More

    ಪ್ರಾಣಿ, ಪಕ್ಷಿ, ಮನುಷ್ಯ ಎಲ್ಲರೂ ವಲಸಿಗರೆ

    ಬಾಗಲಕೋಟೆ: ಜಗತ್ತಿನಲ್ಲಿ ಜನಿಸಿದ ಎಲ್ಲ ಪ್ರಾಣಿ, ಪಕ್ಷಿ, ಮನುಷ್ಯರು ತಮ್ಮ ಉಳಿವಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವುದು ಅನಿವಾರ್ಯವೆಂದು ಜಿಲ್ಲಾ ವನ್ಯ ಜೀವಿ ಪರಿಪಾಲಕ ಡಾ.ಎಂ.ಆರ್.ದೇಸಾಯಿ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನವನಗರದ ಅರಣ್ಯ ಇಲಾಖೆಯ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡ ವಿಶ್ವ ವಲಸೆ ಪಕ್ಷಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಲಸೆಗೆ ಅನೇಕ ಕಾರಣಗಳಿದ್ದು, ಮುಖ್ಯ ಕಾರಣ ವತಾವರಣ, ನೀರು, ಆಹಾರ, ಸಂತತಿ ಸಲುವಾಗಿ ಪ್ರಾಣಿ ಪಕ್ಷಿಗಳು ನೂರರಿಂದ ಸಾವಿರಾರು ಕಿ.ಮೀ ದೂರ ವಲಸೆ ಹೋಗುತ್ತಿವೆ. ಆದರೆ ಪ್ರಾಣಿಗಳಿಗೆ ಹಾರಲು ಬಾರದಿರುವದರಿಂದ ಆನೆ ಸೇರಿದಂತೆ ಮುಂತಾದ ಪ್ರಾಣಿಗಳು ನಡೆದುಕೊಂಡು ಹೋಗುವದರಿಂದ ಬಹಳ ದೂರ ಕ್ರಮಿಸಲು ಸಾದ್ಯವಾಗದು ಎಂದರು.

    ಪ್ರಾಣಿ, ಪಕ್ಷಿಗಳು ಮನುಷ್ಯರಿಗಿಂತ ಬುದ್ದಿ ಹೊಂದಿದ್ದು, ದೀರ್ಘಕಾಲ ಒಂದೆಡೆ ಉಳಿದರೆ ಅಲ್ಲಿದ್ದ ನೈಸರ್ಗಿಕ ಸಂಪತ್ತು, ಆಹಾರ, ನೀರು, ಹಾಳಾಗದಿರಲಿ ಎಂದು ವಲಸೆ ಹೋಗಿ ಮರಳಿದಾಗ ಮೊದಲಿದ್ದ ಸ್ಥಳದಲ್ಲಿ ಅಪಾರ ಆಹಾರ ತಯಾರಾಗಿರುತ್ತದೆ ಎಂಬ ತಿಳುವಳಿಕೆ ಅವುಗಳಿಗಿದೆ. ಈ ಪ್ರಾಣಿ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಒಂದು ಪಕ್ಷಿ ಬೇರೆ ದೇಶದಿಂದ ವಲಸೆ ಬಂದರೆ ಅಲ್ಲಿದ್ದ ವೈರಾಣು ಇಲ್ಲಿ ಹರಡುವ ಸಂಭವ ಇರುತ್ತದೆ.

    ಪಕ್ಷಿ ಬಗ್ಗೆ ನಮಗೆ ತಿಳಿದರೆ ಆ ರೋಗದ ಬಗ್ಗೆಯೂ ತಿಳಿಯಬಹುದಾಗಿದೆ. ಆದ್ದರಿಂದ ನಾವು ಕಾಡು, ಕಾಡು ಪ್ರಾಣಿ ಪಕ್ಷಿಗಳನ್ನು ಏಕೆ ರಕ್ಷಿಸಬೇಕೆಂದರೆ, ಅವುಗಳಿಂದಲೇ ನಮ್ಮ ಜೀವನ ಎಂಬುದು ಮರೆಯಬಾರದು. ಈಗ ದೇಶ ವಿದೇಶಗಳಿಂದ ಬರುವ ಪಕ್ಷಿಗಳಿಗೆ ನಮ್ಮ ಜಿಲ್ಲೆ ಆಸರೆ ನೀಡುತ್ತಿದ್ದು, ಚಿಕ್ಕಸಂಗಮ, ಹೆರಕಲ್ಲಗಳಲ್ಲಿ ಪಕ್ಷಿಗಳನ್ನು ಕಾಣಬಹುದಾಗಿದ್ದು, ಆ ಸ್ಥಳಗಳನ್ನು ಅಭಿವೃದ್ದಿ ಪಡಿಸಬೇಕಾಗಿದೆ ಎಂದರು.

    ಪನ್ಯಾಸಕರಾಗಿ ಆಗಮಿಸಿದ್ದ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪ್ರೊ. ಡಾ.ತಿಪ್ಪೇಸ್ವಾಮಿ ಮಾತನಾಡಿ ಅರಣ್ಯ, ಪ್ರಾಣಿ, ಪಕ್ಷಿಗಳನ್ನು ಮನುಷ್ಯ ರಕ್ಷಿಸುವ ಬದಲು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂದು ದಟ್ಟ ಅರಣ್ಯಗಳು ಮೋಜು ಮಸ್ತಿಯ ತಾಣಗಳಾಗಿದ್ದು, ಅಲ್ಲಿ ಮನುಷ್ಯ ತಿಂದು ತೇಗಿ ಎಲ್ಲಂದರಲ್ಲಿ ಪ್ಲಾಸ್ಟಿಕ್ ಎಸೆಯುತ್ತಿರುವದರಿಂದ ಪ್ರಾಣಿ, ಪಕ್ಷಿಗಳು ಮರೆಯಾಗುತ್ತಿವೆ. ಯಾವುದೇ ಕಾಡಿನಲ್ಲಿದ್ದ ಪ್ರಾಣಿ ಹುಟ್ಟುಹಬ್ಬ ಪಾರ್ಟಿಯನ್ನು ಆಚರಿಸುವದಿಲ್ಲ. ಅದನ್ನು ಮಾಡದೇ ಮನುಷ್ಯ ತನ್ನಷ್ಟಕ್ಕೆ ತಾನೇ ಇದ್ದರೆ ಈ ನಿಸರ್ಗ ತಾನೇ ಬೆಳೆಯುತ್ತದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಉತ್ತರ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡುತ್ತಾ ನನ್ನ ಅಧಿಕಾರ ಅವಧಿಯ 2016ರಲ್ಲಿ ಗದಗ ಜಿಲ್ಲೆಗೆ ಮುಖ್ಯ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿರುವಾಗ ಅಲ್ಲಿಯ ಮಾಗಡಿ ಕೆರೆಗೆ ಪ್ರತಿ ವರ್ಷ ಡಿಸೆಂಬರನಲ್ಲಿ ಪಕ್ಷಿಗಳು ಬರುತ್ತಿದ್ದವು. ಆದರೆ ಕೆಲ ವರ್ಷ ಬರಲೇ ಇಲ್ಲ. ಕಾರಣ ಆ ಕೆರೆಗಳು ಬತ್ತಿದ್ದರಿಂದ ಮತ್ತು ಶೆಟ್ಟಿ ಕೆರೆಗೂ ಹಾಗೆ ಆಗಿದ್ದರಿಂದ ಆ ಕೆರೆ ಹೂಳೆತ್ತಿ ನೀರು ಹರಿಸಿದಾಗ ಮಾರನೆ ವರ್ಷ ಮತ್ತೆ ಪಕ್ಷಿಗಳು ಆಗಮಿಸಿದ್ದವು ಎಂದರು.

    ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೂಪಾ ವಿ.ಕೆ, ರಾಜೇಶ್ವರಿ ಈರನಟ್ಟಿ, ಆರ್.ಎಫ್‍ಓಗಳಾದ ಎಂ.ಆರ್.ದೇಸಾಯಿ, ಎಚ್.ಬಿ.ಡೋಣಿ, ಪಂಚಾಕ್ಷರಣ್ಯ ಪುರಾಣಿಕ ಮಠ, ವಿರೇಶ, ಪವನ ಕರಿಲಿಂಗ, ಅರಶಿಣದ, ಅಧಿಕಾರಿಗಳಾದ ಅನಿಲಕುಮಾರ ರಾಠೋಡ, ಸಂದೇಶ ಸಂಕನ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts