More

    ಬಡವರಿಗೆ ಬೆಳಕು ‘ಅಮೃತ ಜ್ಯೋತಿ’

    ಬೆಳಗಾವಿ: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಸರ್ಕಾರ ಜಾರಿಗೆ ತಂದಿರುವ ಮಾಸಿಕ 75 ಯೂನಿಟ್‌ವರೆಗಿನ ಉಚಿತ ವಿದ್ಯುತ್ ಪೂರೈಸುವ ‘ಅಮೃತ ಜ್ಯೋತಿ’ ಯೋಜನೆ ಬಡವರಿಗೆ ಬೆಳಕಾಗುತ್ತಿದೆ.

    ಕಳೆದ ವರ್ಷ ಆಗಸ್ಟ್ 1ರಂದು ಸರ್ಕಾರ ಯೋಜನೆ ಘೋಷಿಸಿತ್ತು. ಸದ್ಯ ಜಿಲ್ಲೆಯಲ್ಲಿ 7,702 ಕುಟುಂಬ ಈ ಯೋಜನೆಯ ಲಾಭ ಪಡೆಯುತ್ತಿದ್ದು, ‘ಅಮೃತ ಜ್ಯೋತಿ’ ಇವರ ಬಾಳಲ್ಲಿ ಬೆಳಕಾಗಿದೆ. ಈ ಯೋಜನೆಯ ಅನುಷ್ಠಾನದ ಬಗ್ಗೆ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಹ ಫಲಾನುಭವಿಗಳನ್ನು ನೋಂದಾಯಿಸುವ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ ಜಿಲ್ಲಾದ್ಯಂತ 72,270 ಕುಟುಂಬ ನೋಂದಣಿ ಮಾಡಿಕೊಂಡಿವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಂದ ‘ಬಡತನ ರೇಖೆಗಿಂತ ಕೆಳಗಿರುವವರ’ ಮಾಹಿತಿಯನ್ನು ಹೆಸ್ಕಾಂ ಅಧಿಕಾರಿಗಳು ಪಡೆದಿದ್ದಾರೆ. ಇದರಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ 2023ರ ಅಕ್ಟೋಬರ್ ಅಂತ್ಯದವರೆಗೆ 7,702 ಕುಟುಂಬ ಗಳನ್ನು ಆಯ್ಕೆ ಮಾಡಿದ್ದು, ಯೋಜನೆ ಲಾಭ ವಡೆಯುತ್ತಿವೆ.

    2,15,345 ಕುಟುಂಬಗಳ ನೋಂದಣಿ: ಅಲ್ಲದೆ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಈಗಾಗಲೇ 2,15, 345 ಕುಟುಂಬ ನೋಂದಣಿ ಮಾಡಿಕೊಂಡಿವೆ. ಅದರಲ್ಲಿ ಧಾರವಾಡ ಜಿಲ್ಲೆಯಲ್ಲಿ 18,518 ಕುಟುಂಬ ಯೋಜನೆ ಲಾಭ ಪಡೆಯುವುದಕ್ಕೆ ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿವೆ. ಗದಗ ಜಿಲ್ಲೆಯಲ್ಲಿ 18,036, ಹಾವೇರಿ ಜಿಲ್ಲೆಯಲ್ಲಿ 30,326, ಉತ್ತರ ಕನ್ನಡ ಜಿಲ್ಲೆ 15,729, ಬಾಗಲಕೋಟೆ ಜಿಲ್ಲೆ 34,503, ವಿಜಯಪುರ ಜಿಲ್ಲೆಯಲ್ಲಿ 25, 963 ಕುಟುಂಬ ಯೋಜನೆ ಲಾಭ ಪಡೆಯುವುದಕ್ಕೆ ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಹೆಸ್ಕಾಂ ಅಧಿಕಾರಿಗಳು ಅರ್ಜಿ ಪರಿಶೀಲಿಸಿ ಸರ್ವೇ ಮಾಡಿದ ಬಳಿಕ ಅಂತಿಮವಾಗಿ ಆಯ್ಕೆ ಮಾಡಲಿದ್ದಾರೆ.

    75 ಯೂನಿಟ್ ಉಚಿತ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಪ್ರತಿ ಮೀಟರ್‌ಗಳಿಗೆ ತಲಾ 75 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಮೊದಲು ಫಲಾನುಭವಿಗಳು ಶುಲ್ಕ ಕಟ್ಟಬೇಕು. ಬಳಿಕ ಸರ್ಕಾರ ಹೆಸ್ಕಾಂನಿಂದ ಇಂತಹ ಫಲಾನುಭವಿಗಳ ಪಟ್ಟಿ ಪಡೆದು ನೇರವಾಗಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಮರುಪಾವತಿಸಲಾಗುತ್ತಿದೆ.

    ಗ್ರಾಹಕರು ಈ ಸೌಲಭ್ಯ ಪಡೆಯಲು ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರದ ದೃಢೀಕೃತ ದಾಖಲೆ ಒದಗಿಸುವುದು ಕಡ್ಡಾಯ. ಈ ಸೌಲಭ್ಯಕ್ಕೆ ಅರ್ಹರಾಗುವ ಈ ಪ್ರವರ್ಗದ ವಿದ್ಯುತ್ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ನಿಗದಿತ ಅವಧಿಯೊಳಗೆ ಪಾವತಿಸಿದ ನಂತರ ಅವರಿಗೆ ಸರ್ಕಾರದ ಹಣ ಮರು ಪಾವತಿ ಆಗಲಿದೆ. ಗ್ರಾಹಕರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ಸಂಬಂಧಿಸಿದ ಇತರ ಮಾಹಿತಿ ಒದಗಿಸಬೇಕು. ಈ ಪ್ರವರ್ಗದ ವಿದ್ಯುತ್ ಗ್ರಾಹಕರು 2022ರ ಏ.30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣ ಪಾವತಿಸಿದ್ದಲ್ಲಿ ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

    25,574 ಕುಟುಂಬ ಆಯ್ಕೆ

    ಈ ವರ್ಷದ ಅಕ್ಟೋಬರ್ ತಿಂಗಳ ಅಂತ್ಯದವರೆಗೆ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳು ಒಳಗೊಂಡಂತೆ ಒಟ್ಟು 25,574 ಅರ್ಹ ಕುಟುಂಬ ಆಯ್ಕೆಯಾಗಿದ್ದು, ಯೋಜನೆ ಲಾಭ ಪಡೆಯುತ್ತಿವೆ. ಈ ಪೈಕಿ ಧಾರವಾಡ ಜಿಲ್ಲೆ 3,511, ಗದಗ 1,878, ಹಾವೇರಿ 2,378, ಉತ್ತರ ಕನ್ನಡ 3,496, ಬೆಳಗಾವಿ 7,702, ಬಾಗಲಕೋಟೆ 3,736, ವಿಜಯಪುರ ಜಿಲ್ಲೆಯ 2,873 ಕುಟುಂಬಗಳು ಇವೆ.

    ತ್ವರಿತಗೊಳಿಸಲು ಆಗ್ರಹ

    ‘ಅಮೃತ ಜ್ಯೋತಿ’ ಯೋಜನೆ ಬಡವರ ಪಾಲಿಕೆ ನಂದಾದೀಪವಾಗಿದೆ. ಆದರೆ, ಕಳೆದ ವರ್ಷ ಆಗಸ್ಟ್‌ನಲ್ಲೇ ಯೋಜನೆ ಶುರುವಾದರೂ ನಿರೀಕ್ಷೆಯಂತೆ ಫಲಾನುಭವಿಗಳ ಆಯ್ಕೆ ವೇಗವಾಗಿ ನಡೆಯುತ್ತಿಲ್ಲ. ತ್ವರಿತವಾಗಿ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

    ‘ಅಮೃತ ಜ್ಯೋತಿ’ ಯೋಜನೆಯಡಿ ಬರುವ ಅರ್ಜಿಗಳನ್ನು ತ್ವರಿತವಾಗಿ ದಾಖಲಿಸಿಕೊಳ್ಳುತ್ತಿದ್ದೇವೆ. ಯೋಜನೆ ಅನುಷ್ಠಾನವೂ ವೇಗವಾಗಿ ಆಗುತ್ತಿದೆ. ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಹೆಸ್ಕಾಂ ಕಚೇರಿಗೆ ಸಲ್ಲಿಸಬೇಕು.
    | ಮೊಹಮದ್ ರೋಷನ್, ವ್ಯವಸ್ಥಾಪಕ ನಿರ್ದೇಶಕ, ಹೆಸ್ಕಾಂ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts