More

    ಫಲಿತಾಂಶ ಗರಿಷ್ಠ… ಸವಲತ್ತು ಕನಿಷ್ಠ..

    ರಟ್ಟಿಹಳ್ಳಿ: ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಉತ್ತಮ. ವಿದ್ಯಾರ್ಥಿಗಳ ದಾಖಲಾತಿಯಲ್ಲೂ ಹೆಚ್ಚಳ. ಆದರೆ, ಸೌಲಭ್ಯಗಳಿಂದ ಮಾತ್ರ ವಂಚಿತ.

    ಇದು ರಟ್ಟಿಹಳ್ಳಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪರಿಸ್ಥಿತಿ. ಈ ಕಾಲೇಜ್ ಪ್ರತಿ ಬಾರಿಯೂ ಉತ್ತಮ ಫಲಿತಾಂಶ ದಾಖಲಿಸುತ್ತಿದ್ದರೂ ಶಿಕ್ಷಣ ಇಲಾಖೆ ಮೂಲಸೌಲಭ್ಯ ಒದಗಿಸುವಲ್ಲಿ ಹಿಂಜರಿಯುತ್ತಿರುವುದು ತಾಲೂಕಿನ ಶಿಕ್ಷಣ ಪ್ರೇಮಿಗಳಲ್ಲಿ ಅಸಮಾಧಾನ ಮೂಡಿಸಿದೆ.

    2007ರಲ್ಲಿ ಕಲಾ, 2013-14ರಲ್ಲಿ ವಾಣಿಜ್ಯ, 2019-20ನೇ ಸಾಲಿನಿಂದ ವಿಜ್ಞಾನ ವಿಭಾಗ ಆರಂಭಗೊಂಡಿವೆ. 2019-20ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜ್ ಶೇ. 93.75 ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಫಲಿತಾಂಶ ದಾಖಲಿಸಿದ ಕೀರ್ತಿಗೆ ಭಾಜನವಾಗಿದೆ. ಪುನೀತ ತಿಪ್ಪಣ್ಣನವರ ಕಲಾ ವಿಭಾಗದಲ್ಲಿ ಶೇ. 96.66 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಜಿಲ್ಲೆಯ ಟಾಪ್ 20 ವಿದ್ಯಾರ್ಥಿಗಳ ಪೈಕಿ ಕಾಲೇಜ್ ವಿದ್ಯಾರ್ಥಿಗಳಿಗೆ 7 ಮತ್ತು 17ನೇ ಸ್ಥಾನ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಕಾಲೇಜ್ ತೃತೀಯ ಸ್ಥಾನ ಪಡೆದಿದೆ.

    ಕಾಲೇಜ್​ನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನಿತ್ಯ ಕೆಲವು ವಿದ್ಯಾರ್ಥಿಗಳು ಶುದ್ಧ ನೀರಿನ 2 ಕ್ಯಾನ್​ಗಳನ್ನು ತರುತ್ತಾರೆ. ಆದರೆ, ಅದು ಸಾಕಾಗುವುದಿಲ್ಲ. ಹೀಗಾಗಿ, ವಿದ್ಯಾರ್ಥಿಗಳು, ಉಪನ್ಯಾಸಕರು ಕುಡಿಯಲು ಮನೆಯಿಂದಲೇ ನೀರು ತರುತ್ತಾರೆ.

    ಮುಖ್ಯ ರಸ್ತೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಈ ಕಾಲೇಜ್​ಗೆ ಕಚ್ಚಾ ರಸ್ತೆಯಲ್ಲೇ ಸಾಗಿ ಬರಬೇಕು. ಮಳೆಗಾದಲ್ಲಂತೂ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಈಗಂತೂ ರಸ್ತೆ ಸಂಪೂರ್ಣ ಹಾಳಾಗಿದ್ದು, ಪಕ್ಕದ ಕೃಷಿ ಇಲಾಖೆ ರಸ್ತೆಯಲ್ಲಿ ಓಡಾಡುವಂತಾಗಿದೆ. ವಿಶಾಲ ಮೈದಾನವಿದ್ದರೂ ಸಮತಟ್ಟುಗೊಳಿಸದ ಕಾರಣ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ.

    ಕಾಲೇಜ್​ನಲ್ಲಿ ಅಂಗವಿಕಲರಿಗೆ ಒಂದು ಸೇರಿ ಒಟ್ಟು ಮೂರು ಶೌಚಗೃಹಗಳಿವೆ. 150ಕ್ಕೂ ಅಧಿಕ ವಿದ್ಯಾರ್ಥಿಗಳ ಕಾಲೇಜ್​ಗೆ ದೊಡ್ಡ ಶೌಚಗೃಹದ ಅವಶ್ಯಕತೆಯಿದೆ. ಕೊಠಡಿಗಳ ಕೊರತೆ ಇದ್ದು, ಸರ್ಕಾರದಿಂದ ಆರ್​ಐಡಿಎಫ್ ಯೋಜನೆಯಡಿ 6 ಕೊಠಡಿಗಳನ್ನು ನಿರ್ವಿುಸಲಾಗುತ್ತಿದೆ. ವಿಜ್ಞಾನ ವಿಭಾಗಕ್ಕೆ ಸಂಬಂಧಿಸಿದಂತೆ ಒಂದು ಪ್ರಯೋಗಾಲಯದ ಕೊಠಡಿ ಅವಶ್ಯಕತೆಯಿದೆ.

    ಮಂಜೂರಾದ 7 ಉಪನ್ಯಾಸಕರ ಹುದ್ದೆಗಳ ಪೈಕಿ ಈಗ ಐವರು ಕಾರ್ಯನಿರ್ವಹಿಸುತ್ತಿದ್ದಾರೆ. ಡಿ ದರ್ಜೆಯ ಎಸ್​ಡಿಸಿ ಮತ್ತು ಪ್ರಾಚಾರ್ಯ ಹುದ್ದೆಗಳು ಖಾಲಿ ಇವೆ.

    ಕಾಲೇಜ್​ಗೆ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಹಿರಿಯ ವಿದ್ಯಾರ್ಥಿಗಳು ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಶಿಕ್ಷಣ ಇಲಾಖೆ ಕೂಡಲೆ ಕಾಲೇಜ್​ಗೆ ಮೂಲಸೌಲಭ್ಯ ಕಲ್ಪಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕಿದೆ.

    ದಾಖಲಾತಿಯಲ್ಲೂ ಹೆಚ್ಚಳ

    2019-20ರಲ್ಲಿ ಪ್ರಥಮ, ದ್ವಿತೀಯ ವರ್ಷ ಸೇರಿ 155 ವಿದ್ಯಾರ್ಥಿಗಳಿದ್ದರು. 2020-21ನೇ ಸಾಲಿಗೆ ಪ್ರಥಮ ವರ್ಷಕ್ಕೆ 104, ದ್ವಿತೀಯ ವರ್ಷಕ್ಕೆ 68 ವಿದ್ಯಾರ್ಥಿಗಳು ದಾಖಲಾತಿ ಪಡೆದಿರುವುದು ಕಾಲೇಜ್​ನ ಶೈಕ್ಷಣಿಕ ಪ್ರಗತಿಗೆ ಸಾಕ್ಷಿಯಾಗಿದೆ.

    ಕುರಿ, ಕೋಳಿಗಳ ಆವಾಸ ಸ್ಥಾನ

    ಕಾಲೇಜ್​ಗೆ ಕಾಂಪೌಂಡ್, ಗೇಟ್ ಇಲ್ಲದ್ದರಿಂದ ರಾತ್ರಿ ಮದ್ಯಪಾನ ಮತ್ತಿತರ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಪಕ್ಕದ ಕೃಷಿ ಇಲಾಖೆ ಜಾಗದಲ್ಲಿ 40-50 ಅಲೆಮಾರಿ ಕುಟುಂಬಗಳು ವಾಸವಾಗಿವೆ. ಅವರ ಕುರಿ, ಕೋಳಿ ಮತ್ತಿತರ ಪ್ರಾಣಿಗಳು ಮಳೆಗಾಲದಲ್ಲಿ ಕಾಲೇಜ್ ಆವರಣದಲ್ಲೇ ಠಿಕಾಣಿ ಹೂಡುತ್ತವೆ. ಇದರಿಂದ ಕಾಲೇಜ್ ಆವರಣ ಗಲೀಜಾಗುತ್ತಿದ್ದು, ಪಪಂ ಕ್ರಮ ಕೈಗೊಳ್ಳಬೇಕು ಎಂದು ಕಾಲೇಜ್ ಉಪನ್ಯಾಸಕರು ಒತ್ತಾಯಿಸಿದ್ದಾರೆ.

    ನೂತನ ತಾಲೂಕು ಕೇಂದ್ರದಲ್ಲಿ ಸ.ಪ.ಪೂ. ಕಾಲೇಜ್ ಉತ್ತಮ ಶಿಕ್ಷಣ ನೀಡಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದೆ. ಕಾಲೇಜ್​ನ ಕಚ್ಚಾ ರಸ್ತೆ, ಆಟದ ಮೈದಾನ ಅಭಿವೃದ್ಧಿ, ಶುದ್ಧ ನೀರು ಮತ್ತಿತರ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕು.
    | ಮಾಲತೇಶ ಗಂಗೋಳ, ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯ

    ಸರ್ಕಾರಿ ಕಾಲೇಜ್​ಗಳ ಮೂಲಸೌಕರ್ಯ, ವಿದ್ಯಾರ್ಥಿಗಳ ದಾಖಲಾತಿ ಕುರಿತು ಪ್ರತಿವರ್ಷ ಸರ್ಕಾರಕ್ಕೆ ವರದಿ ಸಲ್ಲಿಸಲಾಗತ್ತದೆ. ರಟ್ಟಿಹಳ್ಳಿ ಸ.ಪ.ಪೂ. ಕಾಲೇಜ್ ನುರಿತ ಶಿಕ್ಷಕರು, ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಕಾಲೇಜ್​ನ ಸಮಸ್ಯೆಗಳ ಕುರಿತು ಉಪನ್ಯಾಸಕರೊಂದಿಗೆ ರ್ಚಚಿಸಲಾಗುವುದು. ಹಿರೇಕೆರೂರು ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸಲಾಗುವುದು.
    | ಎನ್.ಎನ್. ನಾಗರಾಜ, ಜಿಲ್ಲಾ ಉಪನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts