More

    ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಮುಂದು : ಸತತ ಏಳನೇ ಬಾರಿಗೆ ಮೊದಲ ಸ್ಥಾನ

    ರಾಮನಗರ : ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಅನುಷ್ಠಾನದಲ್ಲಿ (ಪಿಎಂಎಂವಿವೈ) ರಾಮನಗರ ಜಿಲ್ಲೆ ಸತತ ಏಳನೇ ಬಾರಿಗೆ ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ. 2020ರ ಜುಲೈನಿಂದ 2021ರ ಜನವರಿವರೆಗೆ ಮೊದಲ ಸ್ಥಾನ ಕಾಯ್ದುಕೊಳ್ಳುವ ಮೂಲಕ ಮಾದರಿಯಾಗಿ ಹೊರಹೊಮ್ಮಿದೆ.
    ಜಿಪಂ ಮಾರ್ಗದರ್ಶನದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ 2017ರ ಜ.1ರಿಂದ ಮಾತೃವಂದನಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಆರಂಭಗೊಂಡ ಮೂರೂವರೆ ವರ್ಷಗಳಲ್ಲಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಜಿಪಂ ಕೈಗೊಂಡ ವಿಶೇಷ ಕಾಳಜಿಯಿಂದಾಗಿ ಇಂದು ಈ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ.

    ಜಿಲ್ಲೆಯಲ್ಲಿ ಸುಮಾರು 11 ಲಕ್ಷ ಜನಸಂಖ್ಯೆ ಇದ್ದು, 4750 ಸಾವಿರ ಗರ್ಭಿಣಿಯರಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರು ಜಿಲ್ಲೆಯಲ್ಲಿರುವ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡುವುದರ ಜತೆಗೆ ಅವರನ್ನು ನೋಂದಣಿ ಮಾಡಿಸುತ್ತಾರೆ. ನಿಯಮಿತವಾಗಿ ಇಲಾಖೆ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಾರೆ.
    ಆನ್‌ಲೈನ್ ನೆರವು: ಮಾತೃವಂದನಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಸಮನ್ವಯ ಅಧಿಕಾರಿಯಾಗಿ ಡಿ.ಸತೀಶ್ ಅವರನ್ನು ನೇಮಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಬ್ಯಾಂಕ್ ಇಲ್ಲವೇ ಅಂಚೆ ಇಲಾಖೆಯಲ್ಲಿ ಖಾತೆ ತೆರೆದುಕೊಡಲಾಗಿದೆ. ಜಿಪಂ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಯೋಜನೆ ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿರುವ ಗರ್ಭಿಣಿಯರು ಮತ್ತು ಬಾಣಂತಿಯರ ವಿವರವನ್ನು ಆನ್‌ಲೈನ್‌ನಲ್ಲಿ ದಾಖಲು ಮಾಡಲಾಗಿದೆ. ಪ್ರತಿದಿನವೂ ಯೋಜನೆಯ ಪ್ರಗತಿಯನ್ನು ಇದರಿಂದ ಅರಿತುಕೊಳ್ಳಲು ಸಹಾಯಕವಾಗಿದೆ. ಜತೆಗೆ, ಸಮರ್ಪಕವಾಗಿ ಅನುಷ್ಠಾನಗೊಳ್ಳಲು ನೆರವಾಗಿದೆ ಎಂದು ಸಿಇಒ ಇಕ್ರಂ ತಿಳಿಸುತ್ತಾರೆ.
    ಡಿಸಿ, ಸಿಇಒ ವಿಶೇಷ ಆಸಕ್ತಿ
    ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಪಂ ಸಿಇಒ ಇಕ್ರಂ ವಿಶೇಷ ಆಸಕ್ತಿಯಿಂದಾಗಿ ಈ ಯೋಜನೆ ನಿರೀಕ್ಷೆಗೂ ಮೀರಿ ಸಫಲಗೊಂಡಿದೆ. ಸಿಡಿಪಿಒಗಳಾದ ಮಂಜುನಾಥ್, ದಿನೇಶ್, ಸಿದ್ದಲಿಂಗಯ್ಯ, ಸುರೇಂದ್ರ ಸೇರಿ ಎಲ್ಲ ಹಿರಿಯ ಮೇಲ್ವಿಚಾರಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪರಿಶ್ರಮದಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿ.ವಿ.ರಾಮನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts