More

    ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆ ಯತ್ನ; ಸಾಗರ ಅರ್ಧ ದಿನ ಬಂದ್

    ಸಾಗರ: ಬಜರಂಗದಳ ನಗರ ಸಹ ಸಂಚಾಲಕ ಸುನೀಲ್ ಮೇಲೆ ಹಲ್ಲೆ ಯತ್ನ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಮತ್ತು ಸಂಘ ಪರಿವಾರದ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಸಾಗರ ಅರ್ಧ ದಿನ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲಾ ಕಾಲೇಜುಗಳು ಬಂದ್ ಆಗಿದ್ದವು. ಖಾಸಗಿ ಬಸ್ ಸಂಚಾರ ಸ್ತಬ್ಧವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳಿದ್ದರೂ ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಿದವು. ಪ್ರತಿಭಟನಾ ಮೆರವಣಿಗೆಯಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಪ್ರತಿಭಟನಾಕಾರರು ಮೆರವಣಿಗೆಯುದ್ದಕ್ಕೂ ಹಿಂದು ಪರ ಘೋಷಣೆಗಳನ್ನು ಕೂಗಿದರು.
    ಸುನೀಲ್ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಹಾಗಣಪತಿ ದೇವಾಲಯದಿಂದ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಮೆರವಣಿಗೆ ಆರಂಭಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸುನೀಲ್ ಅವರ ಮನೆ ಇರುವ ಹಾನಂಬಿ ರಸ್ತೆಯಲ್ಲೂ ತೆರಳಿ ಅವರ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಬಂದ್ ಮತ್ತು ಪ್ರತಿಭಟನೆ ಹಿನ್ನೆಲೆಯಲ್ಲಿ ಸಾಗರ ತಾಲೂಕಿನ ಆಯಕಟ್ಟಿನ ಜಾಗಗಳಲ್ಲಿ ನಾಕಾಬಂದಿ ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
    ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಇದನ್ನು ವೈಯಕ್ತಿಕ ಪ್ರಕರಣ ಎಂದು ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು. ಇತ್ತೀಚೆಗೆ ಹಿಂದು ಧರ್ಮೀಯರ ಮೇಲೆ ಪ್ರಹಾರಗಳು ನಡೆಯುತ್ತಲೇ ಇವೆ. ಏಕಾಏಕಿ ನಮ್ಮ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಯತ್ನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಂಘ ಪರಿವಾರದ ಮುಖಂಡ ಆ.ಪು.ನಾರಾಯಣಪ್ಪ ಆಗ್ರಹಿಸಿದರು.
    ಫೆಬ್ರವರಿ ಮೊದಲ ವಾರ ಸಾಗರದಲ್ಲಿ ಐತಿಹಾಸಿಕ ಪ್ರಸಿದ್ಧ ಮಾರಿಕಾಂಬೆ ಜಾತ್ರೆ ನಡೆಯುತ್ತಿದ್ದು ಇದನ್ನು ಭಂಗಗೊಳಿಸಲು ಇಂತಹ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ನಮಗೆ ಮಾಹಿತಿಯೂ ಇದೆ. ರಕ್ಷಣಾ ಇಲಾಖೆ ತಕ್ಷಣ ಗಮನ ಹರಿಸಬೇಕು. ಹಿಂದು ಸಮಾಜವನ್ನು ಬೆದರಿಸುವ ಪ್ರಯತ್ನವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
    ಭಯೋತ್ಪಾದನಾ ಕೃತ್ಯ: ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಅನೇಕರು ಹಿಂದುಗಳ ಮೇಲೆ ಮಾರಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸುತ್ತಲೇ ಇದ್ದಾರೆ. ಇದನ್ನು ತಡೆಯುವ ಕೆಲಸವನ್ನು ಸಂಘ ಪರಿವಾರದ ಸಂಘಟನೆಗಳು ಮಾಡುತ್ತಿವೆ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ಹೇಳಿದರು. ಸಾಗರದಲ್ಲಿ ಸುನೀಲ್ ಒಬ್ಬ ಹಿಂದು ಹೋರಾಟಗಾರನಾಗಿ ಸಮಾಜದ ಕೆಲಸ ಮಾಡುತ್ತಿದ್ದಾನೆ. ಅಂತಹವರಿಗೆ ಈ ರೀತಿಯ ಪ್ರತಿರೋಧಗಳು ಎದುರಾಗುತ್ತಿವೆ. ಸಮಾಜ ಸುನೀಲ್ ಬೆಂಬಲವಾಗಿ ನಿಲ್ಲುತ್ತದೆ. ಸಾಗರದಲ್ಲಿಯೂ ಲವ್ ಜಿಹಾದ್, ಮತಾಂತರ ಪ್ರಕರಣಗಳು ನಡೆಯುತ್ತಿವೆ. ಹಿಂದು ಕಾರ್ಯಕರ್ತರು ಈ ವಿಚಾರಗಳನ್ನು ಗಂಭೀರವಾಗಿ ಯೋಚಿಸಬೇಕು ಎಂದರು.
    ಕಾನೂನು ಕೈಗೆತ್ತಿಕೊಳ್ಳಬೇಡಿ: ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ರಕ್ಷಣಾ ಇಲಾಖೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಧರ್ಮದ ಆಧಾರದ ಮೇಲೆ ಗಲಾಟೆ ಮಾಡಲು ಪ್ರಯತ್ನ ಮಾಡಿದರೆ ಅಂತಹವರಿಗೆ ಪೊಲೀಸರು ತಕ್ಕ ಉತ್ತರ ಕೊಡುತ್ತಾರೆ. ಹದ್ದು ಮೀರಿದವರಿಗೆ ತಕ್ಕಶಾಸ್ತಿ ಮಾಡಿರುವ ಉದಾಹರಣೆಯೂ ಇದೆ. ತಾಲೂಕು ಆಡಳಿತ ಎಲ್ಲ ರೀತಿಯ ಭದ್ರತಾ ಕ್ರಮ ಕೈಗೊಳ್ಳುತ್ತದೆ. ಜನತೆ ಆತಂಕ ಪಡಬೇಕಾಗಿಲ್ಲ ಎಂದರು.
    ಸುನೀಲ್ ಚುಡಾಯಿಸುತ್ತಿದ್ದ:  ಬಜರಂಗದಳ ನಗರ ಸಹ ಸಂಚಾಲಕ ಸುನೀಲ್ ನನ್ನನ್ನು ಪದೇಪದೆ ಚುಡಾಯಿಸುತ್ತಿದ್ದ ಎಂದು ಹತ್ಯೆ ಯತ್ನ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಸಮೀರ್‌ನ ಸಹೋದರಿ ಸಬಾಶೇಖ್ ಆರೋಪ ಮಾಡಿದ್ದಾರೆ. ನಾನು ಕಾಲೇಜಿಗೆ ತೆರಳುವಾಗ ದಾರಿಯಲ್ಲಿ ಅಡ್ಡಗಟ್ಟಿ ಬುರ್ಕಾ ಹಾಕಿಕೊಳ್ಳಬೇಡ, ಮತಾಂತರವಾಗು ಎಂದು ಒತ್ತಾಯಿಸುತ್ತಿದ್ದ. ಈ ವಿಷಯವನ್ನು ಸಹೋದರ ಸಮೀರ್‌ಗೆ ತಿಳಿಸಿದ್ದೆ. ಸಮೀರ್ ಹಲವು ಬಾರಿ ಬುದ್ಧಿ ಹೇಳಿದರೂ ಸುನೀಲ್ ತನ್ನ ವರ್ತನೆ ಮುಂದುವರೆಸಿದ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಣ್ಣ ಸಮೀರ್, ಸುನೀಲ್‌ನನ್ನು ಕೊಲೆ ಮಾಡಲು ಹೋಗಿರಲಿಲ್ಲ, ಆತನಿಗೆ ಹೇಳಲು ಬುದ್ದಿ ಹೇಳಲು ಹೋದಾಗ ಈ ಘಟನೆ ಸಂಭವಿಸಿದೆ. ಸಮೀರ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ನಾವು ಎಲ್ಲ ಧರ್ಮೀಯರೊಂದಿಗೂ ಅನ್ಯೋನ್ಯವಾಗಿದ್ದೇವೆ. ಅನಗತ್ಯವಾಗಿ ಸಣ್ಣ ವಿಷಯವನ್ನು ದೊಡ್ಡದು ಮಾಡಿ ಅವನನ್ನು ಅಪರಾಧಿ ಮಾಡಬೇಡಿ. ಈ ಪ್ರಕರಣದಿಂದ ಅವನನ್ನು ಕೈಬಿಡಿ ಎಂದು ಕಣ್ಣೀರು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts