More

    ಪ್ರಮಾಣೀಕರಿಸಿದ ಬೀಜಗಳನ್ನಷ್ಟೇ ವಿತರಿಸಿ

    ಲಕ್ಷ್ಮೇಶ್ವರ: ಕಳೆದ 2 ದಿನಗಳಿಂದ ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕಿನಲ್ಲಿನ ಎಲ್ಲ ಬೀಜ, ಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಳಿಗೆಗಳಿಗೆ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ‘ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆ ಪ್ರಾರಂಭವಾಗುತ್ತಿದ್ದು, ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಪ್ರಮಾಣೀಕರಿಸಿದ ಬೀಜಗಳನ್ನು ಮಾತ್ರ ಮಾರಾಟ ಮಾಡಬೇಕು. ಪ್ರತಿಯೊಂದು ಪರಿಕರಗಳ ನಿಖರ ಬೆಲೆಯನ್ನು ಸೂಚನಾ ಫಲಕದಲ್ಲಿ ನಮೂದಿಸಬೇಕು. ಕಂಪನಿಯು ನಿರ್ದಿಷ್ಟಪಡಿಸಿದ ದರದಲ್ಲಿ ಕೃಷಿ ಸಾಮಗ್ರಿಗಳನ್ನು ಮಾರಾಟ ಮಾಡಬೇಕು’ ಎಂದು ಅಧಿಕಾರಿಗಳು ಮಾರಾಟಗಾರರಿಗೆ ಸೂಚಿಸಿದರು.

    ಅಲ್ಲದೆ ರೈತರು ಪ್ರಮಾಣೀಕರಿಸಿದ ಬಿತ್ತನೆ ಬೀಜವನ್ನು ಖರೀದಿಸಬೇಕು. ಕೆಲ ಸಂದರ್ಭಗಳಲ್ಲಿ ಬಿತ್ತಿದ ನಂತರ ಬೀಜಗಳು ಮೊಳಕೆ ಒಡೆಯದೆ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಆದ್ದರಿಂದ ರೈತರು ಬಿತ್ತನೆ ಬೀಜ ಖರೀದಿಸಿದ ರಸೀದಿ ಹಾಗೂ ಬೀಜದ ದಾಸ್ತಾನು ಚೀಲವನ್ನು ಬೆಳೆ ಕಟಾವು ಆಗುವವರೆಗೂ ಕಾಯ್ದಿರಿಸಬೇಕು. ಇದರಿಂದ ಬೆಳೆ ನಷ್ಟವನ್ನು ಅಂದಾಜು ಮಾಡಲು ಅನುಕೂಲವಾಗುತ್ತದೆ. ಪರವಾನಿಗೆ ಇಲ್ಲದೆ ಅಕ್ರಮವಾಗಿ ಬೀಜ ದಾಸ್ತಾನು ಮಾಡುವುದು ಹಾಗೂ ದೃಢೀಕೃತವಲ್ಲದ ಬೀಜಗಳನ್ನು ದಾಸ್ತಾನು ಮಾಡಿ ರೈತರಿಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಮಾರುಕಟ್ಟೆಯಲ್ಲಿ ಕೃಷಿ ಪರಿಕರ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಸೇರಿ ಎಲ್ಲ ನಿಯಮಗಳನ್ನು ರೈತರು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು. ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರಗೌಡ ನರಸಮ್ಮನವರ, ರೈತ ಸಂಪರ್ಕ ಕೇಂದ್ರ ಶಿರಹಟ್ಟಿಯ ಕೃಷಿ ಅಧಿಕಾರಿ ಕೆ.ಎ. ನದಾಫ್ ಇದ್ದರು.

    ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ

    ನರಗುಂದ: ಅನಧಿಕೃತ ಮತ್ತು ಕಳಪೆ ಮೆಕ್ಕೆಜೋಳ ಬಿತ್ತನೆ ಬೀಜ ಮಾರಾಟ ತಡೆಯುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

    ‘ಅನಧಿಕೃತ ಬೀಜ ಮಾರಾಟಗಾರರು ಬೀಜದ ಅಭಾವವಿರುವ ಬಗ್ಗೆ ಸುಳ್ಳು ಸುದ್ದಿ ಹರಿಬಿಡುವುದಲ್ಲದೆ ಹೆಚ್ಚಿನ ಬೆಲೆಗೆ ಕಳಪೆ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಕೃಷಿ ಇಲಾಖೆಯಿಂದ ಪರವಾನಗಿ ಪಡೆದ ವ್ಯಾಪಾರಸ್ಥರು ಮಾತ್ರ ರೈತರಿಗೆ ಬಿತ್ತನೆ ಬೀಜ ಮಾರಬೇಕು. 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಯಾವುದೇ ಬೀಜಗಳ ವಿತರಣೆಯಲ್ಲಿ ಲೋಪದೋಷವಾಗದಂತೆ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಚನ್ನಪ್ಪ ಅಂಗಡಿ ತಿಳಿಸಿದ್ದಾರೆ.

    ಮೆಕ್ಕೆಜೋಳ ಬಿತ್ತನೆ ಬೀಜಗಳ ಅಕ್ರಮ ದಾಸ್ತಾನು ಹಾಗೂ ಅನಧಿಕೃತ ಮಾರಾಟ ಮಾಡುವುದು, ಸಾಗಾಣಿಕೆ ಮಾಡುವುದು, ಪ್ಯಾಕಿಂಗ್ ರಹಿತ ಬೀಜ ವಿತರಿಸುವುದು ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ಕೃಷಿ ಇಲಾಖೆಯ ಗಮನಕ್ಕೆ ತಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಬೀಜ ನಿಯಂತ್ರಣ ಆದೇಶ 1983ರ ಅನ್ವಯ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ತಿಳಿಸಿದ್ದಾರೆ.

    ಹತ್ತಿ ಖರೀದಿ ಪ್ರಕ್ರಿಯೆ ಮೇ 1ರಿಂದ

    ಲಕ್ಷ್ಮೇಶ್ವರ: ಭಾರತೀಯ ಹತ್ತಿ ನಿಗಮ(ಸಿಸಿಐ)ದಿಂದ ಲಕ್ಷ್ಮೇಶ್ವರದಲ್ಲಿ ಮೇ 1ರಿಂದ ಬೆಂಬಲ ಬೆಲೆಯಡಿ ಹತ್ತಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಎನ್.ಎ. ಲಕ್ಕುಂಡಿ ತಿಳಿಸಿದ್ದಾರೆ. ಹತ್ತಿ ಮಾರಾಟಕ್ಕೆ ತರುವ ರೈತರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್, ಜಮೀನಿನ ಉತಾರದೊಂದಿಗೆ ಎಪಿಎಂಸಿಯಲ್ಲಿ ಪಾಳೀ ಚೀಟಿ ಪಡೆಯಬೇಕು. ನಿತ್ಯ 20 ಗಾಡಿಗಳನ್ನು ಮಾತ್ರ ಖರೀದಿಸಲಾಗುವುದು. ರೈತ ಬಾಂಧವರು ಡ್ರೈವರ್ ಸೇರಿ ಇಬ್ಬರು ಮಾತ್ರ ಬರಬೇಕು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯುವ ಮೂಲಕ ಬೆಂಬಲ ಬೆಲೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಸಿಸಿಐ 5110 ರಿಂದ 5350 ರೂ. ವರೆಗೆ ಖರೀದಿ ಮಾಡುತ್ತಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡಿದ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

    ಮಾಲೀಕರಿಗೆ ಶೋಕಾಸ್ ನೋಟಿಸ್

    ಮುಂಡರಗಿ: ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ನೇತೃತ್ವದ ತಂಡವು ಪಟ್ಟಣದ ವಿವಿಧ ಬೀಜ ಹಾಗೂ ಕ್ರಿಮಿನಾಶಕ ಮಾರಾಟ ಮಳಿಗೆಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇದೇ ವೇಳೆ ಸ್ಥಳೀಯ 5 ಬೀಜ ಹಾಗೂ ಕ್ರಿಮಿನಾಶಕ ಮಾರಾಟ ಮಳಿಗೆಗಳಲ್ಲಿ ದರಪಟ್ಟಿ ಹಾಕದ ಮಾಲೀಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts