More

    ಪ್ಲಾಸ್ಟಿಕ್ ತ್ಯಜಿಸುವುದು ಎಲ್ಲರ ಜವಾಬ್ದಾರಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅಭಿಪ್ರಾಯ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಜನಸಾಮಾನ್ಯರು ಜಾಗ್ರತರಾಗಿ ಇದನ್ನು ಸ್ವಯಂ ಪ್ರೇರಣೆಯಿಂದ ತ್ಯಜಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಸಾಧ್ಯ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.

    ಇಲ್ಲಿಯ ಮಹಾನಗರ ಪಾಲಿಕೆ ಸಭಾಭವನದಲ್ಲಿ ಶನಿವಾರ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ವ್ಯಾಪಾರಸ್ಥರು, ಹೋಟೆಲ್ ಉದ್ಯಮಿಗಳು, ಬೇಕರಿ ಮಾಲೀಕರು ಹಾಗೂ ಇತರ ವರ್ತಕರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

    ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದಿಸುವ ಮೂಲ ಕಾರ್ಖಾನೆಗಳನ್ನು ಸ್ಥಗಿತಗೊಳಿಸಬೇಕು. 50 ಮೈಕ್ರಾನ್​ಗಿಂತ ಹೆಚ್ಚಿರುವ ಪ್ಲಾಸ್ಟಿಕ್ ಚೀಲಗಳ ಬಳಕೆಗೆ ಅವಕಾಶವಿದ್ದು, ಈ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್ ನಿಷೇಧ ಮಾಡುವ ಜವಾಬ್ದಾರಿ ಕೇವಲ ಅಧಿಕಾರಿಗಳಿಗೆ ಸೀಮಿತವಲ್ಲ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಬೇರೆ ರಾಜ್ಯದಿಂದ ಬರುವ ಪ್ಲಾಸ್ಟಿಕ್ ಸಹ ಬಂದ್ ಮಾಡಿದರೆ ಸಂಪೂರ್ಣವಾಗಿ ತಡೆಯಲು ಸಾಧ್ಯ ಎಂದರು.

    ಕರೊನಾ ಸಾಂಕ್ರಾಮಿಕದ ನಂತರ ಈಗಷ್ಟೇ ವ್ಯಾಪಾರ, ಉದ್ಯಮ ವಲಯ ಸುಧಾರಣೆ ಕಾಣುತ್ತಿದೆ. ಈ ಸಮಯದಲ್ಲಿ ಪ್ಲಾಸ್ಟಿಕ್ ಬ್ಯಾನ್ ನೆಪದಲ್ಲಿ ಅಧಿಕಾರಿಗಳು ಉದ್ಯಮಕ್ಕೆ ಕಿರುಕುಳ ನೀಡಬಾರದು. ಬಹುತೇಕ ಸಣ್ಣ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮಿಗಳಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಪ್ಲಾಸ್ಟಿಕ್ ವಿಚಾರದಲ್ಲಿ ಸರ್ಕಾರ ಜಾರಿಗೆ ತಂದಿರುವ ಕಾನೂನಿಗೆ ಎಲ್ಲರೂ ಬದ್ಧರಾಗಿರಬೇಕು. ಇದು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. 50 ಮೈಕ್ರಾನ್​ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಂಡು ದಂಡ ವಿಧಿಸಬೇಕು ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಮೇಯರ್ ಈರೇಶ ಅಂಚಟಗೇರಿ ಅವರು ಮಾತನಾಡಿ, ಪ್ಲಾಸ್ಟಿಕ್ ಬದಲಾಗಿ ಪೇಪರ್ ಬ್ಯಾಗ್ ಬಳಸುವ ಬಗ್ಗೆ ರಾಜ್ಯ ಮಟ್ಟದಲ್ಲಿ ಅಧಿಕಾರಿಗಳ ಜತೆ ನಮ್ಮ ನಾಯಕರು ಮಾತನಾಡಲಿದ್ದಾರೆ. ಈಗಿರುವ ಸಮಸ್ಯೆ ಬಗೆ ಹರಿಸಲಿದ್ದಾರೆ. ಅಧಿಕಾರಿಗಳು ಸಹ ಏಕ ಬಳಕೆ ಪ್ಲಾಸ್ಟಿಕ್ ತಡೆಯುವ ಸಂದರ್ಭದಲ್ಲಿ ವ್ಯಾಪಾರಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಚಾಲ್ತಿಯಲ್ಲಿರುವ ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.

    ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಅವರು ಮಾತನಾಡಿ, 50 ಮೈಕ್ರಾನ್​ಗಿಂತ ಹೆಚ್ಚಿನ ಪ್ಲಾಸ್ಟಿಕ್ ಚೀಲಗಳನ್ನು ಪುನರ್ ಬಳಕೆ ಮಾಡಬಹುದು. ಈಗಾಗಲೇ ಹೋಟೆಲ್, ವ್ಯಾಪಾರಿಗಳ ಜತೆ ಸಭೆ ಮಾಡಲಾಗಿದೆ. ಜಾಗೃತಿ ಮೂಡಿಸಲಾಗಿದೆ. ಮೊದಲು ದಂಡ ಹಾಕದೆ ಇನ್ನಷ್ಟು ಜನಜಾಗೃತಿ ಮಾಡಲಾಗುವುದು. ಯಾರಿಗೂ ತೊಂದರೆ ನೀಡುವ ಉದ್ದೇಶ ಇಲ್ಲ ಎಂದು ಹೇಳಿದರು.

    ಗೊಂದಲ ಸೃಷ್ಟಿಸಿದೆ:

    ಸರ್ಕಾರ ಎಲ್ಲ ರೀತಿಯ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದ್ದರೆ ಸಾರ್ವಜನಿಕರಲ್ಲಿ ಗೊಂದಲ ಇರುತ್ತಿರಲಿಲ್ಲ. ಏಕ ಬಳಕೆ ಪ್ಲಾಸ್ಟಿಕ್ ತಡೆಯಲು ಅಧಿಕಾರಿಗಳು ಯಾವಾಗ ಬೇಕಾದಾಗ ಬರುತ್ತಾರೆ. ಕೆಲವರ ವರ್ತನೆಯಿಂದ ವ್ಯಾಪಾರಿಗಳಿಗೆ ನೋವಾಗಿದೆ. ಅಧಿಕಾರಿಗಳು ವ್ಯಾಪಾರಸ್ಥರು, ಉದ್ಯಮಿಗಳೊಂದಿಗೆ ಒಂದಿಷ್ಟು ಸೌಜನ್ಯದಿಂದ ವರ್ತಿಸಬೇಕು ಎಂದು ಹೋಟೆಲ್ ಉದ್ಯಮಿ ಸುಧಾಕರ ಶೆಟ್ಟಿ ಮನವಿ ಮಾಡಿದರು.

    ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ವಿರೋಧ ಪಕ್ಷದ ನಾಯಕ ದೊರಾಜ ಮಣಿಕುಂಟ್ಲಾ, ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ವರ್ತಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts