More

    ಪ್ರತಿಭಟನೆಗೆ ಸ್ಥಳಗಳ ಹುಡುಕಾಟ!

    ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.19ರಿಂದ ಆರಂಭವಾಗಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನ ವೇಳೆ ವಿವಿಧ ಬೇಡಿಕೆಗಳನ್ನು ಹೊತ್ತು ಬರುವ ಪ್ರತಿಭಟನಾಕಾರರಿಗೆ ಸ್ಥಳ ಗುರುತಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

    ಹೌದು, ಪ್ರತಿ ಬಾರಿ ಅಧಿವೇಶನದಲ್ಲಿ ರಾಜ್ಯದ ವಿವಿಧೆಡೆಯಿಂದ ಪ್ರತಿಭಟನಾಕಾರರ ದಂಡೇ ಬೆಳಗಾವಿಯತ್ತ ಹರಿದು ಬರುತ್ತದೆ. ಈ ಬಾರಿಯೂ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದ್ದು, ಸರ್ಕಾರದ ಚಳಿ ಬಿಡಿಸಲು ಯೋಚಿಸಿವೆ. ಆದರೆ, ಸುವರ್ಣ ವಿಧಾನಸೌಧದ ಸುತ್ತಮುತ್ತಲಿನ ಜಮೀನುಗಳಲ್ಲಿ ಕೃಷಿ ಬೆಳೆಗಳಿರುವುದು, ಕೆಲವು ಕಟ್ಟಡಗಳು ನಿರ್ಮಾಣವಾಗುತ್ತಿವೆ. ಜತೆಗೆ ಹಲಗಾ ಗ್ರಾಮ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಪರ್ಯಾಯ ಸ್ಥಳವನ್ನು ಜಿಲ್ಲಾಡಳಿತ ಹುಡುಕುತ್ತಿದೆ.

    ಪ್ರತಿ ವರ್ಷ ಸುವರ್ಣ ವಿಧಾನಸೌಧದ ಬಳಿಯ ಹಲಗಾ ಗ್ರಾಮದಲ್ಲಿ ಸುವರ್ಣ ಗಾರ್ಡ್‌ನ ಬಳಿ ಪ್ರತಿಭಟನಾ ಪೆಂಡಾಲ್‌ಗಳನ್ನು ನಿರ್ಮಿಸಿ ಪ್ರತಿಭಟನಾಕರರಿಗೆ ಅನುಕೂಲ ಕಲ್ಪಿಸಿಕೊಡಲಾಗುತಿತ್ತು. ಆದರೆ, ಈ ಬಾರಿ ಆ ಸ್ಥಳಗಳಲ್ಲಿ ಪ್ರತಿಭಟನಾ ಟೆಂಟ್‌ಗಳ ನಿರ್ಮಾಣಕ್ಕೆ ಸ್ಥಳದ ಅಭಾವ ಹಾಗೂ ಆ ಪ್ರದೇಶದ ಸುತ್ತಮುತ್ತಲಿನ ರೈತರು ಪ್ರತಿಭಟನೆ ಟೆಂಟ್ ಹಾಕಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಪ್ರತಿಭಟನೆಗೆ ಏಕಕಾಲಕ್ಕೆ ಸಾವಿರಾರು ಜನರು ಆಗುಮಿಸುತ್ತಿರುವುದರಿಂದ ಪ್ರತಿಭಟನಾಕಾರರಿಗೆ ಕುಡಿಯುವ ನೀರು, ಮೊಬೈಲ್ ಶೌಚಗೃಹ ಹಾಗೂ ವಾಹನಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಹಾಗಾಗಿ ಸಚಿವರಿಗೆ, ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಹೋಗಿ ಬರಲು ಅನುಕೂಲವಾಗುವ ನಿಟ್ಟಿನಲ್ಲಿ ಸುವರ್ಣ
    ವಿಧಾನಸೌಧದ ಸುತ್ತಮುತ್ತ ಪ್ರತಿಭಟನೆಗೆ ಟೆಂಟ್ ನಿರ್ಮಿಸಲು ಸುಮಾರು 40 ಎಕರೆ ವಿಸ್ತೀರ್ಣದ ಖಾಲಿ ಪ್ರದೇಶಗಳನ್ನು ಹುಡುಕಾಟ ನಡೆಸಲಾಗುತ್ತಿದೆ.

    ಒಂದು ವೇಳೆ ಪರ್ಯಾಯ ಸ್ಥಳ ಸಿಗದಿದ್ದ ಸಂದರ್ಭದಲ್ಲಿ ಕೊಂಡಸಕೊಪ್ಪ ಗ್ರಾಮದ ಗುಡ್ಡ ಅಥವಾ ಹಲಗಾ ಗ್ರಾಮದ ಗುಡ್ಡದ ಪ್ರದೇಶದಲ್ಲಿ ಪ್ರತಿಭಟನೆಗೆ ಟೆಂಟ್ ಹಾಕಲು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಅಧಿವೇಶನಕ್ಕೆ ಸಮಾವೇಶಗಳ ಜಾತ್ರೆ

    ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ವಿಧಾನಸಭೆ ಚುನಾವಣೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ ಜತೆಗೆ ಮೀಸಲಾತಿ ಕುರಿತು ಪಂಚಮಸಾಲಿ, ಕುರುಬ, ಉಪ್ಪಾರ ಸೇರಿ ವಿವಿಧ ಸಮಾಜಗಳ ಬೃಹತ್ ಸಮಾವೇಶ ನಡೆಯಲಿವೆ. ಅಲ್ಲದೆ, ಕಬ್ಬು ಬೆಳೆಗಾರರು, ರೈತ ಸಂಘಟನೆಗಳ ಪ್ರತಿಭಟನೆಗಳು ಬೃಹತ್ ಪ್ರಮಾಣದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.19ರಿಂದ ಜರುಗಲಿರುವ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಬರುವ ಪ್ರತಿಭಟನಾಕಾರರು ಆಗಮಿಸುತ್ತಾರೆ. ಅವರಿಗೆಲ್ಲ ಪ್ರತಿಭಟನೆ ನಡೆಸಲು ಟೆಂಟ್ ಹಾಕಿ ವ್ಯವಸ್ಥೆ ಮಾಡಲು ಸೂಕ್ತ ಸ್ಥಳಗಳ ಹುಡುಕಾಟ ನಡೆಸಲಾಗುತ್ತಿದೆ.
    | ನಿತೇಶ ಪಾಟೀಲ, ಜಿಲ್ಲಾಧಿಕಾರಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts