More

    ಮ್ಯಾನ್‌ಹೋಲ್ ಕುಸಿದು ಸಮಸ್ಯೆ

    ಕೆ.ಆರ್.ನಗರ: ಪಟ್ಟಣದ ವಿವಿಧೆಡೆ ರಸ್ತೆ ಮಧ್ಯೆಯಿರುವ ಒಳಚರಂಡಿಯ ಮ್ಯಾನ್‌ಹೋಲ್ ಮುಚ್ಚಳಗಳು ಕುಸಿದು ಬಿದ್ದು, ತಿಂಗಳುಗಳೇ ಕಳೆದರೂ ಸಂಬಂಧಪಟ್ಟವರು ಸರಿಪಡಿಸುವ ಗೋಜಿಗೆ ಹೋಗದೆ ಸಮಸ್ಯೆ ಉದ್ಭವಿಸಿದೆ.

    ಈ ಗುಂಡಿಗಳು ಅನಾಹುತಕ್ಕೆ ಆಹ್ವಾನಿಸುವುದರ ಜತೆಗೆ ಸುಗಮ ಸಂಚಾರಕ್ಕೂ ಸಮಸ್ಯೆ ತೊಡಕುಂಟಾಗುತ್ತಿದೆ. ಪಟ್ಟಣದ ಎರಡನೇ ಹಂತದ ಒಳಚರಂಡಿ ಯೋಜನೆಯಲ್ಲಿ ಮಧುವನಹಳ್ಳಿಯ 22ನೇ ವಾರ್ಡ್ ಮತ್ತು 23ನೇ ವಾರ್ಡಿನ ಮುಖ್ಯ ರಸ್ತೆ ಮಧ್ಯೆ ಕೆಲವೇ ವರ್ಷಗಳ ಹಿಂದೆ ನಿರ್ಮಾಣವಾದ ಒಳಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮ್ಯಾನ್‌ಹೋಲ್‌ಗಳು ಅಲ್ಲಲ್ಲೇ ಕುಸಿದು ಬೀಳುತ್ತಿದೆ.

    ಪಟ್ಟಣದ ಪುರಸಭೆ ವೃತ್ತದಿಂದ ಮಧುವನಹಳ್ಳಿ ಮೂಲಕ ಹಾದು ಹೋಗುವ ಬ್ಯಾಡರಹಳ್ಳಿ ನವೀನ್ ಅವರ ಪ್ಲೈನಿಂಗ್ ಮಿಷನ್ ಅಂಗಡಿ ಮುಂಭಾಗ ಮ್ಯಾನ್‌ಹೋಲ್ ಮುಚ್ಚಳ ಕುಸಿದು ಬಿದ್ದಿದೆ. ಇದರಿಂದಾಗಿ ಸ್ಥಳೀಯರಿಗೆ, ರಸ್ತೆಯಲ್ಲಿ ಸಂಚರಿಸುವವರಿಗೆ ದುರ್ವಾಸನೆ ಬೀರುತ್ತಿದೆ. ಮುಚ್ಚಳ ಕುಸಿದು ಹಲವು ದಿನಗಳು ಕಳೆದರೂ ಪುರಸಭಾ ಅಧಿಕಾರಿಗಳು ಸರಿಪಡಿಸಲು ಮುಂದಾಗುತ್ತಿಲ್ಲ. ಇದರಿಂದ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ.
    ಈ ರಸ್ತೆ ಕೆ.ಆರ್.ನಗರ, ಮಳಲಿ, ಹೊಸಕೋಟೆ, ಮಾರ್ಗವಾಗಿ ರಾವಂದೂರು, ಬೆಟ್ಟದಪುರ ಮತ್ತು ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.

    ಒಳಚರಂಡಿಯ ಮ್ಯಾನ್‌ಹೋಲ್‌ಗಳನ್ನು ಅವೈಜ್ಞಾನಿಕ ರಸ್ತೆ ಮಧ್ಯೆ ನಿರ್ಮಾಣ ಮಾಡಿದ್ದು, ಸಮಸ್ಯೆಗಳು ಉದ್ಭವಿಸಲು ಇದು ಸಹ ಕಾರಣವಾಗಿದೆ. ರಸ್ತೆ ಕೂಡ ಕಿರಿದಾಗಿರುವುದರಿಂದ ಏಕಕಾಲಕ್ಕೆ ಎರಡು ವಾಹನಗಳು ಸಂಚರಿಸುವುದು ಕಷ್ಟ ಸಾಧ್ಯವಾಗಿದೆ.

    13ನೇ ವಾರ್ಡಿನ 7ನೇ ರಸ್ತೆಯ 6ನೇ ತಿರುವಿನಲ್ಲಿರುವ ಅಡವೀಶ್ ಅವರ ಮನೆ ಬಳಿಯ ತಿರುವಿನಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ಮುಚ್ಚಳ ಕುಸಿದು ಬಿದ್ದು ತಿಂಗಳುಗಳೇ ಕಳೆದಿವೆ. ಸಮೀಪದಲ್ಲೇ ಮಕ್ಕಳಿಗೆ ಮನೆ ಪಾಠ ಹೇಳಿಕೊಡಲಾಗುತ್ತಿದ್ದು, ಹತ್ತಾರು ಪುಟ್ಟ ಮಕ್ಕಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು ನಿತ್ಯ ಇಲ್ಲೇ ಓಡಾಡುತ್ತಿದ್ದು, ಸಂಬಂಧಿಸಿದವರು ಸಮಸ್ಯೆ ಬಗೆಹರಿಸುವತ್ತ ಚಿಂತನೆ ಹರಿಸುತ್ತಿಲ್ಲ. ಜನರು ದುರ್ವಾಸನೆ ನಡುವೆಯೇ ಓಡಾಡಬೇಕಾಗಿದೆ.

    ಈ ಸಮಸ್ಯೆ ಬಗೆಹರಿಸಬೇಕಾದ ಪುರಸಭೆ ಅಧಿಕಾರಿಗಳ ಜತೆ, ಸ್ಥಳೀಯ ಜನಪ್ರತಿನಿಧಿಗಳು ಕೂಡ ನಿರ್ಲಕ್ಷೃವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts