More

    ಬಂಡಾಯದ ನಾಡು ಭಣಭಣ

    ನರಗುಂದ: ಭಾರತದಲ್ಲಿ ಕರೊನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿದ್ದ ಭಾನುವಾರದ ಜನತಾ ಕರ್ಫ್ಯೂಗೆ ತಾಲೂಕಿನಾದ್ಯಂತ ಭಾರಿ ಜನ ಬೆಂಬಲ ವ್ಯಕ್ತವಾಗಿದೆ.

    ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಕರ್ಫ್ಯೂ ಸಂದರ್ಭದಲ್ಲಿ ಮನೆಯಿಂದ ಯಾರೊಬ್ಬರು ಹೊರಗೆ ಬಾರದ್ದರಿಂದ ತಾಲೂಕು ಸಂಪೂರ್ಣ ಸ್ತಬ್ಧಮಯವಾಗಿತ್ತು. ಪ್ರತಿನಿತ್ಯ ಸದಾ ಜನ ಜಂಗುಳಿಯಿಂದ ಗಿಜುಗುಡುತ್ತಿದ್ದ ಬಸ್ ನಿಲ್ದಾಣ, ಕಾಯಿಪಲ್ಲೆ ಮಾರುಕಟ್ಟೆ ಪ್ರದೇಶಗಳು ಜನರಿಲ್ಲದೇ ಸಂಪೂರ್ಣ ಬಿಕೋ ಎನ್ನುತ್ತಿದ್ದವು. ಯಾವುದೇ ಸರ್ಕಾರಿ ಹಾಗೂ ಖಾಸಗಿ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ಆದರೆ, ಕೆಲವೊಂದು ಲಾರಿ, ದ್ವಿಚಕ್ರ ವಾಹನ ಸವಾರರು ತಮ್ಮ ಅಗತ್ಯ ಕೆಲಸದ ನಿಮಿತ್ತ ಪ್ರಯಾಣಿಸಿದ್ದು ಕಂಡು ಬಂತು.

    ಅಂಗಡಿ-ಮುಗ್ಗಟ್ಟು, ಹೋಟೆಲ್​ಗಳು, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್​ಗಳು, ತಾಲೂಕಾಡಳಿತದ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳ ಕಚೇರಿ, ಎಟಿಎಂ, ಪೆಟ್ರೋಲ್ ಬಂಕ್​ಗಳು ಕೂಡ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದರಿಂದ ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ತುಂಬಾ ವಿರಳವಾಗಿದ್ದವು. ಅಲ್ಲದೆ, ಪಟ್ಟಣದ ಕೆಲ ಪ್ರಮುಖ ದೇವಸ್ಥಾನಗಳಿಗೂ ಕೂಡ ಬೀಗ ಜಡಿಯುವ ಮೂಲಕ ಮೋದಿ ಕರೆಯ ಜನತಾ ಕರ್ಫ್ಯೂಗೆ ನಿರೀಕ್ಷೆಗೂ ಮೀರಿ ಸಾಕಷ್ಟು ಬೆಂಬಲ ವ್ಯಕ್ತವಾಯಿತು. ಮಾ. 31ರವರೆಗೆ ಜಿಲ್ಲಾದ್ಯಂತ 144 ಕಲಂ ಜಾರಿಗೊಳಿಸಿದ ಹಿನ್ನೆಲೆ ಪೊಲೀಸರು ಪಟ್ಟಣದ ಪ್ರಮುಖ ವರ್ತಲಗಳಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವುದು ಕಂಡು ಬಂತು.

    ಮಾನವೀಯತೆ ಮೆರೆದರು: ಜನತಾ ಕರ್ಫ್ಯೂ ಬೆಂಬಲಿಸಿ ನರಗುಂದ ತಾಲೂಕು ಭಾನುವಾರ ಸಂಪೂರ್ಣ ಸ್ತಬ್ಧವಾದ ಹಿನ್ನೆಲೆ ಪಟ್ಟಣದ ವಿವಿಧೆಡೆ ಬಹು ದಿನಗಳಿಂದ ನೆಲೆಸಿದ್ದ ಭಿಕ್ಷುಕರು, ನಿರ್ಗತಿಕರಿಗೆ ಬೆಳಗ್ಗೆಯಿಂದ ತಿನ್ನಲು ಆಹಾರವಿಲ್ಲದೇ ಸಂಕಷ್ಟ ಎದುರಿಸಬೇಕಾಯಿತು. ಆದರೆ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಹಿತಿಯರಿತ ರೈತ ಸಂಘದ ಕೆಲ ಸದಸ್ಯರು ಭಿಕ್ಷುಕರು, ಅನಾಥರು, ಬುದ್ಧಿಮಾಂದ್ಯರು ಹಾಗೂ ಅಂಗವಿಕಲ ವಯೋವೃದ್ಧೆಯರಿಗೆ ಉಚಿತವಾಗಿ ಬ್ರೇಡ್ ಮತ್ತು ಬಿಸ್ಕೇಟ್​ಗಳನ್ನು ನೀಡಿ ಮಾನವೀಯತೆ ಮೆರೆದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts