More

    ಬಗರ್‌ಹುಕುಂ ಅರ್ಜಿ ವೈಜ್ಞಾನಿಕವಾಗಿ ಪರಿಶೀಲಿಸಿ -ರೈತ ಸಂಘದ ಒತ್ತಾಯ

    ದಾವಣಗೆರೆ : ರಾಜ್ಯದಲ್ಲಿ ಬಗರ್‌ಹುಕುಂ ಜಮೀನು ಸಾಗುವಳಿ ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಸುಮಾರು 38 ಲಕ್ಷ ಜನ ರೈತರು ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಬೇಕು ಎಂದು ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಕಾರ್ಯಾಧ್ಯಕ್ಷ ವೀರಸಂಗಯ್ಯ ಒತ್ತಾಯಿಸಿದರು.
    ಸರ್ಕಾರ ಸುಮಾರು 15 ವರ್ಷಗಳಿಂದ ಬಗರ್‌ಹುಕುಂ ಜಮೀನು ಉಳುಮೆ ಮಾಡಿದವರಿಗೆ ಪಟ್ಟಾ ಕೊಡುವ ತೀರ್ಮಾನಕ್ಕೆ ಬಂದಿದೆ. ಆದರೆ, ಅಧಿಕಾರಿಗಳು ವೈಜ್ಞಾನಿಕವಾಗಿ ಪಂಚನಾಮೆ ಮಾಡದೆ ಅರ್ಜಿ ತಿರಸ್ಕರಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ರೈತರು ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಖುದ್ದು ಹಳ್ಳಿಗಳಿಗೆ ತೆರಳಿ ಪಂಚನಾಮೆ ನಡೆಸಬೇಕು. ಆದರೆ, ಯಾವ ಗ್ರಾಮ ಲೆಕ್ಕಾಧಿಕಾರಿಗಳು ಇದನ್ನು ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದ್ದು, ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
    ಅಲ್ಲದೇ ತಾಲೂಕಿನ ಹಾಲುವರ್ತಿಯಲ್ಲಿ ಸುಮಾರು 25 ವರ್ಷಗಳಿಂದ ಸಾಗುವಳಿ ಮಾಡಿಕೊಂಡಿದ್ದ ಜಮೀನನ್ನು ಅಧಿಕಾರಿಗಳು ಕಾನೂನು ಬಾಹಿರವಾಗಿ ಖಾಸಗಿ ಫ್ಯಾಕ್ಟರಿಗೆ ನೀಡಿದ್ದು, ಜಿಲ್ಲಾಧಿಕಾರಿ ವಾಸ್ತವ ವರದಿ ತರಿಸಿಕೊಂಡು ನ್ಯೂನತೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಫೆ.10ರಂದು ರೈತ ನಾಯಕ ನಂಜುಂಡಸ್ವಾಮಿಯವರ ಜನ್ಮದಿನ ಕಾರ್ಯಕ್ರಮದಲ್ಲಿ ಬಜೆಟ್‌ನಲ್ಲಿ ರೈತಪರ ಕಾರ್ಯಕ್ರಮಗಳ ಮಂಡನೆಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಹಾಗೂ ಎಸ್‌ಎಪಿ ಕುರಿತಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
    ರೈತ ಸಂಘದ ಪದಾಧಿಕಾರಿಗಳಾದ ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ಅರುಣ್‌ಕುಮಾರ್ ಕುರುಡಿ, ಬುಳ್ಳಾಪುರದ ಹನುಮಂತಪ್ಪ, ಎಸ್.ಟಿ. ಪರಮೇಶ್ವರಪ್ಪ, ಹಾಲಮ್ಮ ಹಾಲುವರ್ತಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts