ಉಪ್ಪಿನ ವೇದಿಕೆಯಲ್ಲಿದ್ದರು. ನವೀನ ಲಕ್ಕೂರು ನಿರೂಪಿಸಿದರು. ದಯಾನಂದ ಎಲ್. ಸ್ವಾಗತಿಸಿ, ವಂದಿಸಿದರು.

    ಕೃಷಿ ಉಪಕರಣ, ಉತ್ಪನ್ನ ಪ್ರದರ್ಶನ ಕಾರ್ಯಕ್ರಮಕ್ಕೂ ಮುನ್ನ ವಿವಿ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಅತ್ಯಾಧುನಿಕ ಉಪಕರಣಗಳ ಪ್ರದರ್ಶನವನ್ನು ಸಚಿವರು ಉದ್ಘಾಟಿಸಿದರು. ಪ್ರದರ್ಶನದಲ್ಲಿ ಸೂರ್ಯನಿರ್ಭರ ಅಗ್ರಿಟೆಕ್, ಅಕ್ವಾ ಬಯೋ ಸೊಲ್ಯೂಷನ್ಸ್, ಕಿಸಾನ್ ಕನೆಕ್ಟ್ ಎಲ್‌ಎಲ್‌ಪಿ, ಸ್ಮಾರ್ಟ್ ಸಂಪರ್ಕ್, ದಿ ಎಜಿ ಸನೆಸಸ್, ವಿಕಾಸ ಬಂಧು, ಸಿಲ್ವರ್ ಸ್ಪೂನ್ ಎಂಟರ್‌ಪ್ರೈಸಸ್ ಸೇರಿ 40ಕ್ಕೂ ಹೆಚ್ಚು ಕಂಪನಿಗಳ ಕೃಷಿ ಉಪಕರಣಗಳು ಹಾಗೂ ಉತ್ಪನ್ನಗಳು ಪ್ರದರ್ಶನಗೊಂಡವು.ತರಬೇತಿ ಅಗತ್ಯ
    ಹಳ್ಳಿಗಳಲ್ಲಿನ ಕೃಷಿಕರಿಗೆ ತಂತ್ರಜ್ಞಾನ ಆಧಾರಿತ ತರಬೇತಿ ಅಗತ್ಯವಿದೆ.

    ಗ್ರಾಮೀಣದಲ್ಲಿರುವ ಶೇ.60 ಜನ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಕೇವಲ ಶೇ.15 ಮಾತ್ರ ಜಿಡಿಪಿ ಇದೆ. ಇದು ಹೆಚ್ಚಾಗಬೇಕು. ಹಳ್ಳಿಗಳಲ್ಲಿ ಗುಡಿ ಕೈಗಾರಿಕೆ ಬೆಳೆಯುವಂತಾಗಬೇಕು. ರೈತರು ಕೇವಲ ಬೆಳೆ ಬೆಳೆಯುವುದು ಮಾತ್ರವಲ್ಲದೆ, ಬೆಳೆ ನಿರ್ವಹಣೆ, ಮಾರುಕಟ್ಟೆ, ಸರಿಯಾದ ಸಮಯದಲ್ಲಿ ಗ್ರಾಹಕರಿಗೆ ಮಾರುವ ಕಲೆ ಕರಗತ ಮಾಡಿಕೊಳ್ಳಬೇಕಾಗಿದೆ. ಈ ಕಾರ್ಯಗಳಿಗೆ ಕೈಗಾರಿಕೋದ್ಯಮಿಗಳು, ಸಹಕಾರಿ ಕ್ಷೇತ್ರದ ಸಂಘಗಳು ಸಹಕರಿಸಬೇಕು ಎಂದು ಅಶ್ವತ್ಥನಾರಾಯಣ ತಿಳಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts