More

    ಬಜೆಟ್ ಅನುದಾನ ಮೀಸಲಿನಿಂದ ರೈತರ ಬದುಕು ಹಸನು

    ಕೆ.ಆರ್.ನಗರ: ನಮ್ಮ ಸರ್ಕಾರ ರೈತರು ಮತ್ತು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಮೀಸಲಿರಿಸಿದ್ದು, ಇದರಿಂದ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.


    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಹೊಂದಿದ ಕುಟುಂಬದ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಆದೇಶದ ಪ್ರತಿ ವಿತರಣೆ ಹಾಗೂ ಎನ್‌ಎಫ್‌ಎಸ್‌ಎಂ ಯೋಜನೆಯಡಿ ರೈತರಿಗೆ ಉಚಿತ ರಾಗಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗಾಗಿ ಶೂನ್ಯ ಬಡ್ಡಿದರದಲ್ಲಿ 3ರಿಂದ 5 ಲಕ್ಷ ರೂ.ಸಾಲ, ಅನುಗ್ರಹ ಯೋಜನೆ, ಕೃಷಿಭಾಗ್ಯ, ತೋಟಗಾರಿಕೆ ಬೆಳೆಗೆ ಸಾಕಷ್ಟು ಅನುದಾನ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಬೆಳೆಗೆ ಉತ್ತಮ ಬೆಲೆ ಸಿಗುವ ಮೂಲಕ ಅವರ ಕುಟುಂಬದಲ್ಲಿ ನೆಮ್ಮದಿ ಸಿಗುವಂತೆ ಮಾಡಿಕೊಡಲಾಗುತ್ತಿದೆ ಎಂದರು.


    ನನ್ನ ಐದು ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅವಶ್ಯಕತೆ ಇರುವೆಡೆ 10ರಿಂದ 15 ಪವರ್ ಸಬ್ ಸ್ಟೇಷನ್‌ಗಳನ್ನು ತೆರೆಸುವ ಮೂಲಕ ರೈತರಿಗೆ ಮತ್ತು ಜನತೆಗೆ ವಿದ್ಯುತ್ ಹಾಗೂ ನೀರಿನ ಸಮಸ್ಯೆಗಳು ಎದುರಾಗದಂತೆ ಅನುಕೂಲ ಕಲ್ಪಿಸಲಾಗುವುದು. ಮುಂಗಾರು ಮಳೆ ಕೈಕೊಟ್ಟಿರುವುರಿಂದ ಪಂಪ್‌ಸೆಟ್‌ಗಳ ಬಳಕೆ ಹೆಚ್ಚಾಗಿ ಹಲವೆಡೆ ವಿದ್ಯುತ್ ಸಮಸ್ಯೆಯಾಗಿದೆ. ಅಂತಹ ಕಡೆ ತಕ್ಷಣ ಸರಿಪಡಿಸುವ ಕೆಲಸ ಮಾಡಿಸುತ್ತಿದ್ದೇನೆ. ಮಾರಗೌಡನಹಳ್ಳಿ ಬಳಿ ಪವರ್ ಸ್ಟೇಷನ್ ಕೆಲಸ ಪ್ರಗತಿಯಲ್ಲಿದ್ದು, ಹನಸೋಗೆ ಭಾಗದಲ್ಲಿ ಪವರ್ ಸ್ಟೇಷನ್ ತೆರೆಯಲು ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.


    ರೈತರ ಆತ್ಮಹತ್ಯೆಯಿಂದ ಇತರ ರೈತರು ಧೈರ್ಯಗುಂದಿ ಕೃಷಿ ಚಟುವಟಿಕೆ ಮಾಡಲು ಹಿಂಜರಿಯುವುದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ಜತೆಗೆ, ಕುಟುಂಬಕ್ಕೆ ತುಂಬಲಾರದ ನಷ್ಟವಾಗುವುದರಿಂದ ಎಂತಹ ಪರಿಸ್ಥಿತಿಯಲ್ಲೂ ರೈತರು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬಾರದು ಎಂದ ಶಾಸಕರು, ಆತ್ಮಹತ್ಯೆಗೆ ಶರಣಾಗಿರುವ ರೈತರ ಕುಟುಂಬದವರು ದೈರ್ಯವಾಗಿ ಜೀವನವನ್ನು ಎದುರಿಸಿ. ನಿಮ್ಮ ಕಷ್ಟಸುಖಗಳಲ್ಲಿ ನಾನು ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು.


    ಜು. 20ರೊಳಗೆ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಿದ್ದು, ಆ ಅವಧಿಯೊಳಗೆ ಬಾಕಿ ಇರುವ ಹೂಳು ತೆಗೆಯುವ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ನಿಗದಿತ ಸಮಯಕ್ಕೆ ಸರಿಯಾಗಿ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಪರಿಕರಗಳು ಸಿಗುವಂತೆ, ಕಾಳಸಂತೆಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಈಗಾಗಲೆ ಸಭೆ ಮಾಡಿ ಸೂಚನೆ ನೀಡಿದ್ದು ರೈತರು ಸಮಸ್ಯೆಗಳು ಇದ್ದರೆ ನನ್ನ ಗಮನಕ್ಕೆ ತಂದತೆ ಕೂಡಲೇ ಸರಿಪಡಿಸುತ್ತೇನೆ ಎಂದರು.
    ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್.ಗುರುಪ್ರಸಾದ್ ಮಾತನಾಡಿದರು.


    ಪುರಸಭಾ ಸದಸ್ಯ ಕೋಳಿಪ್ರಕಾಶ್, ಜಿಪಂ ಮಾಜಿ ಸದಸ್ಯ ಜಯರಾಮೇಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಕಾಂಗ್ರೆಸ್ ತಾಲೂಕು ವಕ್ತಾರ ಸೈಯದ್‌ಜಾಬೀರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಗ್ರಾಪಂ ಸದಸ್ಯ ವೆಂಕಟರಾಮು, ಮಾಜಿ ಸದಸ್ಯ ಹೆಬ್ಬಾಳು ಮಂಜು, ರೈತ ಮುಖಂಡರಾದ ಚೀರ‌್ನಹಳ್ಳಿಶಂಕರ್, ರಾಮ್‌ಪ್ರಸಾದ್, ದೆಗ್ಗನಹಳ್ಳಿಆನಂದ್, ಜಿ.ಎಂ.ಹೇಮಂತ್, ಚಲುವರಾಜು ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts