More

    ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳು : ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಳವಳ

    ಚಾಮರಾಜನಗರ : ಧರ್ಮ ಹುಟ್ಟಿರುವುದೇ ಪ್ರಕೃತಿಯಿಂದ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಸಂರ‌್ಷಕಿಸುವುದರ ಜತೆಗೆ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.


    ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕದ ಸವಿನೆನಪಿಗಾಗಿ ಹನೂರು ತಾಲೂಕಿನ ಎಲ್ಲೇಮಾಳ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬೆಂಗಳೂರು ಸಂಸ್ಕೃತಿ ಸೇವಾ ವಾರಿಧಿ ಸಂಸೇವಾ ವತಿಯಿಂದ ಶುಕ್ರವಾರ ಆಯೋಜಿಸಿದ್ಧ ಕರ್ನಾಟಕದಲ್ಲಿ ಕೋಟಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಸಮೃದ್ಧಿಯಿಂದ ಕೂಡಿದ್ದು, ವನ್ಯಜೀವಿಗಳ ಸಂತತಿ ಹೆಚ್ಚಿದೆ. ಹಾಗಾಗಿ ಇಲ್ಲಿ ಉತ್ತಮ ವಾತವರಣವಿದೆ. ಆದರೆ ಮಾನವ – ಪ್ರಾಣಿ ಸಂಘರ್ಷ ಕಡಿಮೆಯಾಗಲು ಪ್ರತಿಯೊಬ್ಬರೂ ಅರಿತು ಬಾಳಬೇಕಿದೆ. ಜತೆಗೆ ಪ್ರಕೃತಿ ಪೋಷಿಸಿ ಬೆಳೆಸಬೇಕಾಗಿರುವುದು ಅಗತ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜತೆಗೆ ಪರಿಸರವು ಹಾಳಾಗುತ್ತಿದೆ. ಇದನ್ನು ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
    ಆಂಗ್ಲೋ-ಮೈಸೂರು ಯುದ್ಧದಿಂದ ಶ್ರೀ ಮುಮ್ಮಡಿ ಕೃಷ್ಣರಾಜರ ಒಡೆಯರ್ ಕಷ್ಟದ ಪರಿಸ್ಥಿತಿ ಎದುರಿಸಬೇಕಾಯಿತು. ಜತೆಗೆ ಮೈಸೂರು ಸಂಸ್ಥಾನ, ಸಂಸ್ಕೃತಿ ಹಾಗೂ ಸನಾತನ ಧರ್ಮ ಉಳಿವಿಗೆ ಹೆಚ್ಚು ಶ್ರಮಿಸಿದ್ದಾರೆ. ಹಾಗಾಗಿ ನಾಡಿನ ಅಭಿವೃದ್ಧಿಗೆ ಮುಮ್ಮಡಿ ಕೃಷ್ಣರಾಜರ ಒಡೆಯರ ಕೊಡುಗೆ ಅಪಾರ. ಈ ದಿಸೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.


    ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಚಾ.ನಗರ ಜಿಲ್ಲೆ ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಶೇಕಡ 52ರಷ್ಟು ಅರಣ್ಯ ಪ್ರದೇಶದಿಂದ ಕೂಡಿದೆ. ಆದ್ದರಿಂದ ಅರಣ್ಯ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಪ್ರತಿ ವರ್ಷ ಅರಣ್ಯ ಇಲಾಖೆಯ ವತಿಯಿಂದ ಸಸಿ ನೆಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ ಬೆಳೆಯುವುದು ಬೆರಳೆಣಿಕೆಯಷ್ಟು ಸಸಿಗಳು ಮಾತ್ರ. ಆದ್ದರಿಂದ ಸಸಿಗಳನ್ನು ನೆಟ್ಟರೆ ಸಾಲದು. ಅದನ್ನು ಪೋಷಿಸಿ ಬೆಳೆಸುವುದು ಅತಿ ಮುಖ್ಯ ಎಂದು ಸಲಹೆ ನೀಡಿದರು.


    ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಶಾಸಕ ಆರ್.ನರೇಂದ್ರ ಹಾಗೂ ಶ್ರೀ ಪ್ರಜ್ಞಾನಂದ ಸ್ವಾಮೀಜಿ ಗೋವಿಗೆ ಪೂಜೆ ಸಲ್ಲಿಸದರಲ್ಲದೆ, ಮಕ್ಕಳ ಮಾರಮ್ಮ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು.


    ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಿ.ನಾರಾಯಣಪ್ರಸಾದ್, ಉಪಾಧ್ಯಕ್ಷ ಡಾ.ಎಸ್.ದತ್ತೇಶ್‌ಕುಮಾರ್, ಸಂಸ್ಕೃತಿ ಸೇವಾ ವಾರಿಧಿ ಸಂಸೇವಾ ಅಧ್ಯಕ್ಷ ಶಿವಶಮಕರ್, ಬೇಡಗಂಪಣ ಅರ್ಚಕ ಕೆ.ವಿ ಮಾದೇಶ್, ಮುಖ್ಯ ಶಿಕ್ಷಕಿ ನಾಗಕನ್ನಿಕಾ, ಮುಖಂಡರಾದ ರಂಗಸ್ವಾಮಿ, ನಾಗೇಶ್, ಮಹದೇವ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts