More

    ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ

    ಹಾಸನ : ಸಾಮಾನ್ಯ ಜ್ಞಾನ ಹಾಗೂ ಕಾನೂನು ಅರಿವು ಇದ್ದರೆ ಸಮಾಜದಲ್ಲಿ ಯಾವುದೇ ಸಮಸ್ಯೆಗಳು ತಲೆದೋರುವುದಿಲ್ಲ ಎಂದು ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್ ಹೇಳಿದರು.


    ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


    ಜಮೀನು ವಿವಾದ, ಕುಟುಂಬ ಕಲಹ ಹಾಗೂ ಇತರ ಯಾವುದೇ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾದರೂ ಕಾನೂನಿನ ಬಗ್ಗೆ ತಿಳಿವಳಿಕೆ ಇದ್ದರೆ ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬಹುದು. ಆದರೆ ಸಣ್ಣ ಸಮಸ್ಯೆಯನ್ನೇ ದೊಡ್ಡದಾಗಿಸಿಕೊಂಡು ಠಾಣೆ ಇಲ್ಲವೇ, ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.


    ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕು ಅಧ್ಯಕ್ಷ ಅಡಗೂರು ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ರೈತರು ತಮ್ಮ ಕೆಲಸಗಳನ್ನು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದಂತೆ ನೇರ ಹಾಗೂ ಸಕಾಲದಲ್ಲಿಯೇ ಮಾಡಿಸಿಕೊಳ್ಳುವ ದಿನಗಳು ಸಮೀಪಿಸುತ್ತಿವೆ ಎಂದರು.
    ಇಂತಹ ವೇದಿಕೆಗಳು ಮುನ್ನಲೆಗೆ ಬಂದ ಮೇಲೆ ಈಗ ರೈತರು ಬುದ್ಧಿವಂತರಾಗುತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ರೈತರನ್ನು ಯಾಮಾರಿಸುವ ದಿನಗಳು ಕಣ್ಮರೆಯಾಗಲಿವೆ. ವೇದಿಕೆಗಳು ಸಮಾಜದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ತಿಳಿಸಿದರು.


    ಜಮೀನಿನ ಸಮಸ್ಯೆ, ಅಕ್ರಮ ಒತ್ತುವರಿ, ಅಕ್ರಮ ಕಾಮಗಾರಿ ಸೇರಿದಂತೆ ವೇದಿಕೆಯಲ್ಲಿಯೇ ಅಧಿಕಾರಿಗಳಿಗೆ 52 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ತಾಪಂ ಇಒ ಡಿ.ಬಿ.ಸುನೀಲ್‌ಕುಮಾರ್, ವೇದಿಕೆಯ ರಾಜ್ಯ ಉಪಾಧ್ಯಕ್ಷ ಎಂ.ಶಶಿಧರ್, ತಾಲೂಕು ಘಟಕದ ಉಪಾಧ್ಯಕ್ಷ ಮಂಜುಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಾಂತರಾಜ್, ಕಾರ್ಯಕಾರಣಿ ಸದಸ್ಯ ಕೆ.ಪಟೇಲ್ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಆರ್.ಕೆ.ಕುಮಾರ್, ಸದಸ್ಯ ರಂಜಿತ್ ಪಟೇಲ್ ಹಾಗೂ ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts