More

    ಪ್ರವಾಹದ ಗಾಯಕ್ಕೆ ಲಾಕ್​ಡೌನ್ ಬರೆ

    ನರಗುಂದ: ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಪೇರಲ ಬೆಳೆಯುವ ಪ್ರದೇಶವೆಂದರೆ ಅದು ತಾಲೂಕಿನ ಕೊಣ್ಣೂರ ಗ್ರಾಮ. ಈ ಗ್ರಾಮದ ಸುತ್ತಮುತ್ತಲೂ ಬೆಳೆದ ಪೇರಲ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಆದರೀಗ ಪೇರಲ ಬೆಳೆದ ಈ ಭಾಗದ ರೈತರು ಮಾತ್ರ ಕಳೆದೊಂದು ವರ್ಷದಿಂದ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಭೀಕರ ಮಲಪ್ರಭಾ ಪ್ರವಾಹದಿಂದ ತತ್ತರಿಸಿ ಹೋಗಿದ್ದ ತಾಲೂಕಿನ ಕೊಣ್ಣೂರ, ಬೂದಿಹಾಳ, ವಾಸನ, ಬೆಳ್ಳೇರಿ, ಶಿರೋಳ, ಲಖಮಾಪೂರ ಸೇರಿದಂತೆ ವಿವಿಧ ಗ್ರಾಮಗಳ 300ಕ್ಕೂ ಅಧಿಕ ರೈತರು 130 ಹೆಕ್ಟೆರ್ ಪ್ರದೇಶದಲ್ಲಿ ಪೇರಲ ಬೆಳೆದಿದ್ದಾರೆ. ಇನ್ನುಳಿದ ಸುಮಾರು 1050 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಾದ ಚಿಕ್ಕು, ಮಾವು, ಬಾಳೆ, ತೆಂಗು ಬೆಳೆದಿದ್ದಾರೆ. ಇಲ್ಲಿನ ಪೇರಲವು ಪ್ರತಿ ವರ್ಷ ಮಂಗಳೂರು, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಗದಗ, ಬೆಳಗಾವಿ ಮಾರುಕಟ್ಟೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಇದರಿಂದಾಗಿ ರೈತರಿಗೆ ಲಕ್ಷಾಂತರ ರೂಪಾಯಿ ಆದಾಯ ತಂದು ಕೊಡುವುದಲ್ಲದೆ, ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡುತ್ತದೆ. ಆದರೆ, ಕಳೆದ ಸಾಲಿನ ಉಂಟಾದ ಭೀಕರ ಪ್ರವಾಹದ ಹಾನಿಯ ಗಾಯ ಮಾಸುವ ಮುನ್ನವೇ ಕರೊನಾ ಲಾಕ್​ಡೌನ್ ಹೊಡೆತ ಬಿದ್ದಿದೆ. ಇದರಿಂದಾಗಿ ಇಲ್ಲಿನ ರೈತರ ಬದುಕು ದುಸ್ತರವಾಗಿದೆ.

    ಅತ್ಯಂತ ರುಚಿಕಟ್ಟು, ದಷ್ಟಪುಷ್ಟವಾಗಿರುವ ಪೇರು ಇಲ್ಲಿ ಬೆಳೆಯುತ್ತದೆ. ಆದರೆ, ಬೆಳೆಗಾರರಿಗೆ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಈ ಹಿಂದೆ ಕೊಣ್ಣೂರ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆದ ಪೇರುವನ್ನು ಸ್ವತಃ ರೈತರೇ ಹುಬ್ಬಳ್ಳಿಯಿಂದ ವಿಜಯಪುರವರೆಗಿನ ಎಲ್ಲ ಪ್ರಮುಖ ಬಸ್ ನಿಲ್ದಾಣ, ರಸ್ತೆ ಅಕ್ಕಪಕ್ಕದಲ್ಲಿ, ತಿರುವುಗಳಲ್ಲಿ (ಕ್ರಾಸ್) ಹಾಗೂ ವಿವಿಧ ಜನದಟ್ಟಣೆ ಪ್ರದೇಶಗಳಲ್ಲಿ ನಿಂತು ಮಾರಾಟ ಮಾಡುತ್ತಿದ್ದರು. ಇದೀಗ ಕರೊನಾ ಲಾಕ್​ಡೌನ್​ನಿಂದಾಗಿ ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಣ್ಣು, ತರಕಾರಿ ಬೆಳೆದ ರೈತರಿಗಾಗಿ ಕೆಲವೊಂದಿಷ್ಟು ನಿಯಮ ಸಡಿಲಗೊಳಿಸಿದರೂ ನೀರಿಕ್ಷಿತ ಬೆಲೆಗೆ ಪೇರಲ ಖರೀದಿಸುವ ಗ್ರಾಹಕರಿಲ್ಲದೆ, ಕೈಗೆ ಬಂದಿರುವ ಫಸಲು ಗಿಡದಲ್ಲೇ ಕೊಳೆಯುತ್ತಿದೆ.

    ಮತ್ತೊಂದಿಷ್ಟು ಮಳೆ, ಗಾಳಿಗೆ ಕೆಳಗಡೆ ಉದುರಿ ಭೂತಾಯಿಯ ಮಡಿಲು ಸೇರುವಂತಾಗಿದೆ. ಕೇವಲ ಒಂದು ವರ್ಷದೊಳಗೆ ಇಲ್ಲಿನ ರೈತರು ಪ್ರವಾಹ ಮತ್ತು ಕರೊನಾ ಸಂಕಷ್ಟದಿಂದಾಗಿ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ತಮ್ಮ ನೆರವಿಗೆ ಸರ್ಕಾರ ಧಾವಿಸಬೇಕು ಎಂಬುದು ಇಲ್ಲಿನ ರೈತರ ನಿರೀಕ್ಷೆಯಾಗಿದೆ.

    ಕೊಣ್ಣೂರಿನ ಬಹುತೇಕ ರೈತರು ವಿವಿಧ ತೋಟಗಾರಿಕೆ ಬೆಳೆಗಳನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಿದ್ದೇವೆ. ಪ್ರವಾಹದಿಂದಾಗಿ ಇಲ್ಲಿನವರ ಬದುಕು ಇನ್ನೂ ಸುಧಾರಿಸಿಲ್ಲ. ಆದರೂ ಧೃತಿಗೆಡದ ಸಾಕಷ್ಟು ರೈತರು ಸಾಲ ಮಾಡಿ ಪೇರಲ ಸಸಿಗಳನ್ನು ತಮ್ಮ ಮಕ್ಕಳಂತೆ ಬೆಳೆಸಿ ಆದಾಯದ ನೀರಿಕ್ಷೆಯಲ್ಲಿದ್ದರು. ಆದರೀಗ ಕರೊನಾದಿಂದಾಗಿ ಯಾರೊಬ್ಬರೂ ಪೇರು ಖರೀದಿಸಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯುಂಟಾಗಿದ್ದು, ಬದುಕು ದುಸ್ತರವಾಗಿದೆ.
    | ಮಧುಸೂದನ್ ಜೋಶಿ. ಪೇರಲು ಬೆಳೆದಿರುವ ಕೊಣ್ಣೂರಿನ ರೈತ.

    ಪೇರು ಬೆಳೆದಿರುವ ಕೊಣ್ಣೂರ ಭಾಗದ ರೈತರ ಬೆಳೆ ಮಾರಾಟಕ್ಕಾಗಿ ಇಲಾಖೆಯಿಂದ ಪಾಸ್​ಗಳನ್ನು ನೀಡಿದ್ದೇವೆ. ಗದಗ, ಹುಬ್ಬಳ್ಳಿ ಹಾಪಕಾಮ್್ಸ ಮಳಿಗೆಗಳಲ್ಲಿ ಮಾರಾಟಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಆದರೆ, ನೀರಿಕ್ಷಿತ ಮಟ್ಟದಲ್ಲಿ ಪೇರು ಖರೀದಿಸಲು ಗ್ರಾಹಕರು ಬರುತ್ತಿಲ್ಲ. ಪರ್ಯಾಯವಾಗಿ ಎರಡ್ಮೂರು ದಿನಗಳ ಹಿಂದೆ ಮಂಗಳೂರು ಮಾರುಕಟ್ಟೆಗೆ ರೈತರ ಎರಡು ಲಾರಿ ಲೋಡ್ ಪೇರು ಮಾರಾಟಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿಯೂ ಸೂಕ್ತ ಬೆಲೆ ದೊರೆಯದ ಕಾರಣ ರೈತರಿಗೆ ಹಾನಿಯುಂಟಾಗಿದೆ. ಬಸ್ ಸಂಚಾರ ಪುನಃ ಆರಂಭಗೊಂಡರೆ ರೈತರು ಮತ್ತೆ ಆರ್ಥಿಕತೆಯಿಂದ ಸುಧಾರಿಸಿಕೊಳ್ಳುವ ವಿಶ್ವಾಸ ಇದ್ದು, ಯಾವುದೇ ಕಾರಣಕ್ಕೂ ರೈತರು ಧೃತಿಗೆಡಬಾರದು.
    | ಸಂಜೀವ ಚವ್ಹಾಣ. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ನರಗುಂದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts