More

    ಬಂದ್‌ಗೆ ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ  -ಅಂಗಡಿ ಮುಂಗಟ್ಟು ವಹಿವಾಟು ಸ್ಥಗಿತ -ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ

    ದಾವಣಗೆರೆ : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ನೀಡಿದ್ದ ಕರೆಯಂತೆ ಕರ್ನಾಟಕ ಬಂದ್‌ಗೆ ಗುರುವಾರ, ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
    ಬೆಳಗ್ಗೆಯಿಂದಲೇ ನಗರದ ಪಿಬಿ ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಜಯದೇವ ವೃತ್ತ, ಮಹಾತ್ಮಗಾಂಧಿ ವೃತ್ತ, ಕೆ.ಬಿ.ಬಡಾವಣೆ, ಪಿ.ಜೆ. ಬಡಾವಣೆ ಸೇರಿ ವಿವಿಧೆಡೆ ಅಂಗಡಿ ಮುಂಗಟ್ಟುಗಳು, ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು, ಚಿನ್ನದಂಗಡಿಗಳು ಬಂದ್ ಆಗಿದ್ದವು. ಕೆಲವು ಪೆಟ್ರೋಲ್ ಬಂಕ್‌ಗಳ ಹೊರಗೆ ಹಗ್ಗ ಕಟ್ಟಿ ಗ್ರಾಹಕರ ಪ್ರವೇಶ ನಿರ್ಬಂಧಿಸಲಾಗಿತ್ತು.
    ಎಪಿಎಂಸಿ ವಹಿವಾಟು ನಡೆಯಲಿಲ್ಲ. ಕೆಲವು ಬಡಾವಣೆಯಲ್ಲಿ ಬಂದ್ ಪರಿಣಾಮ ಬೀರಲಿಲ್ಲ. ಜನರ ಪ್ರಮಾಣ ತಗ್ಗಿದ್ದರಿಂದ ಖಾಸಗಿ ನಗರ ಸಾರಿಗೆ ಬಸ್‌ಗಳು ಬೀದಿಗಿಳಿಯಲಿಲ್ಲ. ಆದರೆ, ಕೆಲವು ಖಾಸಗಿ ಬಸ್‌ಗಳು ನಗರಕ್ಕೆ ಪ್ರವೇಶವಾಗದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿದವು. ಮಧ್ಯಾಹ್ನದವರೆಗೆ ಖಾಸಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
    ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡಿದವು. ಅಲ್ಲಿಯೂ ಬಂದ್ ಕರೆ ಹಿನ್ನೆಲೆಯಲ್ಲಿ ಎಂದಿಗಿಂದ ಅರ್ಧದಷ್ಟು ಪ್ರಯಾಣಿಕರು ಮಾತ್ರ ಕಂಡುಬಂದರು. ಆಟೋಗಳ ಸಂಚಾರದಲ್ಲಿ ವ್ಯತ್ಯಯವಾಗಲಿಲ್ಲ. ನಗರದಲ್ಲಿ ಬೆರಳೆಣಿಕೆಯ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು.ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
    ಪ್ರತಿಭಟನಾಕಾರರ ಬಂಧನ-ಬಿಡುಗಡೆ
    ಸಿಪಿಐ ಹಾಗೂ ಕನ್ನಡ ಸಮರ ಸೇನೆ ಆಶ್ರಯದಲ್ಲಿ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು. ಕೆಎಸ್ಸಾರ್ಟಿಸಿ (ತಾತ್ಕಾಲಿಕ) ನಿಲ್ದಾಣದಲ್ಲಿ ಬಸ್‌ಗಳ ಸಂಚಾರಕ್ಕೆ ಅಡ್ಡಿಪಡಿಸಿದಾಗ ಮುಂಜಾಗ್ರತಾ ಕ್ರಮವಾಗಿ ಆವರಗೆರೆ ಎಚ್.ಜಿ.ಉಮೇಶ್, ಐರಣಿ ಚಂದ್ರು, ಸುರೇಶ್ ಐಗೂರು, ಕಿರಣ್ ಸೇರಿ ಒಂಬತ್ತು ಮಂದಿಯನ್ನು ಬಂಧಿಸಿ ಡಿಎಆರ್ ಮೈದಾನದಲ್ಲಿ ಇರಿಸಿ ಕೆಲ ಸಮಯದ ನಂತರ ಬಿಡುಗಡೆ ಮಾಡಲಾಯಿತು.
    ಡಿಸಿ ಕಚೇರಿಗೆ ಮನವಿ ಸಲ್ಲಿಕೆ
    ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟನೆಗೆ ಮುಂದಾಗಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರನ್ನು ಪೊಲೀಸರು ತಡೆದರು. ರಸ್ತೆ ನಡೆ ನಡೆಸಿದರೆ ಬಂಧಿಸುವುದಾಗಿ ಎಚ್ಚರಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಎಡಿಸಿ ಪಿ.ಎನ್.ಲೋಕೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಕಾವೇರಿ ನೀರಿಗೆ ಪರ್ಯಾಯ ಕ್ರಮಕ್ಕೆ ಮುಂದಾಗಬೇಕು. ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ರಾಷ್ಟ್ರೀಯ ಜಲನೀತಿ ರೂಪಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕು. ಸುಪ್ರೀಂಕೋರ್ಟ್‌ಗೆ ಕಾವೇರಿ ನೀರಿನ ಕುರಿತು ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕೆಂದು ಆಗ್ರಹಿಸಿದರು.
    ಅಲ್ಲಿಂದ ತೆರಳಿ ಬೆಸ್ಕಾಂ ಕಚೇರಿ, ಕೆಲ ಬ್ಯಾಂಕ್, ಹೋಟೆಲ್‌ಗಳನ್ನು ರೈತರು ಮುಚ್ಚಿಸಿದರು. ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಕುರುವ ಗಣೇಶ್, ಜಿಲ್ಲಾಧ್ಯಕ್ಷ ಪಿ.ಪಿ.ಮರುಳಸಿದ್ದಯ್ಯ, ಹೊನ್ನೂರು ರಾಜು ಇತರರಿದ್ದರು.
    ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂಘದ ಅಧ್ಯಕ್ಷ ವಿ. ಅವಿನಾಶ್ ನೇತೃತ್ವದಲ್ಲಿ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿಪತ್ರ ಸಲ್ಲಿಸಿದರು. ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ವಕ್ತಾರ ಶಿವರತನ್, ಎನ್. ವಿ. ಅರುಣಕುಮಾರ್, ಕೆ.ಜಿ.ಶಿವಕುಮಾರ್, ಟಿ.ಶಿವಕುಮಾರ್ ಇತರರು ಕೂಡ ವಿವಿಧೆಡೆ ತೆರಳಿ ಅಂಗಡಿ ಮುಂಗಟ್ಟು ಮುಚ್ಚುವಂತೆ ಮನವಿ ಮಾಡಿದರು.
    ಜೈ ಕರುನಾಡ ವೇದಿಕೆ ಕಾರ್ಯಕರ್ತರು ಆಟೋಗಳೊಂದಿಗೆ ಸಂಚರಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜಿಲಾಧ್ಯಕ್ಷ ಪರಶುರಾಂ ನಂದಿಗಾವಿ, ಬಾಳೆಕಾಯಿ ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts