More

    ಬಂದ್ ಬೆಂಬಲಿಸಲು ತೀರ್ಮಾನ

    ಹುಬ್ಬಳ್ಳಿ: ಎಪಿಎಂಸಿ, ಭೂಸುಧಾರಣೆ ಕಾಯ್ದೆ ವಿರೋಧಿಸಿ ಕರೆ ನೀಡಲಾಗಿರುವ ಸೋಮವಾರದ ಕರ್ನಾಟಕ ಬಂದ್​ಗೆ ರೈತ-ಕಾರ್ವಿುಕ-ಕನ್ನಡ ಪರ ನಿಲುವಿನ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು ಅವಳಿನಗರದಲ್ಲಿ ಬಿಸಿ ಮುಟ್ಟಿಸಲು ಸಿದ್ಧತೆ ನಡೆಸಿವೆ.

    ಬಂದ್ ಯಶಸ್ವಿಗೊಳಿಸುವ ಕುರಿತು ವಿವಿಧ ಸಂಘಟನೆಗಳ ಪ್ರಮುಖರು ಭಾನುವಾರ ಹುಬ್ಬಳ್ಳಿ ಎಪಿಎಂಸಿಯಲ್ಲಿ ಸಭೆ ನಡೆಸಿದರು. ಸೋಮವಾರ ಬೆಳಗ್ಗೆ 6.30ರಿಂದ ಬಸ್ ಸಂಚಾರ ತಡೆಯಲು ಹಾಗೂ 10 ಗಂಟೆಗೆ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ನಗರದ ಹೊಸೂರ ಬಳಿಯ ವಾಕರಸಾ ಸಂಸ್ಥೆಯ ಡಿಪೋದಿಂದ ಬಸ್​ಗಳು ಹೊರ ಹೋಗದಂತೆ ತಡೆಯಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

    ‘ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಸ್ ಸಂಚಾರ ತಡೆಯುವುದಾಗಿ ವಿವಿಧ ಸಂಘಟನೆಗಳು ಹೇಳಿವೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದೇವೆ. ಅವರು ಭದ್ರತೆ ನೀಡಿದರೆ ಅಥವಾ ಸೋಮವಾರ ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರದ ಬಗ್ಗೆ ನಿರ್ಧರಿಸುತ್ತೇವೆ’ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ವಿಭಾಗದ ಡಿಟಿಒ ಅಶೋಕ ಪಾಟೀಲ ತಿಳಿಸಿದ್ದಾರೆ.

    ಎಪಿಎಂಸಿ ಅಂಗಡಿ-ಮಳಿಗೆಗಳನ್ನು ಬಂದ್ ಇಡಲು ವರ್ತಕರು ಒಪ್ಪಿದ್ದಾರೆ. ಹೊಟೇಲ್​ಗಳು ತೆರೆದಿರಲಿವೆ. ಆಟೋ ರಿಕ್ಷಾ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಆಸ್ಪತ್ರೆ, ಮೆಡಿಕಲ್ ಶಾಪ್, ವಾಣಿಜ್ಯ ಮಳಿಗೆಗಳು ಎಂದಿನಂತೆ ಇರಲಿವೆ.

    ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಗ್ರಾಮೀಣ ಕೂಲಿ ಕಾರ್ವಿುಕರ ಸಂಘಟನೆ, ಕಿಸಾನ್ ಸೆಲ್, ಮಹದಾಯಿ, ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ, ಕರ್ನಾಟಕ ಕಳಸಾ-ಬಂಡೂರಿ ಹೋರಾಟ ಸಮಿತಿ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಸಿಐಟಿಯು, ಎಐಟಿಯುಸಿ, ಟಿಯುಸಿಸಿ, ವಿಮಾ ನೌಕರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕರ್ನಾಟಕ ಸಂಗ್ರಾಮ ಸೇನೆ, ಆಟೋ ಚಾಲಕರ ಸಂಘಗಳು, ಪೌರ ಕಾರ್ವಿುಕರ ಸಂಘ, ಎಪಿಎಂಸಿ ಹಮಾಲಿ ಕಾರ್ವಿುಕರ ಸಂಘ, ಬೀದಿಬದಿ ವ್ಯಾಪಾರಸ್ಥರ ಸಂಘ, ಇನ್ನಿತರ ಸಂಘಟನೆಗಳು ಬಂದ್​ಗೆ ಬೆಂಬಲ ವ್ಯಕ್ತಪಡಿಸಿವೆ.

    ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ.

    ಭಾಷಾ ತಜ್ಞ ಡಾ. ಜಿ.ಎನ್. ದೇವಿ ಅಧ್ಯಕ್ಷತೆಯಲ್ಲಿ ಎಪಿಎಂಸಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲಡ್ಡದ, ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡೇಕನವರ, ಜೆಡಿಎಸ್​ನ ರಾಜಣ್ಣ ಕೊರವಿ, ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ, ಅನ್ವರ ಮುಧೋಳ, ಬಿ.ಎಸ್. ಸೊಪ್ಪಿನ, ಸಿದ್ದು ತೇಜಿ, ವಿಜಯ ಗುಂಟ್ರಾಳ, ಬಾಬಾಜಾನ ಮುಧೋಳ, ಅಮೃತ ಇಜಾರಿ, ಇನ್ನಿತರರು ಇದ್ದರು.

    ಏನೇನು ಇರಲಿವೆ:

    ಹಾಲು, ಆಸ್ಪತ್ರೆ, ಔಷಧಿ, ಪೆಟ್ರೋಲ್ ಸೇರಿ ಅಗತ್ಯ ವಸ್ತುಗಳು

    * ಹೋಟೆಲ್​ಗಳು

    * ಬ್ಯಾಂಕ್-ಸರ್ಕಾರಿ ಕಚೇರಿಗಳ ಸೇವೆ

    ಏನೇನು ಇರಲಿಕ್ಕಿಲ್ಲ

    * ಎಪಿಎಂಸಿ ದಲಾಲಿ ಅಂಗಡಿಗಳು

    * ಕೆಲವು ಗಂಟೆ ಕಾಲ ಬಸ್ ಸಂಚಾರ

    * ಮಧ್ಯಾಹ್ನದವರೆಗೆ ಕೆಲವು ಅಂಗಡಿ, ಮಾಲ್​ಗಳು

    * ಕೆಲವು ಗಂಟೆ ಕಾಲ ಆಟೋ ಸೇವೆ

    ವಿವಿಧ ಸಂಘಟನೆಗಳ ಬೆಂಬಲ: ಧಾರವಾಡ: ಸೋಮವಾರದ ಕರ್ನಾಟಕ ಬಂದ್​ಗೆ ನಗರದ ಬಹುತೇಕ ಸಂಘಟನೆಗಳು ಬೆಂಬಲ ನೀಡುವ ಮೂಲಕ ಬಂದ್ ಯಶಸ್ವಿಗೊಳಿಸಲು ತೀರ್ವನಿಸಿವೆ. ಈ ವಿಷಯವಾಗಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ಕರ್ನಾಟಕ ಬಂದ್ ಯಶಸ್ವಿ ಮಾಡುತ್ತೇವೆ ಎಂಬ ಸಂದೇಶ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಜತೆಗೆ ರೈತ ಸೇನಾ ಕರ್ನಾಟಕ, ಕೆಆರ್​ಎಸ್ ಮತ್ತು ಗ್ರೀನ್ ಬ್ರಿಗೇಡ್, ದಲಾಲ್ ಮತ್ತು ವರ್ತಕರ ಸಂಘ, ಸಮಾಜ ಪರಿವರ್ತನ ಸಮುದಾಯ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಹೀಗೆ ಅನೇಕ ಸಂಘಟನೆಗಳು ಬೆಂಬಲ ನೀಡಿವೆ.

    ಬಂದ್ ಯಶಸ್ವಿಗೊಳಿಸಲು ಸಭೆ ನಡೆಸಿರುವ ಸಂಘಟನೆಗಳು ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ನಡೆಸಲು ತೀರ್ವನಿಸಿವೆ. ಎಲ್ಲ ಸಂಘಟನೆಗಳೂ ಜುಬಿಲಿ ವೃತ್ತದಲ್ಲಿ ಸಂಘಟನೆಗೊಂಡು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಲಿದ್ದಾರೆ.

    ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸಹ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ವಿಡಿಯೋ ದಾಖಲೀಕರಣಕ್ಕೆ ಸಹ ತೀರ್ವನಿಸಿದೆ ಎನ್ನಲಾಗಿದೆ.

    ದವಸ-ಧಾನ್ಯ ತರಬೇಡಿ: ಕರ್ನಾಟಕ ಬಂದ್ ಕರೆಗೆ ನಗರದ ದಲಾಲ್ ಮತ್ತು ವರ್ತಕರ ಸಂಘ ಸಂಪೂರ್ಣ ಬೆಂಬಲ ನೀಡಿದೆ. ಎಪಿಎಂಸಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಬಂದ್ ಕಾರಣಕ್ಕೆ ರೈತರು ಧಾರವಾಡ ಎಪಿಎಂಸಿಗೆ ಸೆ. 28ರಂದು ಕಾಳು, ದವಸ-ಧಾನ್ಯಗಳನ್ನು ತೆಗೆದುಕೊಂಡು ಬರಬಾರದು ಎಂದು ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts