More

    ಬಜೆಟ್‌ನಲ್ಲಿ 500 ಕೋಟಿ ರೂ. ಮೀಸಲು

    ನಂಜನಗೂಡು: ಅಂಗವಿಕಲರ ಕಲ್ಯಾಣಕ್ಕಾಗಿ ಮುಂದಿನ ಬಜೆಟ್‌ನಲ್ಲಿ 500 ಕೋಟಿ ರೂ. ಅನುದಾನ ಮೀಸಲಿಟ್ಟು ವಿಶೇಷ ಕಾರ್ಯಕ್ರಮಗಳ ಮೂಲಕ ನೆರವಾಗಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
    ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ ಸಹಯೋಗದಲ್ಲಿ ವಿಶೇಷ ಅಡಿಪ್ ಯೋಜನೆಯಡಿ ಭಾನುವಾರ ನಗರದ ಶ್ರೀಕಂಠೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕಿವುಡರಿಗೆ ಅತ್ಯಾಧುನಿಕ ಸಲಕರಣೆ, ಟ್ರೈಸೈಕಲ್ ವಿತರಣೆ ಹಾಗೂ ಹಿರಿಯ ನಾಯಕರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿ ಕನ್ನಡಕ ವಿತರಣೆ ಮಾಡಬೇಕು. ಎಸ್ಸಿ, ಎಸ್ಟಿಯವರಿಗೆ ಬಾಬೂ ಜಗಜೀವನರಾಂ ಹೆಸರಿನಲ್ಲಿ ಪ್ರತಿ ಕ್ಷೇತ್ರದಲ್ಲಿ 50 ಜನ ಅಂಗವಿಕಲರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಜತೆಗೆ ಸಣ್ಣ ಪುಟ್ಟ ವ್ಯಾಪಾರಕ್ಕೆ ನೆರವಾಗಬೇಕು ಎಂಬ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 500 ಕೋಟಿ ರೂ.ಅನುದಾನ ಮೀಸಲಿಡಲು ನಿರ್ಧರಿಸಿದ್ದೇನೆ ಎಂದರು.
    ನಾನು ಸಿಎಂ ಆದ ಬಳಿಕ ಅಂಗವಿಕಲರ ಮಾಸಾಶನವನ್ನು 1,000ರೂ.ಗೆ ಹೆಚ್ಚಳ ಮಾಡುವ ಜತೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದೆ. ಅಂಗವಿಕಲರ ಕಲ್ಯಾಣಕ್ಕಾಗಿ ರೂಪಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಕಾರ್ಯಕ್ರಮಗಳು ಪ್ರತಿಯೊಬ್ಬರಿಗೂ ಮುಟ್ಟಬೇಕು. ಪ್ರತಿ ಜಿಲ್ಲೆಯಲ್ಲೂ ಅಂಗವಿಕಲರಿಗೆ ನೆರವಾಗಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಈಡೇರಿಸಲು ಮುಂದೆ ರಾಜ್ಯ ಸರ್ಕಾರದಿಂದಲೇ ಎಲ್ಲ ಕ್ಷೇತ್ರಗಳಲ್ಲೂ ಶಿಬಿರಗಳನ್ನು ಆಯೋಜಿಸಲಾಗುವುದು. ಎಲ್ಲ ಶಾಸಕರು ಆಸಕ್ತಿವಹಿಸಿ ನೆರವಾಗಲು ಸೂಚನೆ ನೀಡಲಿದ್ದೇನೆ ಎಂದು ಹೇಳಿದರು.

    ಹುಟ್ಟು ಸಾವಿನಲ್ಲಿ ಎಲ್ಲರೂ ಸಮಾನರು. ನಡುವಿನ ಬದುಕಿನಲ್ಲಿ ಏನು ಸಾಧನೆ ಮಾಡುತ್ತೀವಿ ಎಂಬುದು ಮುಖ್ಯ. ದೇವರು ಒಂದು ಅಂಗವನ್ನು ಕಸಿದುಕೊಂಡಿದ್ದರೆ ಹೆಚ್ಚುವರಿಯಾಗಿ ಮತ್ತೊಂದು ಕೊಟ್ಟಿರುತ್ತಾನೆ. ದೃಷ್ಟಿಯಿಲ್ಲದವರಿಗೆ ಒಳಗಣ್ಣಿನ ದಿವ್ಯ ನೋಟದಿಂದ ಇಡೀ ಜಗತ್ತನ್ನೇ ನೋಡುವ ಶಕ್ತಿಯನ್ನು ಭಗವಂತ ಕರುಣಿಸಿರುತ್ತಾನೆ. ಆದರೆ, ದೃಷ್ಟಿ ಇರುವ ನಮಗೆ ಒಳಗಣ್ಣು, ದಿವ್ಯನೋಟ ಎರಡೂ ಇರುವುದಿಲ್ಲ. ಹಾಗಾಗಿ ಯಾರೂ ನಿಜವಾದ ಅಂಗವಿಕಲರು ಎಂದು ನೀವೇ ನಿರ್ಧರಿಸಿ. ನಮ್ಮ ಹೃದಯ, ಭಾವನೆ, ನಡೆ ನುಡಿ ಹೇಗಿರುತ್ತದೆ ಎಂಬುದನ್ನು ನೋಡಲು ಸೃಷ್ಟಿಕರ್ತ ಈ ರೀತಿಯ ಸವಾಲುಗಳನ್ನು ನಮ್ಮ ಮುಂದಿಟ್ಟಿರುತ್ತಾನೆ. ನಾವು ಆ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಇದನ್ನು ಅರ್ಥ ಮಾಡಿಕೊಂಡೇ ಅಂಗವಿಕಲರನ್ನು ದೇವರ ಮಕ್ಕಳು ಎಂದು ಕರೆಯುತ್ತೇವೆ ಎಂದು ಹೇಳಿದರು.

    ಸಂಸದ ವಿ.ಶ್ರೀನಿವಾಸಪ್ರಸಾದ್ ಹೃದಯ ವೈಶಾಲ್ಯ ದೊಡ್ಡದು. ಅಂಗವಿಕಲರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಂಕವಿಕಲರಿಗೆ ಅಗತ್ಯ ಸಲಕರಣೆ ನೀಡುವ ಈ ಕಾರ್ಯಕ್ರಮವನ್ನು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಸಿ ಸುಮಾರು 3 ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ನೆರವಾಗಿದ್ದಾರೆ. ಅವರಿಗೆ ಅಭಿನಂದಿಸಲು ಬಯಸುತ್ತೇನೆ. ಸಾಮಾಜಿಕ ನ್ಯಾಯದಡಿ ಎಲ್ಲ ಸಮುದಾಯಗಳಿಗೂ ಭವನ ನಿರ್ಮಾಣಕ್ಕೆ 8 ಕೋಟಿ ರೂ. ಬಿಡುಗಡೆ ಪ್ರಸ್ತಾವನೆ ಸಲ್ಲಿಸಿದ ಪ್ರಸಾದ್ ಅವರ ಮಾನವೀಯ ಅಂತಃಕರಣವನ್ನು ಅರಿತು ಅನುದಾನ ಬಿಡುಗಡೆಗೆ ಕ್ರಮವಹಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಶಾಸಕ ಹರ್ಷವರ್ಧನ್ ಒಬ್ಬ ಕಾಯಕ ಯೋಗಿ. ನಾನು ಸಿಎಂ ಆದ ಮೇಲೆ ನನ್ನಿಂದ ಸುಮಾರು 500 ಕೋಟಿ ರೂ.ವರೆಗೂ ಅನುದಾನವನ್ನು ಬಿಡುಗಡೆ ಮಾಡಿಸಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕ್ರಿಯಾಶೀಲರಾಗಿ, ಜನರ ಮಧ್ಯೆಯೇ ಇದ್ದಾರೆ. ಆದರೆ ಇವರ ಬಗ್ಗೆ ಕೆಲವರು ಕುಚೇಷ್ಟೆಯಿಂದ ಏನಾದರೂ ಮಾತನಾಡುತ್ತಾರೆ. ತಪ್ಪುಗಳನ್ನು ಕಂಡುಹಿಡಿಯುವುದು ಸುಲಭ. ಇಂತಹವರ ಮಧ್ಯೆಯೂ ವಿಶ್ರಮಿಸದೆ ತಾನು ಅಂದುಕೊಂಡಂತೆ ಸಾಧನೆ ಮಾಡಿ ಗುರಿ ಮುಟ್ಟಲು ಹರ್ಷವರ್ಧನ್ ಪ್ರಾಮಾಣಿಕವಾಗಿ ಜನಸೇವೆಯಲ್ಲಿ ತೊಡಗಿದ್ದಾರೆ. ಇಂಥವರ ಮೇಲೆ ನಿಮ್ಮೆಲ್ಲರ ಆಶೀರ್ವಾದ ಮುಂದೆಯೂ ಇರಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಶಿಸಿದರು.

    ಶಾಸಕ ಬಿ.ಹರ್ಷವರ್ಧನ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಮಹದೇವಯ್ಯ, ಕಾಡಾ ಅಧ್ಯಕ್ಷ ನಿಜಗುಣರಾಜು, ನಗರಸಭಾಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ, ಡಿಸಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಪೂರ್ಣಿಮಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts