More

    ಪ್ರಯತ್ನಿಸಿದರೆ ಸಂಸ್ಕೃತ ಕಲಿಕೆ ಸುಲಭ, ವಿಜಯಪುರದ ರಾಮಸಿಂಗ್ ಅಭಿಪ್ರಾಯ, ಸಂಸ್ಕೃತಾಮೃತಮ್ ಅಭಿಯಾನ ಉದ್ಘಾಟನೆ

    ಹುಬ್ಬಳ್ಳಿ: ಸಂಸ್ಕೃತವು ಸರಳ ಹಾಗೂ ಸುಲಭವಾಗಿ ಕಲಿಯಬಹುದಾದ ಭಾಷೆಯಾಗಿದೆ. ಒಂದಷ್ಟು ಪ್ರಯತ್ನಿಸಿದರೆ 10 ದಿನದಲ್ಲಿಯೇ ಸಂಸ್ಕೃತದಲ್ಲಿ ಸಂಭಾಷಣೆ ಮಾಡಬಹುದು ಎಂದು ವಿಜಯಪುರದ ಸಂಸ್ಕೃತ ಬಟ್ಟೆ ಅಂಗಡಿ ಮಾಲೀಕ ರಾಮಸಿಂಗ್ ರಜಪೂತ್ ಹೇಳಿದರು.

    ಇಲ್ಲಿಯ ಸ್ಟೇಷನ್ ರಸ್ತೆ ಈಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಸ್ಕೃತದ ಪುನರುಜ್ಜೀವನಕ್ಕಾಗಿ ಮಜೇಥಿಯಾ ಫೌಂಡೇಷನ್ ಮತ್ತು ಸಂಸ್ಕೃತ ಭಾರತಿ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಸಂಸ್ಕೃತಾಮೃತಮ್ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

    ಭಾರತೀಯರ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯ ಭಾಷೆಯಾದ ಸಂಸ್ಕೃತವು ಮಕ್ಕಳಲ್ಲಿ ಉಚ್ಛಾರ ಸ್ಪಷ್ಟನೆ, ನೆನಪಿನ ಶಕ್ತಿ ವೃದ್ಧಿಗೆ ಸಹಕಾರಿಯಾದರೆ, ಯುವಕರು, ಹಿರಿಯರಲ್ಲಿ ಉತ್ತಮ ಸಂಸ್ಕಾರ ಹಾಗೂ ವಿಶ್ವ ಚಿಂತನೆಗಳನ್ನು ಹಂಚಿಕೊಳ್ಳಲು ನೆರವಾಗುತ್ತದೆ ಎಂದರು.

    ದೇಶದ ಎಲ್ಲೆಡೆ ಸಂಸ್ಕೃತ ಭಾಷೆ ಪ್ರಸಾರವಾಗುವುದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ಜ್ಞಾನ ಸ್ಪೋಟವಾಗಲಿದೆ. ವಿಶ್ವದಲ್ಲಿ ಶ್ರೇಷ್ಠ ಭಾಷೆಯಾದ ಸಂಸ್ಕೃತವನ್ನು ಬಳಸಿ ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.

    ಸಂಸ್ಕೃತ ಭಾರತಿ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಪ್ರೊ. ಜಿ.ಆರ್. ಅಂಬಲಿ ಮಾತನಾಡಿ, ಸಂಸ್ಕೃತದ ಮಹತ್ವ ಬಹಳಷ್ಟಿದೆ. ಹಾಗೆಂದು ಇದನ್ನು ಮಕ್ಕಳು ಅಂಕ ಗಳಿಕೆಗೆ ಅಥವಾ ಪುಸ್ತಕಕ್ಕೆ ಸೀಮಿತಗೊಳಿಸದೇ ಸಂಭಾಷಣೆಗೆ ಬಳಸಬೇಕು. ಆಚರಣೆಗೆ ತರಬೇಕು. ಭಾರತದ ಆತ್ಮ ಸಂಸ್ಕೃತವಾದರೆ, ಸಂಸ್ಕೃತದ ಆತ್ಮ ಸಂಭಾಷಣೆ ಎಂದು ಪ್ರತಿಪಾದಿಸಿದರು.

    ನಮ್ಮಲ್ಲಿ ಎಷ್ಟೇ ಪಾಂಡಿತ್ಯ ಇದ್ದರೂ ಸಂಭಾಷಣೆ ಆಗದಿದ್ದರೆ ಭಾಷೆ ಮೃತಪಡುತ್ತದೆ. ಸಂಸ್ಕೃತದ ಅಮೃತ ಸಿಂಚನದ ಶಿಬಿರಗಳು ಅಭಿಯಾನ ರೀತಿಯಲ್ಲಿ ನಿರಂತರ ನಡೆಯಲಿವೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಾಮೃತಮ್ ಉಪಾಧ್ಯಕ್ಷ ಅಶೋಕ ಹರಪನಹಳ್ಳಿ ಮಾತನಾಡಿ, ಸಂಸ್ಕೃತ ಭಾಷೆ ಇಲ್ಲದಿದ್ದರೆ ಭಾರತ ಇಲ್ಲ. ದೇವರು ಸೃಷ್ಟಿಸಿದ ಭಾಷೆ ಇದು. ಎಲ್ಲದಕ್ಕೂ ಬೀಜ ಮಂತ್ರದಂತಿರುವ ಸಂಸ್ಕೃತ ಪ್ರಸಾರ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಕೃತ ಭಾರತಿ ಉತ್ತರ ಪ್ರಾಂತ ಸಂಘಟನಾ ಮಂತ್ರಿ ಲಕ್ಷ್ಮೀನಾರಾಯಣ ಅವರು, ಉತ್ತರ ಕರ್ನಾಟಕದಲ್ಲಿ ಸುಮಾರು 20 ವರ್ಷಗಳಿಂದ ಸಂಸ್ಕೃತ ಭಾರತಿ ಕೆಲಸ ಮಾಡುತ್ತಿದೆ. 3 ತಿಂಗಳಲ್ಲಿ 108 ಸಂಸ್ಕೃತ ಶಿಬಿರ ನಡೆಸಿ 10 ಸಾವಿರ ಜನರಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

    ಸಮಾಜ ಸೇವಕ ಎ.ಸಿ. ಗೋಪಾಲ ಮಾತನಾಡಿ, ಸಂಸ್ಕೃತಾಮೃತಮ್ ಮೂಲಕ ಭಾಷೆಯ ಬೆಳವಣಿಗೆಗೆ ಪ್ರಯತ್ನ ನಡೆಸಲಾಗುತ್ತಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

    ಸಂಸ್ಕೃತಕ್ಕಾಗಿ ಒಂದು ಅಭಿಯಾನ ಕುರಿತ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಮಜೇಥಿಯಾ ಫೌಂಡೇಷನ್ ಸಿಇಒ ಅಜಿತ ಕುಲಕರ್ಣಿ, ಸಂಸ್ಕೃತ ಭಾರತಿ ನಗರ ಅಧ್ಯಕ್ಷ ಮುಕುಂದ ಜಠಾರ, ಅಮರೇಶ ಹಿಪ್ಪರಗಿ, ಸತೀಶ ಮೂರೂರ, ಸುನಿಲಕುಮಾರ, ರಾಜಶ್ರೀ ಜಡಿ, ಸುಭಾಸಸಿಂಗ್ ಜಮಾದಾರ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts