More

    ಬತ್ತಿದ್ದ ಬೋರ್‌ವೆಲ್‌ಗಳಲ್ಲಿ ಉಕ್ಕುತ್ತಿದೆ ನೀರು

    ರಕಲಗೂಡು: ಒಂದು ಕಾಲಕ್ಕೆ ಬರಗಾಲದ ಭೀತಿ ಆವರಿಸಿ ಬರಡು ಭೂಮಿಯಂತಿದ್ದ ತಾಲೂಕಿನ ದೊಡ್ಡಮಗ್ಗೆ ಹೋಬಳಿ ಭಾಗದಲ್ಲಿ ಇದೀಗ ಎಡಬಿಡದೆ ಸುರಿದ ಮಳೆ ಪರಿಣಾಮ ಬತ್ತಿದ್ದ ಬೋರ್‌ವೆಲ್‌ಗಳಲ್ಲಿ ಜಲಧಾರೆ ಉಕ್ಕುತ್ತಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ.
    ತಾಲೂಕಿನಲ್ಲಿ ದಕ್ಷಿಣಕ್ಕೆ ಜೀವನದಿ ಕಾವೇರಿ ಮತ್ತು ಉತ್ತರಕ್ಕೆ ಹೇಮಾವತಿ ಹೊಳೆ ಹರಿದರೂ ರೈತರ ಬೇಸಾಯದ ಜಮೀನುಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿವೆ. ಹೀಗಾಗಿ ದೊಡ್ಡಮಗ್ಗೆ ಹೋಬಳಿ ಭಾಗದಲ್ಲಿ ಅನ್ನದಾತರು ಹನಿ ನೀರಿಗೂ ಪರದಾಡುವ ಸ್ಥಿತಿ ಇದೆ. ಇದರಿಂದ ಬಿತ್ತಿದ ಬೆಳೆಗಳು ನೀರಿಲ್ಲದೆ ಒಣಗಿ ರೈತರು ಸಂಕಷ್ಟ ಅನುಭವಿಸುವುದು ಅವ್ಯಾಹತವಾಗಿತ್ತು. ಇದೀಗ ಸುಮಾರು 10 ವಷರ್ಗಳ ಹಿಂದೆ ಬೋರ್‌ವೆಲ್ ಕೊರೆಸುವಾಗ ನೀರು ಸಿಗದೆ ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ಜಲಧಾರೆ ಉಕ್ಕಿ ಹರಿಯುತ್ತಿದ್ದು, ವಿಸ್ಮಯಕ್ಕೆ ಕಾರಣವಾಗಿದೆ.
    ಹೌದು, ದೊಡ್ಡಮಗ್ಗೆ ಹೋಬಳಿ ದುಮ್ಮಿ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ರೈತರಾದ ಅಣ್ಣಾಜಿ, ಕೀರ್ತಿ, ರವಿ ಎಂಬುವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. ದುರಾದೃಷ್ಟವಶಾತ್ ನೀರು ಸಿಗದೆ ವಿಫಲವಾಗಿತ್ತು. ಗ್ರಾಮಸ್ಥರ ಸಲಹೆಯ ಮೇರೆಗೆ ಬೋರ್‌ಗೆ ಅಳವಡಿಸಿದ್ದ ಕೇಸಿಂಗ್ ಪೈಪ್ ಕಿತ್ತು ಹಾಕದೆ, ಮುಚ್ಚಳ ಮುಚ್ಚಿ ಬಂದೋಬಸ್ತ್ ಮಾಡಿ ಕೈಚೆಲ್ಲಿದ್ದರು.
    ಆದರೆ, ಇದೀಗ ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತ್ತಿದೆ. ಇತ್ತೀಚೆಗೆ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪಂಪು, ಮೋಟಾರ್ ಇಲ್ಲದೆ ಕೇವಲ ಕೊಳವೆ ಬಾವಿಗೆ ಹಾಕಿಸಿದ್ದ ಕೇಸಿಂಗ್ ಪೈಪ್ ಮೂಲಕವೇ ಜಲಧಾರೆ ಗಗನಕ್ಕೆ ಚಿಮ್ಮುತ್ತಿದೆ. ಈ ದೃಶ್ಯ ಜನರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಬತ್ತಿ ಹೋಗಿದ್ದ ಕೊಳವೆ ಬಾವಿಗೆ ಮರು ಜೀವ ಬಂದಂತಾಗಿದ್ದು, ರೈತನ ಮೊಗದಲ್ಲೂ ಮಂದಹಾಸ ಮೂಡಿದೆ. ಬೋರ್‌ನಲ್ಲಿ ಮೋಟಾರ್ ಅಳವಡಿಸದೆ ಸ್ವಯಂಪ್ರೇರಿತವಾಗಿ ನೀರು ಹರಿಯುತ್ತಿರುವುದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ.
    ಈಗಾಗಲೇ ತಾಲೂಕಿನ ಸಾಕಷ್ಟು ಕಡೆ ನಿಂತು ಹೋಗಿದ್ದ ಬೋರ್‌ವೆಲ್ ಪೈಪ್‌ಗಳಲ್ಲಿ ಮತ್ತೆ ನೀರು ಕಾಣಿಸಿಕೊಂಡಿದೆ. ಸದ್ಯ ಈಗ ತಾಲೂಕಿನಾದ್ಯಾಂತ ಉತ್ತಮ ಮಳೆಯಾಗುತ್ತಿದ್ದು, ಈಗ ನೀರಿನ ಮೂಲಗಳು ಮತ್ತೆ ಜೀವ ಪಡೆದುಕೊಂಡಿವೆ. ಒಂದು ಕಡೆ ಅಧಿಕ ಮಳೆಯಿಂದ ರೈತರಿಗೆ ಸಾಕಷ್ಟು ತೊಂದರೆಗಳು ಒದಗಿ ಬಂದಿದ್ದರೆ, ಮತ್ತೊಂದು ಕಡೆ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಕಾಣಿಸಿಕೊಳ್ಳುತ್ತಿರುವುದು ರೈತರ ಮೊಗದಲ್ಲಿ ಸಂತಸ ಇಮ್ಮಡಿಗೊಳಿಸಿದೆ.
    ಈ ಭಾಗದ ತಾಲೂಕಿನಲ್ಲಿ ಬಹುತೇಕ ರೈತರು ನೀರನ್ನು ಆಧಾರಿಸಿ ಕೃಷಿ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈಗ ಮಳೆರಾಯನ ಕೃಪೆಯಿಂದ ಮತ್ತಷ್ಟು ಜಮೀನುಗಳಲ್ಲಿ ಬೆಳೆ ಬೆಳೆಯಲು ಅನುಕೂಲಕರವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

    (ಹೇಳಿಕೆ)
    ದೊಡ್ಡಮಗ್ಗೆ ಹೋಬಳಿ ಭಾಗದಲ್ಲಿ ನೀರಾವರಿ ಸೌಲಭ್ಯ ಅಷ್ಟಕ್ಕಷ್ಟೆ, ಮಳೆಯನ್ನೇ ನೆಚ್ಚಿಕೊಂಡು ವ್ಯವಸಾಯ ಮಾಡಬೇಕಾಗಿದೆ. ಮಳೆ ಬಂದರಷ್ಟೆ ಕೆರೆ-ಕಟ್ಟೆಗಳು ತುಂಬುತ್ತವೆ. ಇಷ್ಟು ವರ್ಷ ನೀರಿನ ಮೂಲ ಸಿಗದೆ ಕೊರೆಸಿದ ಬೋರ್‌ವೆಲ್‌ಗಳು ವಿಫಲವಾಗಿದ್ದವು. ಇದೀಗ ಬಿರುಸಿನ ಮಳೆಯಿಂದಾಗಿ ಬೋರ್‌ವೆಲ್‌ಗಳಲ್ಲಿ ನೀರು ಉಕ್ಕುತ್ತಿದ್ದು ಸಂತಸ ತಂದಿದೆ.
    ರವಿಕುಮಾರ್, ದುಮ್ಮಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts