More

    ಬಜರಂಗ ದಳ ನಿಷೇಧ ಕೈಬಿಡುವಂತೆ ಬಹಿರಂಗ ಹೇಳಿಕೆ ನೀಡಿ

    ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ಪ್ರಣಾಳಿಕೆಯಿಂದ ಬಜರಂಗ ದಳ ನಿಷೇಧ ಕೈ ಬಿಡುವಂತೆ ಬಹಿರಂಗ ಹೇಳಿಕೆ ನೀಡಲಿ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್​ಎಸ್​ಎಸ್, ಬಜರಂಗ ದಳದ ಪರವಾಗಿ ಜಗದೀಶ ಶೆಟ್ಟರ್ ಈ ಹಿಂದೆ ಅಧಿವೇಶನದಲ್ಲಿ ಮಾತನಾಡಿದ್ದರು. ಇದೀಗ ಬಜರಂಗ ದಳ ನಿಷೇಧದ ಪ್ರಸ್ತಾಪವನ್ನು ಪ್ರಣಾಳಿಕೆಯಿಂದ ಕೈಬಿಡುವಂತೆ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡುವುದಾಗಿ ಶೆಟ್ಟರ್ ಹೇಳಿದ್ದಾರೆ. ನಾಲ್ಕು ಗೋಡೆಯ ಮಧ್ಯೆ ಕಾಂಗ್ರೆಸ್ ಮುಖಂಡರಿಗೆ ಈ ಬಗ್ಗೆ ಹೇಳುವ ಬದಲು, ಬಹಿರಂಗವಾಗಿಯೇ ಕಾಂಗ್ರೆಸ್ಸಿಗರನ್ನು ಒತ್ತಾಯಿಸಲಿ ಎಂದು ಹೇಳಿದರು.

    ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಒಂದು ವೇಳೆ ಅಧಿಕಾರಕ್ಕೆ ಬಂದು, ಬಜರಂಗ ದಳವನ್ನು ನಿಷೇಧಿಸಿದರೆ ಏನು ಮಾಡುತ್ತೀರಿ ? ಎಂದು ಜಗದೀಶ ಶೆಟ್ಟರ್ ಅವರನ್ನು ಪ್ರಶ್ನಿಸಿದ ಈಶ್ವರಪ್ಪ, ಚುನಾವಣೆ ಟಿಕೆಟ್​ಗಾಗಿ ಸ್ವಾಭಿಮಾನ ತೊರೆದು ಕಾಂಗ್ರೆಸ್ ಸೇರಿದ ಶೆಟ್ಟರ್ ಬಗ್ಗೆ ಅಯ್ಯೋ ಪಾಪ ಎನಿಸುತ್ತದೆ ಎಂದು ವ್ಯಂಗ್ಯವಾಡಿದರು.

    ಹಿಂದು ಸಂಘಟನೆಗಳ ಬಗ್ಗೆ ಚಕಾರ ಎತ್ತುವ ಇಂತಹ ನೂರು ಪ್ರಣಾಳಿಕೆಗಳನ್ನು ಸುಡುತ್ತೇನೆ. ಈ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ಮುಖಂಡರಲ್ಲಿಯೇ ಗೊಂದಲ ಇದೆ. ಬಜರಂಗ ದಳ ರಾಷ್ಟ್ರಭಕ್ತರ ಸಂಘಟನೆ. ಇದುವರೆಗೆ ಯಾರೊಬ್ಬರೂ ಈ ಸಂಘಟನೆಯನ್ನು ಟೀಕಿಸಿರಲಿಲ್ಲ. ಆದರೆ, ಕಾಂಗ್ರೆಸ್ಸಿನವರು ಉಗ್ರಗಾಮಿಗಳೊಂದಿಗೆ ಸಂಪರ್ಕ ಇರುವ ಪಿಎಫ್​ಐನೊಂದಿಗೆ ಬಜರಂಗ ದಳ ಹೋಲಿಕೆ ಮಾಡಿರುವುದು ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕಾಂಗ್ರೆಸ್ಸಿಗರು ಮುಸ್ಲಿಂ ಸಮಾಜದವರನ್ನು ಓಲೈಸುವ ಉದ್ದೇಶದಿಂದ ಇಡೀ ದೇಶದಲ್ಲಿ ಹಿಂದುಗಳನ್ನು ಪಕ್ಕಕ್ಕೆ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಈ ಪ್ರಯತ್ನ ಸಫಲವಾಗಲು ಬಿಡುವುದಿಲ್ಲ. ಈಗಾಗಲೇ ಕಾಂಗ್ರೆಸ್ ವಿನಾಶದ ಅಂಚಿನಲ್ಲಿದೆ. ಆ ಪಕ್ಷ ಇನ್ನೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

    ಆನೆ ಗಾತ್ರದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್ ಖರ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದೀಗ ರಾಜಕೀಯದಲ್ಲಿ ಕಣ್ಣುಬಿಡುತ್ತಿರುವ ಪ್ರಿಯಾಂಕ್ ಖರ್ಗೆ ಪ್ರಧಾನಿ ಬಗ್ಗೆ ಅಗೌರವವಾಗಿ ಮಾತನಾಡಿರುವುದು ಸರಿಯಲ್ಲಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಒಂದಿಷ್ಟು ಗೌರವ ಇತ್ತು. ಆದರೆ, ಅವರು ಸಹ ಮೋದಿಯವರನ್ನು ಹೀನಾಯವಾಗಿ ಜರಿದಿದ್ದರಿಂದ ಖರ್ಗೆ ಬಗ್ಗೆ ಇದ್ದ ಒಂದಿಷ್ಟು ಗೌರವವೂ ಹೋಯಿತು ಎಂದರು.

    ಬಿಜೆಪಿಯನ್ನು ಜಾತೀಯವಾದಿ ಎಂದು ಹೇಳುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ದೊಡ್ಡ ಜಾತೀಯವಾದಿ. ಡಿ.ಕೆ. ಶಿವಕುಮಾರ ಒಕ್ಕಲಿಗರೆಲ್ಲ ನನ್ನ ಹಿಂದೆ ಬನ್ನಿರಿ ಎಂದು ಕರೆಕೊಟ್ಟರೆ ಹೊರತು, ಭಾರತೀಯರೆಲ್ಲ ಅಥವಾ ಹಿಂದುಗಳೆಲ್ಲ ನನ್ನ ಹಿಂದೆ ಬನ್ನಿರಿ ಎನ್ನಲಿಲ್ಲ. ಇಂತಹ ಜಾತೀವಾದಿ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts