More

    ಫ್ಲೈ ಓವರ್ ನಿರ್ಮಾಣ ಶೀಘ್ರ ಶುರು

    ಹುಬ್ಬಳ್ಳಿ: ಸಂಚಾರ ಸುಧಾರಣೆಗೆ ಬಹುದೊಡ್ಡ ಕೊಡುಗೆ ನೀಡುವ ನಿರೀಕ್ಷೆ ಮೂಡಿಸಿರುವ ಹುಬ್ಬಳ್ಳಿಯ ಫ್ಲೈ ಓವರ್ ನಿರ್ಮಾಣ ಕಾಮಗಾರಿಯು ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ.

    ಐಟಿ ಪಾರ್ಕ್ ಎದುರಿನ ಇಂದಿರಾ ಗಾಜಿನ ಮನೆ ಪಕ್ಕದ ರಸ್ತೆಯಲ್ಲಿ ಕಾಮಗಾರಿಯು ಇನ್ನೆರಡು ವಾರಗಳಲ್ಲಿಯೇ ಪ್ರಾರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಚನ್ನಮ್ಮ ವೃತ್ತದಿಂದ ಹೊಸೂರವರೆಗೆ ಹಾಗೂ ಗೋಕುಲ ರಸ್ತೆಯಲ್ಲಿ ಮೊದಲ ಹಂತದ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಭಾಗದಲ್ಲಿ ಕೆಲಸ ಪೂರ್ಣಗೊಂಡ ನಂತರ ಸ್ಟೇಶನ್ ರಸ್ತೆ ಹಾಗೂ ಕುಸುಗಲ್ಲ ರಸ್ತೆಯಲ್ಲಿ ಕಾಮಗಾರಿ ಮುಂದುವರಿಸಲು ಉದ್ದೇಶಿಸಲಾಗಿದೆ.

    ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ವಾಹನಗಳ ಸಂಚಾರವನ್ನು ಬೇರೆ ಮಾರ್ಗಗಳತ್ತ ತಿರುಗಿಸಲು ಆಲೋಚಿಸಲಾಗುತ್ತಿದೆ. ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಹರಿಯಾಣ ಮೂಲದ ಜಾಂಡು ಕನ್​ಸ್ಟ್ರಕ್ಸನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆ, ಪಿಡಬ್ಲುಡಿ ರಾಷ್ಟ್ರೀಯ ಹೆದ್ದಾರಿ ಘಟಕ ಹಾಗೂ ಪೊಲೀಸ್ ಇಲಾಖೆ ಮಧ್ಯೆ ಈ ಕುರಿತಂತೆ ಮಾತುಕತೆ ನಡೆಯುತ್ತಿದೆ.

    ಪ್ಲೈ ಓವರ್​ಗಾಗಿ ಒಟ್ಟು 75 ಪಿಲ್ಲರ್​ಗಳನ್ನು (ಕಂಬ) ನಿರ್ವಿುಸಲು ಉದ್ದೇಶಿಸಲಾಗಿದೆ. ಆದರೆ, ಅಗತ್ಯಕ್ಕೆ ತಕ್ಕಂತೆ ಈ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಗುತ್ತಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ.

    ನಗರ ಹೊರವಲಯದ ಗಬ್ಬೂರ ರಸ್ತೆಯಲ್ಲಿ ಜಾಂಡು ಕನ್​ಸ್ಟ್ರಕ್ಸನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆಯವರು 15 ಎಕರೆ ಜಾಗದಲ್ಲಿ ಕಚೇರಿ ಪ್ರಾರಂಭಿಸುವುದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಇದೇ ಜಾಗದಲ್ಲಿ ಪಿಲ್ಲರ್​ಗಳ ತಯಾರಿ ಹಾಗೂ ಇತರ ಸಿದ್ಧತೆಗಳು ಪ್ರಾರಂಭಗೊಳ್ಳಲಿವೆ.

    ಈಗಾಗಲೇ ಹರಿಯಾಣ ಹಾಗೂ ಕರ್ನಾಟಕದ ವಿವಿಧೆಡೆಯ ಸುಮಾರು 30 ಸಿಬ್ಬಂದಿ ನಗರಕ್ಕೆ ಆಗಮಿಸಿದ್ದಾರೆ. ಕಾಮಗಾರಿ ಪ್ರಾರಂಭಗೊಳ್ಳುವ ಪೂರ್ವದಲ್ಲಿಯೇ ಮತ್ತೆ 300ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಕಾರ್ವಿುಕರು ನಗರಕ್ಕೆ ಆಗಮಿಸಲಿದ್ದಾರೆ.

    ಅಂದಾಜು 322 ಕೋಟಿ ರೂ. ವೆಚ್ಚದಲ್ಲಿ ಒಟ್ಟು 3.9 ಕಿಮೀ ಉದ್ದದ ಮಾರ್ಗದಲ್ಲಿ ಫ್ಲೈ ಓವರ್ ನಿರ್ವಣಗೊಳ್ಳಲಿದೆ.

    ಮಣ್ಣು ಪರೀಕ್ಷೆ ವರದಿ ಸಕಾರಾತ್ಮಕ

    ಫ್ಲೈ ಓವರ್​ಗೆ ಪಿಲ್ಲರ್​ಗಳ ಅಳವಡಿಕೆಗಾಗಿ ನಗರದ ಸ್ಟೇಶನ್ ರಸ್ತೆ, ಕುಸುಗಲ್ಲ ರಸ್ತೆ, ಗೋಕುಲ ರಸ್ತೆ ಹಾಗೂ ಧಾರವಾಡ ರಸ್ತೆಯಲ್ಲಿ ಸಂಗ್ರಹಿಸಿದ್ದ ಮಣ್ಣಿನ ಪರೀಕ್ಷೆಯ ವರದಿಯು ಬಹುತೇಕವಾಗಿ ಸಕಾರಾತ್ಮಕವಾಗಿಯೇ ಬಂದಿದೆ. ಈ ಹಿನ್ನೆಲೆಯಲ್ಲಿ ಜಾಂಡು ಕನ್​ಸ್ಟ್ರಕ್ಸನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಸಿಬ್ಬಂದಿಯು ಶೀಘ್ರವೇ ಕಾಮಗಾರಿ ಆರಂಭಿಸುವುದಕ್ಕಾಗಿ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.

    ಜಾಂಡು ಕನ್​ಸ್ಟ್ರಕ್ಸನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆಯವರು ಫ್ಲೈ ಓವರ್ ವಿನ್ಯಾಸ ರಚಿಸುತ್ತಿದ್ದಾರೆ. ವಿನ್ಯಾಸಕ್ಕೆ ಅನುಮೋದನೆ ದೊರೆತ ನಂತರ ಕಾಮಗಾರಿ ಪ್ರಾರಂಭಿಸಲಿದ್ದಾರೆ.

    ರಾಜೇಂದ್ರ ಹುರಕಡ್ಲಿ, ಕಾರ್ಯನಿರ್ವಾಹಕ ಇಂಜಿನಿಯರ್, ಪಿಡಬ್ಲ್ಯುಡಿ ಎನ್​ಎಚ್, ಹುಬ್ಬಳ್ಳಿ

    10 ರಿಂದ 15 ದಿನಗಳಲ್ಲಿ ಫ್ಲೈ ಓವರ್ ಕಾಮಗಾರಿ ನಿರ್ಮಾಣ ಪ್ರಾರಂಭಗೊಳ್ಳಲಿದೆ. ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ.

    -ನಾಗೇಂದ್ರ ಠಾಕೂರ, ಪ್ರೊಜೆಕ್ಟ್ ಕೋ ಆರ್ಡಿನೇಟರ್, ಜಾಂಡು ಕನ್​ಸ್ಟ್ರಕ್ಸನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts