More

    ಪ್ರತಿ ಪಂಚಾಯಿತಿಗೆ 30 ಜಾನುವಾರು -ಸಹಕಾರಿ ಬ್ಯಾಂಕ್‌ಗಳಿಂದ ಹೊಂದಾಣಿಕೆ ಸಾಲ -ಸಚಿವ ಮಲ್ಲಿಕಾರ್ಜುನ

    ದಾವಣಗೆರೆ: ಜಾನುವಾರು ಆಧಾರಿತ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ರೈತರಿಗೆ ಪಂಚಾಯಿತಿವಾರು 25 ರಿಂದ 30 ಹಸುಗಳನ್ನು ನೀಡುವ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
    ತಾಲೂಕಿನ ಕಡ್ಲೇಬಾಳು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂನಿಂದ ಸೋಮವಾರ ಆಯೋಜಿಸಿದ್ದ ಚೊಚ್ಚಲ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿ ಇಲಾಖೆಯಿಂದ ಇದಕ್ಕಾಗಿ 40 ಸಾವಿರ ರೂ. ಸಹಾಯಧನ ಸಿಗಲಿದೆ. ತಮಿಳುನಾಡಿನಿಂದ ಹಸುಗಳನ್ನು ಖರೀದಿಸಿ ನೀಡಲಾಗುತ್ತಿದೆ ಎಂದರು.
    ಹೆಚ್ಚು ಹಾಲು ಉತ್ಪಾದಿಸುವ ಗುಜರಾತ್‌ನ ಜಫರಾಬಾದಿ ತಳಿಯ ಎಮ್ಮೆಯನ್ನೂ ಖರೀದಿಸಬಹುದು. ಈ ಸಂಬಂಧ ಡಿಸಿಸಿ ಹಾಗೂ ಸಹಕಾರ ಬ್ಯಾಂಕ್‌ಗಳಿಂದ ಸಾಲ ಕೊಡಿಸಲಾಗುವುದು. ಹೈನುಗಾರಿಕೆ ಉತ್ತೇಜನದಿಂದ ಸರ್ಕಾರದ ಆರ್ಥಿಕತೆಗೂ ನೆರವಾಗಲಿದೆ. ದನದ ಕೊಟ್ಟಿಗೆಗೆ ಜಿಪಂ ನೀಡುವ 50 ಸಾವಿರ ರೂ. ಲಾಭವನ್ನೂ ಪಡೆಯಬೇಕು ಎಂದರು.
    ಕಡ್ಲೇಬಾಳು ಸುತ್ತಲಿನ 5 ಕೆರೆಗಳ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ 125 ಕೋಟಿ ರೂ. ಮಂಜೂರಾತಿ ನೀಡಿದ್ದರೂ ಬಿಜೆಪಿ ಗಮನ ಹರಿಸಲಿಲ್ಲ. ಈ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು. ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ ಎಂದು ಹೇಳಿದರು.
    ಜಿಲ್ಲಾಡಳಿತ ನಿರಂತರವಾಗಿ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿಗಳ ಪ್ರಮಾಣ ತಗ್ಗಿಸಬೇಕು. ಸುಲಲಿತ ಸರ್ವೇ ಕಾರ್ಯದೊಂದಿಗೆ ಯಾವುದೇ ದೂರು ಬಾರದಂತೆ ರೈತರ ಕೆಲಸ ಮಾಡಿಕೊಡಲು ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
    ಗ್ರಾಮದಲ್ಲಿ ಶೌಚಗೃಹಗಳ ನಿರ್ಮಾಣಕ್ಕೆ ಹೆಚ್ಚು ಬೇಡಿಕೆ ಇದೆ. ಬೇತೂರು ಗ್ರಾಮದಲ್ಲಿ ಹೊಂದಾಣಿಕೆ ಹಣ ಬಳಸಿ, ಒಳಚರಂಡಿ ವ್ಯವಸ್ಥೆ ಮೂಲಕ ಮನೆಗಳ ಶೌಚಗೃಹದ ಸಂಪರ್ಕ ಕಲ್ಪಿಸಲಾಗಿತ್ತು. ಇದೇ ಮಾದರಿಯನ್ನು ಈ ಗ್ರಾಮದಲ್ಲೂ ಮಾಡಬೇಕೆಂದು ಹಾಗೂ 70 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಸ್ತಾವ ಮಾಡುವಂತೆಯೂ ಸೂಚನೆ ನೀಡಿದರು.
    ಅರಸಾಪುರ, ಬಸಾಪುರ, ಓಬಜ್ಜಿಹಳ್ಳಿಗೆ ಸ್ಮಶಾನ ಭೂಮಿ ಕಲ್ಪಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಮನೆಗಳನ್ನು ವಿತರಿಸಬೇಕು. ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡುವ ಮೂಲಕ ದಾವಣಗೆರೆ ಆಧುನಿಕ ಜಿಲ್ಲೆಯಾಗಿ ಮಾರ್ಪಾಡು ಮಾಡಿ ಎಂದು ಮನವಿ ಮಾಡಿದರು.
    ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ, ರಾಜ್ಯ ಸರ್ಕಾರ ಆಯೋಜಿಸಿರುವ ಜನತಾದರ್ಶನ ಜನರ ಆಶಾಕಿರಣವಾಗಿದೆ. ಇಲ್ಲಿ ಬಂದಿರುವ ಇ-ಸ್ವತ್ತು, ಗ್ರಾಮ ಠಾಣಾ ವಿಸ್ತರಣೆಯ ಅರ್ಜಿಗಳಿಗೆ ಇನ್ನು 15 ದಿನದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದರು.
    ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಜಿಲ್ಲೆಯ ಇ-ಸ್ವತ್ತಿನ ಸಮಸ್ಯೆ ಪರಿಹಾರಕ್ಕೆ ಕ್ರಿಯಾ ಯೋಜನೆ ರೂಪಿಸಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು. ಸ್ವಚ್ಛ ಭಾರತ್ ಯೋಜನೆಯಡಿ ಪ್ರತಿ ಮನೆಗೂ ಶೌಚಗೃಹ ಕಲ್ಪಿಸಲಾಗುವುದು ಎಂದರು.
    ಮುಖಂಡರಾದ ರಾಘವೇಂದ್ರನಾಯ್ಕ, ಬೇತೂರು ಕರಿಬಸಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ಪರಮೇಶ್ವರಪ್ಪ, ಉಪಾಧ್ಯಕ್ಷ ಎ.ಬಿ.ಪ್ರಭಾಕರ್, ಎಸ್ಪಿ ಉಮಾ ಪ್ರಶಾಂತ್, ಎಸಿ ದುರ್ಗಾಶ್ರೀ, ತಹಸೀಲ್ದಾರ್ ಎಂ.ಬಿ.ಅಶ್ವತ್ಥ, ಪಾಲಿಕೆ ಆಯುಕ್ತೆ ಎನ್.ರೇಣುಕಾ, ಮುಖಂಡರಾದ ಮುದೇಗೌಡ್ರ ಗಿರೀಶ್, ಮಾಗಾನಹಳ್ಳಿ ಪರಶುರಾಂ, ಮೇಕಾ ಮುರುಳೀಕೃಷ್ಣ, ಅಂಜಿಬಾಬು, ಸತ್ಯಬಾಬು ಇತರರಿದ್ದರು.
    ಸ್ವಸಹಾಯ ಸಂಘಗಳ ಉತ್ಪನ್ನಗಳು, ವಿವಿಧ ಇಲಾಖೆಗಳ ವಸ್ತು ಪ್ರದರ್ಶನ, ಕುಂದು ಕೊರತೆ ಅರ್ಜಿಗಳ ಸ್ವೀಕಾರ ನಡೆಯಿತು. ಎಸ್‌ಎಸ್ ಕೇರ್ ಟ್ರಸ್ಟ್‌ನಿಂದ ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts