More

    ಪ್ರತಿ ತಾಲೂಕಿನ ಐದು ಗ್ರಾಮಗಳ ಮಣ್ಣು ಪರೀಕ್ಷೆ

    ಸುಭಾಸ ಧೂಪದಹೊಂಡ ಕಾರವಾರ

    ಮಣ್ಣು ಆರೋಗ್ಯ ಕಾರ್ಡ್ ವಿತರಣೆಯ ಸ್ವರೂಪವನ್ನು ಸರ್ಕಾರ ಸಂಪೂರ್ಣವಾಗಿ ಬದಲಾಯಿಸಿದೆ. ಬರುವ ಆರ್ಥಿಕ ವರ್ಷದಿಂದ ಪ್ರತಿ ವರ್ಷ ಪ್ರತಿ ತಾಲೂಕಿನ ತಲಾ ಐದು ಗ್ರಾಮಗಳನ್ನು ಆಯ್ದುಕೊಂಡು ಎಲ್ಲ ಸರ್ವೆ ನಂಬರ್​ಗಳಿಂದ ಒಂದೊಂದು ಮಾದರಿಗಳನ್ನು ಪರಿಶೀಲನೆ ಮಾಡಿ ಮಾದರಿ ನೀಡಲಾಗುತ್ತದೆ.

    ಬದಲಾವಣೆ ಏಕೆ?: ಮಣ್ಣಿನ ಗುಣವನ್ನು ಅರಿತು ಅದಕ್ಕೆ ಪೋಷಕಾಂಶ ನೀಡಿ, ಕೃಷಿ ಮಾಡಿದಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂಬ ಉದ್ದೇಶದಿಂದ 2015ರಲ್ಲಿ ಕೇಂದ್ರ ಸರ್ಕಾರವು ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಜಾರಿಗೆ ತಂದಿತ್ತು. 25 ಎಕರೆಗಳ ಪ್ರದೇಶವನ್ನು ಒಂದು ಕ್ಲಸ್ಟರ್ ಎಂದು ಪರಿಗಣಿಸಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ, ಪರಿಶೀಲಿಸಿ ಆರೋಗ್ಯ ಕಾರ್ಡನ್ನು ರೈತರಿಗೆ ವಿತರಿಸಲಾಗುತ್ತಿತ್ತು.

    ಆದರೆ, ಇದಕ್ಕೆ ರೈತರಿಂದ ಅಸಮಾಧಾನ ವ್ಯಕ್ತವಾಯಿತು. 25 ಎಕರೆಯಲ್ಲಿರುವ ಹಲವು ರೈತರ ಜಮೀನಿಗೂ ಒಂದೇ ಕಾರ್ಡ್​ನ ವರದಿಯನ್ನು ಅನ್ವಯಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ರೈತರಿಂದ ಕೇಳಿ ಬಂದಿತ್ತು. ಅಧಿಕಾರಿಗಳೂ ತಾವು ವಿತರಿಸಿದ ಮಣ್ಣು ಆರೋಗ್ಯ ಕಾರ್ಡ್​ನ ಮಾಹಿತಿ ನಿಖರ ಎಂದು ಹೇಳಲು ಸಿದ್ಧರಿರಲಿಲ್ಲ. ಇದರಿಂದ 2019ರಲ್ಲಿ ಈ ಯೋಜನೆ ತಾತ್ಕಾಲಿಕವಾಗಿ ಸ್ಥಗಿತವಾಯಿತು. ಈಗ ಸರ್ಕಾರ ಯೋಜನೆಯ ಸ್ವರೂಪವನ್ನು ಬದಲಾಯಿಸಿದೆ. ಕಾರ್ಡ್ ಪಡೆಯಲು ರೈತರು ಯಾವುದೇ ಅರ್ಜಿ ಸಲ್ಲಿಸಬೇಕಿಲ್ಲ. ಆಯಾ ತಾಲೂಕಿನ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮಗಳನ್ನು ಆಯ್ಕೆ ಮಾಡಿ ಮಣ್ಣಿನ ಮಾದರಿ ಪರಿಶೀಲನೆ ನಡೆಸಲಿದ್ದಾರೆ.

    ಜಿಲ್ಲೆಯಲ್ಲಿ ಎಷ್ಟು?: ಜಿಲ್ಲೆಯಲ್ಲಿ ಮೊದಲ ವೃತ್ತ (2015 ರಿಂದ 2017)ದಲ್ಲಿ 1,08,358 ಕಾರ್ಡ್​ಗಳನ್ನು ವಿತರಿಸಲಾಗಿತ್ತು. 2 ನೇ ವೃತ್ತ(2017 ರಿಂದ 2019)ದಲ್ಲಿ 57,786 ಕಾರ್ಡ್​ಗಳನ್ನು ವಿತರಿಸಲಾಗಿದೆ. ಇನ್ನು ಮಾದರಿ ಗ್ರಾಮ ಯೋಜನೆಯಡಿ 839 ಕಾರ್ಡ್​ಗಳನ್ನು ವಿತರಿಸಲಾಗಿದೆ.

    ಸಾಕಷ್ಟು ಕಾಲಾವಕಾಶ ಬೇಕು: ಜಿಲ್ಲೆಯಲ್ಲಿ ಒಟ್ಟು 1,23,311 ಹೆಕ್ಟೇರ್ ಕೃಷಿ ಭೂಮಿ ಬಳಕೆಯಲ್ಲಿದೆ. ಒಟ್ಟು 1,75,571 ಭೂ ಹಿಡುವಳಿ ಇದೆ. ಇದರಲ್ಲಿ 1,27,045 ಹಿಡುವಳಿದಾರರು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ರೈತರಾಗಿದ್ದಾರೆ. ಮಳೆಗಾಲ ಅಲ್ಲದ ಸಮಯದಲ್ಲಿ, ಬೆಳೆ ಇಲ್ಲದ ಸಮಯದಲ್ಲಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಅದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕಿದೆ. ಜಿಲ್ಲೆಯ ಎಲ್ಲ ಪ್ರದೇಶದ ಭೂಮಿಗೆ ಆರೋಗ್ಯ ಕಾರ್ಡ್ ನೀಡಬೇಕಿದ್ದರೆ ಸಾಕಷ್ಟು ಸಮಯಾವಕಾಶ ಬೇಕಿದೆ.

    ಸದ್ಯ ಜಿಲ್ಲೆಯಲ್ಲಿ ತಾಲೂಕಿಗೆ ಒಂದರಂತೆ ತಾಲೂಕನ್ನು ಗುರುತಿಸಿ ಮಣ್ಣು ಆರೋಗ್ಯ ಕಾರ್ಡ್ ನೀಡಲಾಗಿದೆ. ಬರುವ ಏಪ್ರಿಲ್​ನಿಂದ ಜಿಲ್ಲೆಯ 55 ಗ್ರಾಮಗಳನ್ನು ಗುರುತಿಸಿ ಅಲ್ಲಿನ ಎಲ್ಲ ಸರ್ವೆ ನಂಬರ್​ಗಳಿಂದ ಮಾದರಿ ಪಡೆದು ಪರಿಶೀಲಿಸಲಾಗುವುದು.
    | ಹೊನ್ನಪ್ಪ ಗೋವಿಂದ ಗೌಡ
    ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts