More

    ಬಂಡವಾಳಶಾಹಿ ಪರ ನಿಂತರೆ ತಕ್ಕಪಾಠ

    ಹಾವೇರಿ: ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಶುಕ್ರವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

    ನೂರಾರು ರೈತರು ನಗರದ ಮುರುಘಾಮಠದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಿದ್ದಪ್ಪ ಹೊಸಮನಿ ವೃತ್ತಕ್ಕೆ ಆಗಮಿಸಿ 2ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿದರು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

    ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕವಾಗಿದೆ. ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ಯಾವುದೇ ದೇಶ, ರಾಜ್ಯದ ವ್ಯಕ್ತಿ ಗರಿಷ್ಠ 437ಎಕರೆ ಜಮೀನು ಖರೀದಿಸಬಹುದಾಗಿದ್ದು, ಈ ಕಾಯ್ದೆ ಕಾಪೋರೇಟ್ ಕಂಪನಿಗಳಿಗೆ ವರದಾನವಾಗಿದೆ ಎಂದು ದೂರಿದರು.

    ಹಣದ ಆಮಿಷಕ್ಕಾಗಿ ಬಡ ರೈತರು ಭೂಮಿ ಕಳೆದುಕೊಂಡು ಬೀದಿಗೆ ಬೀಳುವ ಜತೆಗೆ ಕೃಷಿ ಭೂಮಿ ಉಳ್ಳವರ ಪಾಲಾಗಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ ಎಂದು ಬಂಡವಾಳಶಾಹಿಗಳ ಪರ ಕಾಯ್ದೆಗಳನ್ನು ಬಿಜೆಪಿಯವರು ಜಾರಿಗೊಳಿಸಲು ಮುಂದಾದರೆ ಮುಂದೆ ಚುನಾವಣೆಯಲ್ಲಿ ರೈತರು ತಕ್ಕಪಾಠ ಕಲಿಸುತ್ತಾರೆ. ಎಲ್ಲ ಸಂಸದರು ಇದನ್ನು ಅರಿತು ಪ್ರಧಾನಿಗೆ ಮನವರಿಕೆ ಮಾಡಬೇಕು ಎಂದರು.

    ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನ ಪ್ರಗತಿಪರ ಚಿಂತಕರು, ಸಾಹಿತಿಗಳು, ರೈತ ಮುಖಂಡರು ಹಾಗೂ ವಿಪಕ್ಷದವರೊಂದಿಗೆ ರ್ಚಚಿಸಬೇಕಿತ್ತು. ಅಲ್ಲದೆ, ಕರೊನಾದಂತಹ ಸಮಯದಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆಗೆ ಜೆಡಿಎಸ್, ಎಸ್​ಎಫ್​ಐ, ಡಿವೈಎಫ್​ಐ, ವಿವಿಧ ಕಾರ್ವಿುಕ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಹ್ಮದ್​ಗೌಸ್ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಗೋವಿ, ಮಂಜುಳಾ ಅಕ್ಕಿ, ರುದ್ರಗೌಡ ಕಾಕನಗೌಡ್ರ, ಮರಿಗೌಡ ಪಾಟೀಲ, ಸುರೇಶ ಚಲವಾದಿ, ದಿಳ್ಳೆಪ್ಪ ಮಣ್ಣೂರ, ಪ್ರಭುಗೌಡ ಪಾಟೀಲ, ಕರಬಸಪ್ಪ ಅಗಸಿಬಾಗಿಲು ಸೇರಿ ನೂರಾರು ರೈತರರು ಪಾಲ್ಗೊಂಡಿದ್ದರು.

    ಆಸ್ಪತ್ರೆ ಅವ್ಯವಸ್ಥೆ ಪ್ರಸ್ತಾಪ

    ಪ್ರತಿಭಟನೆಯ ವೇಳೆ ಕೆಲ ರೈತರು ಹಿರೇಕೆರೂರಿನ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ ಎಂದು ಪ್ರಸ್ತಾಪಿಸಿದರು. 30 ವರ್ಷದ ಗರ್ಭಿಣಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಬಂದರೆ ಸೇರಿಸಿಕೊಂಡಿಲ್ಲ. ರೈತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಅಲ್ಲದೆ, ಸ್ಥಳಕ್ಕೆ ಡಿಎಚ್​ಒ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಸುದ್ದಿ ತಿಳಿದು ಡಿಎಚ್​ಒ ಪರವಾಗಿ ಆರ್​ಸಿಎಚ್ ಡಾ. ಎಂ. ಜಯಾನಂದ ಆಗಮಿಸಿ ಹಿರೇಕೆರೂರ ಸರ್ಕಾರಿ ಆಸ್ಪತ್ರೆಗೆ ಸಿಬ್ಬಂದಿ ನೇಮಕ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

    ತಹಸೀಲ್ದಾರ್​ಗೆ ಮನವಿ

    ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳ ವತಿಯಿಂದ ರಾಣೆಬೆನ್ನೂರ ತಾಲೂಕಿನ ಚಳಗೇರಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರ ಜಾರಿಗೊಳಿಸಿದ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಮಾರಕವಾಗಿವೆ. ಇವುಗಳನ್ನು ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್ ಬಸನಗೌಡ ಕೋಟೂರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರಮುಖರಾದ ರವೀಂದ್ರಗೌಡ ಪಾಟೀಲ, ಎಸ್.ಡಿ. ಹಿರೇಮರ, ಸುರೇಶಪ್ಪ ಗರಡಿಮನಿ, ಬಸಣ್ಣ ಕೊಂಗಿ, ದಿಳ್ಳೆಪ್ಪ ಸತ್ಯಪ್ಪನವರ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಬಿ.ಕೆ. ರಾಜನಹಳ್ಳಿ, ನಾಗರಾಜ ಸೂರ್ವೆ, ಯಲ್ಲಪ್ಪ ಚಿಕ್ಕಣ್ಣನವ, ರಂಗಪ್ಪ ತಳವಾರ, ಚಂದ್ರಣ್ಣ ಬೇಡರ, ಶಿವು ಮಾಕನೂರ, ಮಂಜು ಸಾವಂತ್ಲವರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts