More

    ಪ್ರೊ.ಬಿ.ಕೃಷ್ಣಪ್ಪ ಅಧ್ಯಯನ ಕೇಂದ್ರ ಸ್ಥಾಪಿಸದಿದ್ರೆ ಕಪ್ಪು ಬಾವುಟ ಪ್ರದರ್ಶನ: ದಸಂಸ ಎಚ್ಚರಿಕೆ

    ದಾವಣಗೆರೆ : ದಲಿತ ಹೋರಾಟಗಾರ ದಿ.ಪ್ರೊ.ಬಿ.ಕೃಷ್ಣಪ್ಪ ಅವರ ಹೆಸರಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸುವಂತೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

    ದಲಿತ ಸಂಘರ್ಷ ಸಮಿತಿ ಮೂಲಕ ಪ್ರೊ.ಬಿ.ಕೃಷ್ಣಪ್ಪ ಅವರು ರಾಜ್ಯದಲ್ಲಿ ದಲಿತ, ಶೋಷಿತ, ಹಿಂದುಳಿದ ಸಮುದಾಯಗಳ ಜನರು ಹಾಗೂ ಮಹಿಳೆಯರು ಎದುರಿಸುತ್ತಿದ್ದ ಸಮಸ್ಯೆಗಳ ವಿರುದ್ಧ ಹಲವು ಹೋರಾಟ ನಡೆಸಿ ನ್ಯಾಯ ಕೊಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಮಿತಿಯಿಂದ 2021ರ ಜನವರಿ 20 ರಂದು ದಾವಣಗೆರೆ ವಿವಿ ಅಂದಿನ ಕುಲಪತಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಈವರೆಗೂ ಕೇಂದ್ರ ಸ್ಥಾಪಿಸಲಾಗಿಲ್ಲ. ವಿಶ್ವವಿದ್ಯಾಲಯ ವ್ಯಾಪ್ತಿಯ ಹರಿಹರದವರೇ ಆದ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಗೌರವ ಸಲ್ಲಿಸಲು ವಿವಿ ಕನ್ನಡ ಭಾಷಾ, ಸಮಾಜಶಾಸ್ತ್ರ ಅಥವಾ ಸೂಕ್ತವೆನಿಸುವ ವಿಭಾಗದಲ್ಲಿ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
    ಎರಡು ತಿಂಗಳಲ್ಲಿ ಕೇಂದ್ರವನ್ನು ಸ್ಥಾಪಿಸಿ ನಾಡಿನ ಸಾಮಾಜಿಕ ಹೋರಾಟಗಾರನಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕು. ಇದರ ಜತೆಗೆ ಎಸ್‌ಸಿಪಿ ಟಿಎಸ್‌ಪಿ ಅನುದಾನ ಇತರೆ ಉದ್ದೇಶಕ್ಕೆ ಬಳಸುವುದನ್ನು ಕೈಬಿಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಆಗಮಿಸಿದ ಸಂದರ್ಭದಲ್ಲಿ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಸಿದರು.
    ಅಲ್ಲದೇ ರಾಜ್ಯ ಸರ್ಕಾರ ಪ್ರೊ.ಬಿ.ಕೃಷ್ಣಪ್ಪ ಅವರ ಜಯಂತಿಯನ್ನು ಸರ್ಕಾರಿ ಕಚೇರಿಗಳಲ್ಲಿ ಆಚರಿಸಲು ಅಧಿಸೂಚನೆ ಹೊರಡಿಸಬೇಕು ಹಾಗೂ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಸಂಘಟನೆಯೆಂದು ಸಂಘಟನೆ ಹೆಸರನ್ನು ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯ ಹರಿಹರ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಒತ್ತಾಯಿಸಿದರು.
    ಸಮಿತಿ ಪದಾಧಿಕಾರಿಗಳಾದ ಹನುಮಂತಪ್ಪ ಅಣಜಿ, ಪ್ರದೀಪ ಕೆಟಿಜೆ ನಗರ, ನಿಂಗಪ್ಪ ಅಣಜಿ, ಬೇತೂರು ಹನುಮಂತಪ್ಪ, ಮಂಜಪ್ಪ ಗುಡದಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts