More

    ಪ್ರಧಾನಿಗೆ ದೂರು ಕೊಟ್ಟರೂ ಗ್ರಾಮಸ್ಥನಿಗೆ ಸಿಗದ ಸೂರು

    ಸಿಂದಗಿ: ದೇಶದ ಆಡಳಿತ ಎಷ್ಟೇ ಸುಧಾರಿಸಿದರೂ, ಗ್ರಾಮೀಣ ಜನರು ತಮ್ಮ ಹಕ್ಕು ಮತ್ತು ಸೌಲಭ್ಯಗಳಿಗಾಗಿ ಎಷ್ಟೇ ಕೂಗಿತ್ತರೂ, ಅಳಲು ತೋಡಿಕೊಂಡರೂ ಅವರ ಹೋರಾಟಕ್ಕೆ ನ್ಯಾಯ ಮರೀಚಿಕೆಯೇ ಸರಿ.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ಸೂರಿಗಾಗಿ ಹಲವಾರು ಆಶ್ರಯ ಯೋಜನೆಗಳನ್ನು ಜಾರಿಗೆ ತಂದರೂ, ಗ್ರಾಪಂ ಮಟ್ಟದಲ್ಲಿನ ಜನಪ್ರತಿನಿಧಿಗಳ ದುಡ್ಡಿನ ದಾಹ, ಅಭಿವೃದ್ಧಿ ಅಧಿಕಾರಿಗಳ ಮಾತಿಗೆ ಓಗೊಡುವ ಮೇಲಧಿಕಾರಿಗಳ ದುರಾಡಳಿತದಿಂದ ತಾಲೂಕಿನ ರಾಂಪೂರ ಪಿಎ ಗ್ರಾಪಂ ವ್ಯಾಪ್ತಿಯ ಗಣಿಹಾರ ಗ್ರಾಮದಲ್ಲಿ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜಗದೇವಪ್ಪ ಮಾಳಪ್ಪ ಪೂಜಾರಿ ಎಂಬ ಗ್ರಾಮಸ್ಥ ತನ್ನ ಹಕ್ಕಿಗಾಗಿ ದಶಕದಿಂದಲೂ ಅಲೆದಾಡುವಂತಾಗಿದೆ.

    ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ರಾಷ್ಟ್ರದ ಪ್ರಥಮ ಪ್ರಜೆಗೂ ದೂರಿತ್ತರೂ ಆತನ ಆಸರೆ ಮನೆ ಕನಸು ಇನ್ನೂ ನನಸಾಗಿಲ್ಲದಿರುವುದು, ಪ್ರತಿ ಮನೆಗೂ ಸೌಲಭ್ಯ ಎಂಬ ಸರ್ಕಾರಗಳ ಧ್ಯೇಯ, ಭರವಸೆ ಮತ ಸೆಳೆಯುವ ತಂತ್ರದ ಒಣ ಮಾತಿಗೆ ಸರಿ ಎನ್ನುವಂತಾಗಿದ್ದಲ್ಲದೇ, ಚುನಾವಣೆ ವೇಳೆ ಮಾತು ಕೊಟ್ಟು ಮತ ಪಡೆದವರೂ ಕೊಡಲಿಲ್ಲ ಆಸರೆ ಎನ್ನುವ ಗೋಳು ಈ ಕುಟುಂಬದ್ದು.

    ಕಳೆದ ಮೂರು ದಶಕಗಳಿಂದ ಗಣಿಹಾರ ಗ್ರಾಮದಲ್ಲಿಯೇ ವಾಸಿಸುತ್ತಿರುವ ಪೂಜಾರಿ ಕುಟುಂಬವು ಸರ್ಕಾರದ ಯಾವುದಾದರೂ ಆಸರೆ ಯೋಜನೆಯಡಿ 2014ರಲ್ಲಿ ಗ್ರಾಪಂಗೆ ಸೂರು ಒದಗಿಸುವಂತೆ ಮನವಿ ಸಲ್ಲಿಸಿತ್ತು. ಆಗ ಜಿಪಂನಿಂದ, ತಾಪಂ ಅಧಿಕಾರಿಗೆ ಯಾವುದಾದರೂ ವಸತಿ ಯೋಜನೆಯಡಿ ಅದರ ಮಾರ್ಗಸೂಚಿಯನ್ವಯನ್ನು ಪರಿಶೀಲಿಸಿ ಅರ್ಹರಿದ್ದರೆ 2014-15ನೇ ಸಾಲಿನ ಯೋಜನೆ ಗುರಿಯಲ್ಲಿ ಪರಿಗಣಿಸಿ, ವಸತಿ ಸೌಲಭ್ಯ ಒದಗಿಸುವಂತೆ ಕ್ರಮ ಕೈಗೊಂಡು ಅರ್ಜಿದಾರರನಿಗೆ ಹಿಂಬರಹ ನೀಡಲು ಸೂಚಿಸಲಾಗಿತ್ತು. ಆದರೆ ಆ ಸೂಚನೆಯೂ ಮಾಳಪ್ಪನ ಕುಟುಂಬಕ್ಕೆ ಆಸರೆ ಮನೆ ಒದಗಿಸದೇ ಕೈ ಚೆಲ್ಲಿತ್ತು ತಾಪಂ ಆಡಳಿತ.

    ಸ್ಪಂದಿಸದ ಗ್ರಾಪಂ, ತಾಪಂ, ಜಿಪಂ ಹಾಗೂ ಜನಪ್ರತಿನಿಧಿಗಳ ನಡೆಗೆ ಬೇಸತ್ತು. 2018ರಲ್ಲಿ ಸಿಎಂ ಕಚೇರಿಗೆ ತೆರಳಿ ಕರ್ನಾಟಕ ಸರ್ಕಾರದ ಇ-ಜನಸ್ಪಂದನಕ್ಕೂ ಹೋಗಿ ಅರ್ಜಿ (ಸಂಖ್ಯೆ: 51701239) ಸಲ್ಲಿಸಿದ್ದ ಮಾಳಪ್ಪನಿಗೆ ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ಉಪ ಇಲಾಖೆಗೆ ಕಳುಹಿಸಲಾಗಿದೆ ಎಂಬ ದೂರಿನ ಹಿಂಬರಹದ ಹೊರತು, ಕುಟುಂಬದ ಸೂರಿನ ಕನಸು ಮತ್ತೆ ಕನಸಾಗಿಯೇ ಉಳಿಯಿತು ಎಂಬ ಆತನ ಆಕ್ರೋಶ, ಬಡವನ ಸಿಟ್ಟು ದವಡೆಗೆ ಮೂಲ ಎಂಬಂತಾಗಿದೆ.

    ರಾಜ್ಯ ಸರ್ಕಾರದಿಂದ ತನ್ನ ಸಮಸ್ಯೆ ಬಗೆಹರಿಯದ ಕಾರಣ 2019ರ ಡಿಸೆಂಬರ್‌ನಲ್ಲಿ ತನ್ನ ಸಮಸ್ಯೆ ಅರಿಯಲು ಖುದ್ದಾಗಿ ಹಿಂದಿ ಭಾಷೆಯಲ್ಲಿ ಬರೆದು ಪ್ರಧಾನಮಂತ್ರಿ ಕಚೇರಿಗೆ ಮಾಳಪ್ಪ ಪತ್ರ ಬರೆದಿದ್ದ. ಪ್ರಧಾನಿ ಕಚೇರಿಯಿಂದ 2020ರ ಜನೇವರಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮಕ್ಕಾಗಿ ಸೂಚಿಸಿ ಹಿಂಬರಹವನ್ನು ನೀಡಲು ತಿಳಿಸಿತ್ತು. ನಂತರದಲ್ಲಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅಥವಾ ಆತನ ದೂರಿಗೆ ಸಂಬಂಧಿಸಿದ ಯಾವ ಇಲಾಖೆಯಿಂದಲೂ ಸೂರು ಒದಗಿಸುವ ನಿರ್ಧಾರದ ಬಗ್ಗೆ ಮಾಹಿತಿಯೇ ಬಂದಿಲ್ಲ ಎನ್ನುತ್ತಾರೆ ಮಾಳಪ್ಪ.

    ಸದ್ಯ ಗ್ರಾಮದ ಗಾಂವಠಾಣ ಜಾಗೆಯಲ್ಲಿ ಪತ್ರಾಸ್ ಶೆಡ್ಡು ಹೊಡೆದುಕೊಂಡಿರುವ ಮಾಳಪ್ಪನಿಗೆ ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿಗಳ ಕಚೇರಿಗೂ ದೂರು ಸಲ್ಲಿಸಿದರೂ ಸೂರಿನ ಕನಸು ಈಡೇರಿಲ್ಲ.

    ನಾನು ಈ ದೇಶದ ಬಡ ಪ್ರಜೆ. ನನ್ನ ಏಳಿಗೆ, ಉದ್ಧಾರಕ್ಕಾಗಿರುವ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕದ ತಟ್ಟಿದರೂ, ಲೋಕಾಯುಕ್ತರಿಗೆ ದೂರು ಕೊಟ್ಟರೂ ನಮ್ಮ ಕುಟುಂಬಕ್ಕೆ ಚಿಕ್ಕ ಸೌಲಭ್ಯದ ಭರವಸೆಯೂ ಸಿಕ್ಕಿಲ್ಲ. ನ್ಯಾಯ ಬದ್ಧವಾಗಿ ಸಿಗದ ಗ್ರಾಮೀಣರ ಹಕ್ಕು ಮತ್ತು ಸೌಲಭ್ಯಕ್ಕಾಗಿ ಮರುಗುವ ಬಡವನ ಬೆನ್ನಿಗೆ ಯಾರೂ ನಿಲ್ಲರು. ಭ್ರಷ್ಟಾಚಾರ ಮುಕ್ತ ಎನ್ನುವ ಸರ್ಕಾರಗಳ ಪ್ರತಿಷ್ಠೆಯ ಮಾತು ನನ್ನ ಬೇಡಿಕೆಯನ್ನು ಮನಗಾಣಲಿಲ್ಲ. ಆದರೆ ವಸತಿ ಮನೆ ಪಡೆಯುವವರೆಗೂ ನನ್ನ ಹಾಗೂ ನಮ್ಮ ಕುಟುಂಬದ ಹೋರಾಟ ನಿಲ್ಲದು.
    ಮಾಳಪ್ಪ ಪೂಜಾರಿ, ಸೂರಿಗಾಗಿ ಪರಿತಪಿಸುತ್ತಿರುವ ಫಲಾನುಭವಿ.
    ಮಾಳಪ್ಪ ಪೂಜಾರಿ ನಮ್ಮ ವಾರ್ಡ್‌ನ ಕಡುಬಡವ. ಆತನ ವಸತಿ ಮನೆ ಕನಸು ನನಸು ಮಾಡಲು ಮುಂಬರುವ ವಸತಿ ಯೋಜನೆಯಡಿ ಆದ್ಯತೆಯ ಫಲಾನುಭವಿಯನ್ನಾಗಿಸಲು ಕ್ರಮ ವಹಿಸುವೆ. ಅವರ ಬೇಡಿಕೆಗೆ ನ್ಯಾಯ ಒದಗಿಸುವ ಕೆಲಸ ಮಾಡುವೆ.
    ದುಮಡಮ್ಮ ಅಮ್ಮಾಗೋಳ, ಗ್ರಾಪಂ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts