More

    ಬಡವರ ಪಾಲಿನ ಸಂಜೀವಿನಿ

    ರೋಣ: ರೋಗಿಗಳ ಪಾಲಿಗೆ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆಯುರ್ವೆದ ಆಸ್ಪತ್ರೆ ಸಂಜೀವಿನಿಯಾಗಿದೆ. ಇರುವ ಸೌಲಭ್ಯಗಳನ್ನೇ ಸದುಪಯೋಗ ಮಾಡಿಕೊಂಡ ಇಲ್ಲಿನ ವೈದ್ಯರ ತಂಡ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ.

    ಇಟಗಿಯ ‘ಆಯುರ್ವೆದ ಕ್ಷೇಮ ಕೇಂದ್ರ’ ಹಲವು ವಿಶೇಷ ಸೌಲಭ್ಯಗಳನ್ನು ಒಳಗೊಂಡಿದೆ. ಹೀಗಾಗಿ ಸುತ್ತಲಿನ ಹತ್ತಾರು ಹಳ್ಳಿಗಳಷ್ಟೇ ಅಲ್ಲದೆ, ಕುಷ್ಟಗಿ, ಯಲಬುರ್ಗಾ, ಬದಾಮಿ ತಾಲೂಕಿನ ಹಲವಾರು ಗ್ರಾಮಗಳ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ನಿತ್ಯವೂ ಸುಮಾರು 45-50 ಜನ ಬರುತ್ತಾರೆ.

    ಈ ಆಸ್ಪತ್ರೆಯಲ್ಲಿ ಮುಖ್ಯವಾಗಿ ಮಂಡಿ ನೋವು, ಕಂಪವಾತ (ನಡುಗುವುದು), ತಲೆ ನೋವು, ಕತ್ತು ನೋವು, ಚರ್ಮ ರೋಗ, ದಮ್ಮು, ಕೆಮ್ಮು, ನೆಗಡಿ, ಅಲರ್ಜಿ ಸೇರಿದಂತೆ ಇತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸ್ಟೀಮ್ ಬಾತ್, ಪಂಚಕರ್ಮ ಚಿಕಿತ್ಸೆ, ವಮನ, ವಿರೇಚನ, ಬಸ್ತಿ, ರಕ್ತಮೋಕ್ಷಣ, ಪಾರ್ಶ್ವವಾಯು ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಕೆಲ ವರ್ಷಗಳ ಹಿಂದೆ ನಾಮ್ ಕೇ ವಾಸ್ತೆ ಎನ್ನುವಂತಿದ್ದ ಆಸ್ಪತ್ರೆಗೆ ವೈದ್ಯಾಧಿಕಾರಿಯಾಗಿ ಡಾ. ಎಂ.ಎ. ಹಾದಿಮನಿ ಅವರು ಬಂದ ನಂತರ ಜೀವಕಳೆ ಬಂದಿದೆ. ವೈದ್ಯರು, ಇತರ ಸಿಬ್ಬಂದಿ ಸೇರಿ ಆರು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುತ್ತಿದ್ದ ಜನ ಕಾಯಿಲೆ ಕಸಾಲೆ ಎದುರಾದರೆ ಇಲ್ಲಿಗೆ ಬಂದು ಗುಣಮುಖರಾಗುತ್ತಿದ್ದಾರೆ.

    ಆಸ್ಪತ್ರೆ ಆವರಣದಲ್ಲೇ ಮದ್ದು: ಆಸ್ಪತ್ರೆಯ ಆವರಣದ ಖಾಲಿ ಜಾಗವನ್ನು ಸದುಪಯೋಗ ಮಾಡಿಕೊಂಡ ವೈದ್ಯರ ತಂಡ ಹತ್ತಾರು ಔಷಧೀಯ ಗಿಡಗಳನ್ನು ಬೆಳೆಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ನುಗ್ಗೆ ಗಿಡ, ಆಲದ ಮರ, ಅರಳಿ ಮರ, ಅಮೃತ ಬಳ್ಳಿ, ಬಸಳಿ, ಒಂದೆಲಗ, ನೇರಳೆ ಹಣ್ಣಿನ ಗಿಡ, ತೆಂಗಿನ ಗಿಡ, ಬೇವು, ಹೆಬ್ಬೇವು, ಬಿಲ್ವ ಪತ್ರೆ, ಕರಿಬೇವು, ಹಾಗಲ ಬಳ್ಳಿ, ದಾಸವಾಳ, ತುಳಸಿ ಸೇರಿದಂತೆ ಹಲವು ಬಗೆಯ ಗಿಡಗಳನ್ನು ಬೆಳೆಸಲಾಗಿದೆ.

    ಪಾರ್ಶ್ವವಾಯು ಪೀಡಿತನಾಗಿರುವ ನನಗೆ ಲಕ್ಷಾಂತರ ರೂ. ಖರ್ಚು ಮಾಡಿ ದೂರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಶಕ್ತಿ ಇಲ್ಲ. ಆದರೆ, ಇಟಗಿಯಲ್ಲಿರುವ ಆಯುರ್ವೆದ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಕ್ಕಿದ್ದರಿಂದ ಗುಣವಾಗಿದ್ದೇನೆ. ಒಂದು ತಿಂಗಳ ಹಿಂದೆ ಒಂದು ಹೆಜ್ಜೆ ಮುಂದಿಡಲು ಆಗುತ್ತಿರಲಿಲ್ಲ. ಈಗ ಆರಾಮಾಗಿ ಮನೆಯಿಂದ ಆಸ್ಪತ್ರೆವರೆಗೆ ನಡೆದುಕೊಂಡು ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ.
    | ರಂಗಣ್ಣ ಶಿಂಘಿ, ಇಟಗಿ ಗ್ರಾಮದ ನಿವಾಸಿ

    ಆಯುರ್ವೆದ ವೈದ್ಯ ಪದ್ಧತಿಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ಹಲವಾರು ಜನ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ನಮ್ಮ ಆಸ್ಪತ್ರೆ ಸುತ್ತಲೂ ಎರಡು ಎಕರೆ ವಿಶಾಲವಾದ ಜಾಗವಿದ್ದು ಔಷಧಿ ವನ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು.
    | ಡಾ. ಎಂ.ಎ. ಹಾದಿಮನವಿ, ಆಯುರ್ವೆದ ಆಸ್ಪತ್ರೆ ವೈದ್ಯಾಧಿಕಾರಿ,

    ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೇ ಜಾಸ್ತಿ. ಅಂಥದ್ದರಲ್ಲಿ ನಮ್ಮ ಗ್ರಾಮದ ಸರ್ಕಾರಿ ಆಯುರ್ವೆದ ಆಸ್ಪತ್ರೆ ಮಾದರಿಯಾಗಿದೆ. ನಮ್ಮ ತಾಲೂಕು ಪಂಚಾಯಿತಿಯಿಂದ ಹೆಚ್ಚಿನ ಅನುದಾನ ಕೊಡಿಸುವ ಮೂಲಕ ಜಿಲ್ಲೆಯಲ್ಲಿಯೇ ಸುಸಜ್ಜಿತ ಆಸ್ಪತ್ರೆ ಮಾಡುವ ಆಲೋಚನೆಯಿದೆ. | ಪ್ರಭು ಮೇಟಿ, ಇಟಗಿ ತಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts