More

    ಬಂಡವಾಳಶಾಹಿ ಪರ ಪಕ್ಷಗಳಿಂದ ಸಂಪತ್ತು ಲೂಟಿ

    ಕಲಬುರಗಿ: ಸ್ವಾತಂತ್ರ್ಯನಂತರ ಆಳ್ವಿಕೆ ನಡೆಸಿರುವ ಕಾಂಗ್ರೆಸ್, ಜನತಾ ಪಕ್ಷ, ಬಿಜೆಪಿ ಇತರ ಪಕ್ಷಗಳು ದೇಶದ ಬಂಡವಾಳಶಾಹಿಗಳ ಅಡಿಯಾಳಿನಂತೆ ಸೇವೆ ಮಾಡಿ, ಅವರ ಸಂಪತ್ತನ್ನು ಲಕ್ಷಾಂತರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿವೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್‌ಯುಸಿಐಸಿ) ಪಕ್ಷದ ಪಾಲಿಟ್ ಬ್ಯುರೋ ಸದಸ್ಯ ಕೆ.ರಾಧಾಕೃಷ್ಣ ವಾಗ್ದಾಳಿ ನಡೆಸಿದರು.

    ಡಾ.ಎಸ್.ಎಂ.ಪAಡಿತ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅಪ್ರತಿಮ ಚಿಂತಕ, ತತ್ವಜ್ಞಾನಿ ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವ ವರ್ಷಾಚರಣೆ ಸಮಾರೋಪದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ದೇಶದ ಶೇ.೬೨ ಸಂಪತ್ತು ಬರೀ ಶೇ.೧ ಜನರಲ್ಲಿ ಶೇಖರಣೆಗೊಂಡಿದೆ. ಬಂಡವಾಳಶಾಹಿಗಳಿಗೆ ದೇಶದ ಸಂಪತ್ತು ಕೊಳ್ಳೆ ಹೊಡೆಯಲು ಅನುವು ಮಾಡುವಂಥ ನೀತಿಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ರೂಪಿಸುತ್ತ ಜನಸಾಮಾನ್ಯರ ಹಿತವನ್ನು ಸಂಪೂರ್ಣ ಕಡೆಗಣಿಸಿವೆ ಎಂದು ಕಿಡಿಕಾರಿದರು.

    ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ್ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಕೆಲವರ ಜತೆಗೂಡಿ ಶಿವದಾಸ್ ಘೋಷ್ ಪ್ರಾರಂಭಿಸಿದ ಪಕ್ಷ ಇಂದು ೨೭ ರಾಜ್ಯಗಳಲ್ಲಿ ಹೋರಾಟಗಳನ್ನು ಬೆಳೆಸುತ್ತಿದೆ. ಕಾರ್ಮಿಕರು, ರೈತರು, ವಿದ್ಯಾರ್ಥಿ, ಯುವಜನ, ಮಹಿಳೆಯರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿದೆ ಎಂದರು.

    ರಾಯಚೂರು ಜಿಲ್ಲಾ ಕಾರ್ಯದರ್ಶಿ ಡಾ.ಚಂದ್ರಗಿರೀಶ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಟಿ.ಎಸ್. ಸುನೀತಕುಮಾರ, ಎಂ.ಶಶಿಧರ, ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ ಇತರರಿದ್ದರು.

    ಭಾವಚಿತ್ರದೊಂದಿಗೆ ಮೆರವಣಿಗೆ
    ಕಾರ್ಯಕ್ರಮಕ್ಕೂ ಮೊದಲು ಎಸ್‌ವಿಪಿ ವೃತ್ತದಿಂದ ಡಾ.ಎಸ್.ಎಂ. ಪಂಡಿತ ರಂಗಮಂದಿರವರೆಗೆ ಶಿವದಾಸ್ ಘೋಷ್ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆ ನಡೆಯಿತು. ಎಸ್.ಎಂ. ಶರ್ಮಾ, ಮಹೇಶ ಎಸ್.ಬಿ., ರಾಧಾ, ಮಹೇಶ ನಾಡಗೌಡ, ಡಾ.ಸೀಮಾ ದೇಶಪಾಂಡೆ, ಸ್ನೇಹಾ ಕಟ್ಟಿಮನಿ, ಹಣಮಂತ ಎಸ್.ಎಚ್ ಸೇರಿ ಕಲಬುರಗಿ, ವಿಜಯಪುರ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳು ಪಾಲ್ಗೊಂಡಿದ್ದರು.

    ಶೋಷಣೆರಹಿತ ಸಮಾಜವಾದಿ ವ್ಯವಸ್ಥೆ ರೂಪಿಸಲು ಕ್ರಾಂತಿಗೆ ಎಲ್ಲರೂ ಸಜ್ಜಾಗಬೇಕಾಗಿದೆ. ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವಕ್ಕೆ ಅರ್ಥ ಬರಲು ದೇಶದ ದುಡಿಯುವ ವರ್ಗ, ವಿಮೋಚನೆ ಮಾರ್ಗ ತೋರಿಸಿದ ಅವರ ಚಿಂತನೆ ಮೈಗೂಡಿಸಿಕೊಂಡು ಮುನ್ನಡೆಯಬೇಕು.
    | ಕೆ.ರಾಧಾಕೃಷ್ಣ
    ಎಸ್‌ಯುಸಿಐಸಿ ಪಾಲಿಟ್ ಬ್ಯುರೋ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts