More

    ಫೋನ್ ಮಾಡಿದರೆ ಸಾಕು ಇದ್ದಲ್ಲಿಗೆ ಫುಡ್

    ಯಾದಗಿರಿ: ಜಿಲ್ಲಾದ್ಯಂತ ಕಳೆದೊಂದು ತಿಂಗಳಿಂದ ಲಾಕ್ಡೌನ್ ಜಾರಿಯಲ್ಲಿದ್ದು, ನಗರದಲ್ಲಿನ ವೀರಶೈವ ಮಹಾಸಭಾದ ಯುವ ಘಟಕ ಹಾಗೂ ಸತೀಶ ಕಂದಕೂರ ಅಭಿಮಾನಿ ಬಗಳದಿಂದ ಕರೊನಾ ಸಮರದಲ್ಲಿ ನಿರತರಾದ ಸಿಬ್ಬಂದಿಗಳಿಗೆ ಹಾಗೂ ಅನ್ನದ ಅವಶ್ಯಕತೆ ಇರುವ ನಿರ್ಗತಿಕರಿಗೆ ವಿಭಿನ್ನ ಶೈಲಿಯಲ್ಲಿ ಅನ್ನದಾಸೋಹ ನಡೆಸುತ್ತಿದ್ದಾರೆ.

    ಕಳೆದ 20 ದಿನಗಳಿಂದ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅವಿನಾಶ ಜಗನ್ನಾಥ ನೇತೃತ್ವದ ಟೀಮ್ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಪ್ರತಿನಿತ್ಯ ಬೆಳಗ್ಗೆ ಬಿಸಿಬಿಸಿ ಪಲಾವ್ ಸಿದ್ದಪಡಿಸಿ ಒಂದು ಫೋನ್ ಮಾಡಿದರೆ ಸಾಕು ಇದ್ದಲ್ಲಿಗೆ ತೆರಳಿ ಶುಚಿ ರುಚಿ ಊಟ ಹಾಗೂ ಶುದ್ಧ ಕುಡಿಯುವ ನೀರಿನ ಕೊಡುವ ವ್ಯವಸ್ಥೆಯನ್ನು ಯುವಕರು ಮಾಡುತ್ತಿದ್ದಾರೆ.

    ಅನಾರೋಗ್ಯದ ನಿಮಿತ್ತ ಗ್ರಾಮೀಣ ಭಾಗದಿಂದ ಖಾಸಗಿ ಹಾಗೂ ಜಿಲ್ಲಾಸ್ಪತ್ರೆಗೆ ಬರುವ ಜನತೆಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದರ ಜತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗಕ್ಕೂ ಸಹ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

    ಸಧ್ಯ ಬೇಸಿಗೆ ಇರುವುದರಿಂದ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಹೀಗಾಗಿ ಈ ಯುವಕರ ತಂಡ ವಾಹನದ ಮೂಲಕ ಮಧ್ಯಾಹ್ನದ ಊಟದ ವೇಳೆ ಆಯಾ ಕಚೇರಿ ಸೇರಿದಂತೆ ನಿರ್ಗತಿಕರು, ಬಡವರ್ಗದ ಜನತೆ ಇರುವ ಸ್ಥಳಕ್ಕೆ ತೆರಳಿ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದೆ. ಆಹಾರ ತಯಾರಿಸಿ ಪ್ಯಾಕ್ ಮಾಡುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದ್ದು, ವಿತರಣೆ ಸಂದರ್ಭದಲ್ಲೂ ಕರೊನಾ ವೈರಸ್ನ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಸಧ್ಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವೇಳೆ ಮಾತನಾಡಿದ ಅವಿನಾಶ, ಲಾಕ್ಡೌನ್ ಜಾರಿಯಾದಾಗಿನಿಂದ ನಮ್ಮ ತಂಡದ ಸದಸ್ಯರು ಪ್ರತಿನಿತ್ಯ ಬಿಸಿಬಿಸಿ ಆಹಾರ ಸಿದ್ದಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೆ ಇದು ಪ್ರಚಾರಕ್ಕೆ ಮಾಡುತ್ತಿಲ್ಲ. ಸಮಸ್ಯೆಗೆ ಸಿಲುಕಿದವರಿಗೆ ಆಸರೆಯಾಗುವ ನಿಟ್ಟಿನಲ್ಲಿ ಈ ಕಾರ್ಯ ಮಾಡುತ್ತಿದ್ದು, ನಿರಂತರವಾಗಿ ಮುಂದುವರೆಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts