More

    ಫುಟ್​ಪಾತ್ ಒತ್ತುವರಿ, ಸಂಚಾರಕ್ಕೆ ಕಿರಿಕಿರಿ

    ಸವಣೂರ: ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್​ಗಳನ್ನು ನಿಲುಗಡೆ ಮಾಡುವುದು ಹಾಗೂ ಫುಟ್​ಪಾತ್ ಒತ್ತುವರಿಯಿಂದಾಗಿ ಪಟ್ಟಣದಲ್ಲಿ ನಿತ್ಯ ಸಂಚಾರ ದಟ್ಟಣೆಯಾಗುತ್ತಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.
    ಇಲ್ಲಿನ ಸಿಂಪಿಗಲ್ಲಿಯಿಂದ ಭರಮಲಿಂಗೇಶ್ವರ ವೃತ್ತದವರೆಗಿನ ಮುಖ್ಯಮಾರುಕಟ್ಟೆ ರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಸ್ತೆ, ಇಂದಿರಾ ಸರ್ಕಲ್, ಅಂಚೆ ಇಲಾಖೆ ಕಚೇರಿ ರಸ್ತೆ, ಹಳೆಯ ಕೋರ್ಟ್ ರಸ್ತೆಯ ಎರಡು ಬದಿಗಳಲ್ಲಿ ಬೈಕ್​ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಬಸ್ ನಿಲ್ದಾಣ ಪ್ರದೇಶದ ರಸ್ತೆಗಳಲ್ಲಿ ಫುಟ್​ಪಾತ್ ಕಾಣದಂತಾಗಿದೆ. ಮಾರುಕಟ್ಟೆಯಲ್ಲಿ ಫುಟ್​ಪಾತ್ ಒತ್ತುವರಿಯಾಗಿದ್ದು, ರಸ್ತೆ ಕಿರಿದಾಗಿದೆ. ಅಲ್ಲದೆ, ಎರಡೂ ಬದಿಯಲ್ಲಿ ಬೈಕ್​ಗಳನ್ನು ನಿಲ್ಲಿಸುತ್ತಿರುವುದರಿಂದ ದೊಡ್ಡ ವಾಹನಗಳು ಬಂದಾಗ ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
    ಕರೊನಾ ಕಾರಣದಿಂದಾಗಿ ತರಕಾರಿ ವ್ಯಾಪಾರಸ್ಥರ ತಳ್ಳು ಗಾಡಿಗಳ ಸಂಖ್ಯೆ ಹೆಚ್ಚಾಗಿವೆ. ವಾರಕ್ಕೊಮ್ಮೆ ಜರುಗುತ್ತಿದ್ದ ಸಂತೆ ಈಗ ನಿತ್ಯವೂ ಕಂಡು ಬರುತ್ತಿದೆ. ಇದು ಪಟ್ಟಣದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕರ್ಣಾಟಕ ಬ್ಯಾಂಕ್ ಎದುರು ಎಲ್ಲೆಂದರಲ್ಲಿ ಬೈಕ್​ಗಳ ನಿಲುಗಡೆ ಮಾಡುವುದರಿಂದ ರಿಕ್ಷಾಗಳು ಓಡಾಡಲೂ ಜಾಗವಿಲ್ಲದಂತಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿ ಕೊರತೆ ನೆಪ ಹೇಳಿ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಪುರಸಭೆ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
    ಈ ಹಿಂದೆ ಸಿಬ್ಬಂದಿ ಕೊರತೆ ನಡುವೆಯೂ ಸವಣೂರ ಪೊಲೀಸ್ ಠಾಣೆಯ ಪಿಐ ಸಿದ್ಧರಾಮೇಶ್ವರ ಅವರು, ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಿದ್ದರು. ಮಾರುಕಟ್ಟೆಯ ಎರಡೂ ಬದಿಯಲ್ಲಿ ಬೈಕ್​ಗಳನ್ನು ನಿಲ್ಲಿಸಲು ನಿಯಮ ರೂಪಿಸಿದ್ದರು. ವಾರದಲ್ಲಿ ಮೂರು ದಿನ ಒಂದು ಬದಿಯಲ್ಲಿ, ಇನ್ನುಳಿದ ನಾಲ್ಕು ದಿನ ಇನ್ನೊಂದು ಬದಿಯಲ್ಲಿ ನಿಲ್ಲಿಸುವ ನಿಯಮ ರೂಪಿಸಿದ್ದರು. ತಪ್ಪಿದರೆ ದಂಡ ವಿಧಿಸಲಾಗುತ್ತಿತ್ತು. ಅವರು ವರ್ಗಾವಣೆಗೊಂಡ ನಂತರ ಮತ್ತೆ ಟ್ರಾಫಿಕ್ ಸಮಸ್ಯೆ ಎದುರಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

    ಪಟ್ಟಣದ ಮಾರುಕಟ್ಟೆ ರಸ್ತೆಗಳ ಎರಡೂ ಬದಿಯಲ್ಲಿ ಸಣ್ಣ ವ್ಯಾಪಾರಸ್ಥರು ಅಂಗಡಿಗಳನ್ನು ಹಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಕೆಲವು ವ್ಯಾಪಾರಸ್ಥರು ಅಂಗಡಿಗಳ ವಸ್ತುಗಳನ್ನು ಫುಟ್​ಪಾತ್​ನಲ್ಲಿ ಪ್ರದರ್ಶನಕ್ಕೆ ಇಡಲು ಮುಂದಾಗಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.
    | ದೇವಾನಂದ ಎಸ್., ಸವಣೂರ ಪೊಲೀಸ್ ಠಾಣೆ ಪಿಐ
    ಸವಣೂರಿನಲ್ಲಿ ಕೆಲವರು ನಿಯಮಬಾಹಿರವಾಗಿ ಬೈಕ್ ಓಡಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಲ್ಲಿ ಮಾತ್ರ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯ.
    | ಬಾಹುದೀನ್ ಇನಾಮದಾರ ಸ್ಥಳೀಯ ನಿವಾಸಿ, ಸವಣೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts