More

    ಫೆ. 26, 27ರಂದು ಬೃಹತ್ ಉದ್ಯೋಗ ಮೇಳ

    ಚಿತ್ರದುರ್ಗ: ರಾಜ್ಯ ಕೌಶಲಾಭಿವೃದ್ಧಿ ನಿಗಮದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ. 26, 27ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌಶಲ ಮಿಷನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

    ಮೇಳದಲ್ಲಿ 500ಕ್ಕೂ ಹೆಚ್ಚು ಖಾಸಗಿ ಕಂಪನಿ ಪಾಲ್ಗೊಳ್ಳಲಿವೆ. 1 ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕುವ ನಿರೀಕ್ಷೆ ಇದೆ ಎಂದರು.

    ಜಿಲ್ಲೆಯ ಎಲ್ಲ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರು ತಪ್ಪದೇ https://skillconnect.kaushalkar.com ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು, ಈ ವಿಫುಲ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮೇಳವನ್ನು ಆಯೋಜಿಸಿದೆ. 18 ವರ್ಷ ತುಂಬಿದ, ಎಸ್ಸೆಸ್ಸೆಲ್ಸಿಯಿಂದ ಇಂಜಿನಿಯರಿಂಗ್ ಪದವಿ ಸೇರಿ ಇನ್ನಿತರೆ ವಿದ್ಯಾರ್ಹತೆಯುಳ್ಳ ಆಸಕ್ತರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

    ಬೆಂಗಳೂರು ಚಿತ್ರದುರ್ಗ ಜಿಲ್ಲೆಗೆ ಹತ್ತಿರವಿದ್ದು, ಸಾರಿಗೆ ಸೌಲಭ್ಯವಿದೆ. ಯುವನಿಧಿಯಡಿ ನೋಂದಣಿ ಮಾಡಿಕೊಂಡವರಿಗೂ ಇದೊಂದು ಸದಾವಕಾಶ. ಅಲ್ಲದೆ, ಎಲ್ಲ ಕಾಲೇಜುಗಳ ಪ್ರಾಂಶುಪಾಲರು ಈಗಾಗಲೇ ತೇರ್ಗಡೆ ಹೊಂದಿದ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ವಿವರವನ್ನು ಸ್ಕಿಲ್ ಕನೆಕ್ಟ್‌ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು ಎಂದು ಸೂಚಿಸಿದರು.

    ಬೀದಿ ಬದಿ ವ್ಯಾಪಾರಿಗಳ ಕೌಟುಂಬಿಕ ಸಮೀಕ್ಷೆ: ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ಯೋಜನೆಯಡಿ ನೋಂದಣಿಯಾಗಿ ಸಾಲ ಪಡೆದ ಫಲಾನುಭವಿಗಳ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಶೀಘ್ರವೇ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಈ ಕುಟುಂಬಗಳಿಗೆ ಸ್ವನಿಧಿ ಸಮೃದ್ಧ್, ಪಿಎಂ ಸುರಕ್ಷಾ ಬೀಮಾ, ಜೀವನ್ ಜ್ಯೋತಿ ಬೀಮಾ, ಶ್ರಮಯೋಗಿ ಮನ್ ಧನ್, ಒನ್ ನೇಷನ್ ಒನ್ ರೇಷನ್ ಕಾರ್ಡ್, ಜನಧನ್, ಜನನಿ ಸುರಕ್ಷಾ, ಮಾತೃ ವಂದನಾ ಹಾಗೂ ಲೇಬರ್ ಕಾರ್ಡ್ ಹಣಕಾಸು ಸೌಲಭ್ಯ ಸಮೀಕ್ಷೆ ಆಧಾರದಲ್ಲಿ ನೀಡಲಾಗುವುದು ಎಂದರು.

    ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ವೇಮಣ್ಣ, ಕೌಶಲ ಮಿಷನ್ ಅಭಿಯಾನ ವ್ಯವಸ್ಥಾಪಕ ಅತಿಕ್ ರೆಹಮಾನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಸ್ವಾಮಿ ಇತರರಿದ್ದರು.

    ವೆಬ್‌ಸೈಟ್, ಸಹಾಯವಾಣಿ ಸಂಪರ್ಕಿಸಿ: ಸರ್ಕಾರ https://skillconnect.kaushalkar.comವೆಬ್‌ಸೈಟ್ ಆರಂಭಿಸಿದೆ. ಆಕಾಂಕ್ಷಿಗಳು ಇದರಲ್ಲೂ ನೋಂದಣಿಗೆ ಅರ್ಜಿ ಸಲ್ಲಿಸಬಹುದು. 1800-599-9918 ಸಂಖ್ಯೆ ಸಹಾಯವಾಣಿ ಕೂಡ ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts