More

    ಪ್ರಧಾನಿ ಮನ್ ಕಿ ಬಾತ್​ನಲ್ಲಿ ಜೇನು ಕೃಷಿಕ ಮಧುಕೇಶ್ವರ ಹೆಸರು ಪ್ರಸ್ತಾಪ

    ಶಿರಸಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ನಡೆಸಿದ 91ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರ ಸಾಧನೆಯನ್ನು ವಿಶೇಷವಾಗಿ ಕೊಂಡಾಡಿದರು.
    ದೇಶದ ವಿವಿಧೆಡೆ ಜೇನು ಕೃಷಿಕರು, ಆಯುರ್ವೆದ ಗಿಡಮೂಲಿಕೆ ಬೆಳೆಗಾರರನ್ನು ಶ್ಲಾಘಿಸಿದ ಪ್ರಧಾನಿ ಅವರು, ಮಧುಕೇಶ್ವರ ಅವರ ಜೇನು ಕೃಷಿ ಸಾಧನೆಯನ್ನು ಶ್ಲಾಘಿಸಿದರು.
    50 ಜೇನು ಕಾಲನಿಗೆ ಸರ್ಕಾರದ ಸಹಾಯಧನ ಸೌಲಭ್ಯ ಪಡೆದಿದ್ದ ಮಧುಕೇಶ್ವರ ಹೆಗಡೆ ಈಗ 800 ಜೇನು ಕಾಲನಿ ಪೋಷಿಸುತ್ತಿದ್ದಾರೆ. ಹಲವಾರು ಟನ್ ಜೇನುತುಪ್ಪ ಉತ್ಪಾದಿಸುವ ಅವರು ನೇರಳೆ ಜೇನುತುಪ್ಪ, ತುಳಸಿ ಜೇನುತುಪ್ಪ, ಆಮ್ಲ ಜೇನುತುಪ್ಪ ಸೇರಿದಂತೆ ವನಸ್ಪತಿ ಜೇನು ತುಪ್ಪಗಳನ್ನೂ ಉತ್ಪಾದಿಸುವುದು ವಿಶೇಷವೆನಿಸಿದೆ. ಜೇನು ಕೃಷಿಯ ಸಾಧನೆ ಅವರ ಹೆಸರನ್ನು ಪ್ರಸಿದ್ಧಿಗೆ ತಂದಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
    ಪ್ರಧಾನಿ ಮೋದಿ ಅವರು ಹೆಸರು ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿದ ಮಧುಕೇಶ್ವರ ಹೆಗಡೆ, ಜೇನುಕೃಷಿ ಇಂದು ದೇಶದ ಪ್ರಧಾನ ಮಂತ್ರಿಯವರು ನನ್ನನ್ನು ಗುರುತಿಸುವಂತೆ ಮಾಡಿದೆ. ಪ್ರಧಾನಿಯವರು ನನ್ನ ಹೆಸರನ್ನು ಉಲ್ಲೇಖಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ನನಗೆ ಅಚ್ಚರಿಯ ಜತೆ ಸಂತಸವಾಯಿತು ಎಂದು ತಿಳಿಸಿದರು.
    ಮಧುಕೇಶ್ವರ ಹೆಗಡೆ ಅವರು ಕಳೆದ 35 ವರ್ಷಗಳಿಂದ ಜೇನು ಕೃಷಿಯಲ್ಲಿ ತೊಡಗಿದ್ದಾರೆ. ವಾರ್ಷಿಕ 1500ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಜೇನು ಬೆಳೆಸುತ್ತಿದ್ದಾರೆ. ವಾರ್ಷಿಕ ಸರಾಸರಿ 4.5 ಟನ್ ಜೇನುತುಪ್ಪ ಉತ್ಪಾದಿಸುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ವನಸ್ಪತಿ ಗಿಡಗಳನ್ನೂ ಮನೆ ಸುತ್ತಮುತ್ತ ಬೆಳೆಸುತ್ತಿರುವುದು ವಿಶೇಷವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts