More

    27ರಂದು ಗ್ರಾಮ, ತಾಲೂಕು ಬಂದ್

    ಶಿವಮೊಗ್ಗ: ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಫೆ.27ರಂದು ಗ್ರಾಮ ಹಾಗೂ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 11ಕ್ಕೆ ಮಲವಗೊಪ್ಪದ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ತಿಳಿಸಿದರು.

    ರೈತರ ಹಕ್ಕುಗಳಿಗಾಗಿ ದೆಹಲಿ ಗಡಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತರ ಆಗ್ರಹಕ್ಕೆ ಮಣಿಯುತ್ತಿಲ್ಲ. ಹೀಗಾಗಿ ಎಲ್ಲರೂ ರೈತರ ಆಗ್ರಹಕ್ಕೆ ದನಿಯಾಗಬೇಕು. ಗ್ರಾಮ ಹಾಗೂ ತಾಲೂಕು ಬಂದ್‌ಗೆ ಬೆಂಬಲ ನೀಡಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಬೇಕೆಂಬುದು ರೈತರ ಪ್ರಮುಖ ಆಗ್ರಹವಾಗಿದೆ. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಯಾರಾದರೂ ಖರೀದಿ ಮಾಡಿದರೆ ಶಿಕ್ಷಾರ್ಹ ಅಪರಾಧ ಎಂಬುದನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು. ಈಗಾಗಲೇ ನಾಲ್ಕು ಸುತ್ತಿನ ಮಾತುಕತೆ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ನಡೆದಿದೆ. ಆದರೂ ರೈತರ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಹೋರಾಟ ಮುಂದುವರಿಸುವುದು ಅನಿವಾರ್ಯವಾಗಿದೆ ಎಂದರು.
    ಈಗಾಗಲೇ ತೋಟಗಾರಿಕೆ ಸೇರಿದಂತೆ ಹಲವು ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅವುಗಳನ್ನು ಮತ್ತೆ ಪಟ್ಟಿಗೆ ಸೇರಿಸಬೇಕು. ಅಗತ್ಯವಸ್ತುಗಳ ನಿರ್ವಹಣಾ ಕಾಯ್ದೆಯನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಅದನ್ನು ಪುನಃ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
    ರಾಜ್ಯ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಇನ್ನಷ್ಟು ಒತ್ತು ನೀಡಬೇಕಿತ್ತು. ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ಹಣ ಮೀಸಲಿಡಬೇಕಿತ್ತು. ಕೇಂದ್ರ ಸರ್ಕಾರ ಅನುದಾನ ನೀಡಲಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವೂ ಅದೇ ಹಾದಿಯಲ್ಲಿ ಸಾಗುವುದು ಸರಿಯಲ್ಲ ಎಮದು ಅಭಿಪ್ರಾಯಪಟ್ಟರು.
    ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಎಚ್.ಎಸ್.ಜಗದೀಶ್, ಕೆ.ಎಸ್.ಪುಟ್ಟಪ್ಪ, ಮಂಜುನಾಥೇಶ್ವರ, ಕೆ.ಆರ್.ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts