More

    ಪ್ರಕೃತಿ ವಿರುದ್ಧದ ಮಾನವನ ನಡೆ ಆತಂಕಕಾರಿ-ಸ್ವಾಮಿ ತ್ಯಾಗೀಶ್ವರಾನಂದಜಿ

    ದಾವಣಗೆರೆ: ಅಭಿವೃದ್ಧಿಯ ಭರದಲ್ಲಿ ಹಾಗೂ ಸುಖಭೋಗ ಮತ್ತು ಅನುಕೂಲಗಳ ಲಾಲಸೆಯಲ್ಲಿ ಮಾನವರು ಪ್ರಕೃತಿಯ ವಿರುದ್ಧ ಹೋಗುತ್ತಿರುವುದು ಆತಂಕಕಾರಿ ಎಂದು ರಾಮಕೃಷ್ಣಾಶ್ರಮದ ಸ್ವಾಮಿ ತ್ಯಾಗೀಶ್ವರಾನಂದಜಿ ಹೇಳಿದರು.
    ನಗರದ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನ ವಾಣಿಜ್ಯ ವಿಭಾಗದಿಂದ ಶುಕ್ರವಾರ ಏರ್ಪಾಡಾಗಿದ್ದ ಯುವಜನೋತ್ಸವ ‘ಪ್ರದ್ಯುತ್ 2023’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ಮೃಗೀಯ ಗುಣದಿಂದ ಮನುಷ್ಯತ್ವದತ್ತ, ಮನುಷ್ಯತ್ವದಿಂದ ದೈವತ್ವದ ಕಡೆಗೂ ಹೋಗುವುದೇ ನಿಜವಾದ ಅಭಿವೃದ್ಧಿ. ಇದರ ಮಾರ್ಗವನ್ನು ನಮ್ಮ ಸನಾತನ ಭಾರತೀಯ ಸಂಸ್ಕೃತಿಯು ಹೇಳಿದೆ. ಮತ್ತಷ್ಟು ಮನದಟ್ಟಾಗುವಂತೆ ಅನುಷ್ಠಾನ ಯೋಗ್ಯವಾಗಿ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು ಮುಂತಾದವರು ಹೇಳಿದ್ದಾರೆ ಎಂದರು.
    ದೇವರು ಹೊರಗೆಲ್ಲೋ ಇಲ್ಲ, ನಮ್ಮ-ನಿಮ್ಮೊಳಗೇ ಇದ್ದಾನೆಂದು ಹೇಳಿದ್ದು ಭಾರತದ ಅಧ್ಯಾತ್ಮ. ತನಗಾಗಿ ಬದುಕುವವರು ಇದ್ದರೂ ಸತ್ತಂತೆ, ಇತರರಿಗಾಗಿ ಬದುಕುವವರು ಮಾತ್ರ ಸಾರ್ಥಕತೆ ಪಡೆಯಲಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಲ್ಲಿ ಹೃದಯವಂತಿಕೆ ಬೇಕೇ ಹೊರತು ಜಾತಿ-ಮತ ಅಡ್ಡ ಬರಬಾರದು ಎಂದರು.
    ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ 125 ವರ್ಷದ ಹಿಂದೆ ಮಾಡಿದ ಭಾಷಣ ಇಂದಿಗೂ ವಿಶ್ವಮಾನ್ಯವಾಗಿದೆ. ಮಾದಕ ದ್ರವ್ಯ ನೀಡಿ ಯುವಕರ ಧೀಶಕ್ತಿ ದುರ್ಬಲಗೊಳಿಸುವ ಮಾಫಿಯಾ ವಿದೇಶಗಳಿಂದ ನಡೆಯುತ್ತಿದ್ದು, ಯುವಜನರು ಎಚ್ಚರಿಕೆ ವಹಿಸಬೇಕು ಮೊಬೈಲ್ ಗೀಳಿನಿಂದ ಹೊರಬಂದು ನಿಜ ಜಗತ್ತಿನ ಅರಿವು ಪಡೆಯಬೇಕು ಎಂದು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೆಫ್ಟಿನೆಂಟ್ ಕರ್ನಲ್ ಶಿವಾನಂದ ಸುತಗಟ್ಟಿ, ನಮ್ಮ ಸಾಮರ್ಥ್ಯದ ಅರಿವಾದಲ್ಲಿ ರಾಷ್ಟ್ರವನ್ನು ಕಟ್ಟಬಹುದು, ವಿಶ್ವವನ್ನೇ ಬದಲಿಸಬಹುದು. ಇದು ಸಾಮಾನ್ಯನಿಂದಲೂ ಸಾಧ್ಯವಿದೆ. ಇದಕ್ಕಾಗಿ ಸರಿಯಾದ ದಿಕ್ಕಿನಲ್ಲಿ ಆಲೋಚಿಸುವುದು ಅವಶ್ಯ ಎಂದರು.
    ಮಾದಕ ದ್ರವ್ಯ ಸೇವನೆಗೆ ನಿರ್ಬಂಧ ಇರುವಂತೆ ಮೊಬೈಲ್ನ ಅತಿ ಬಳಕೆಗೂ ನಿರ್ಬಂಧ ಹೇರಬೇಕಾದ ಸ್ಥಿತಿ ಬಂದೀತು ಎಂದು ಎಚ್ಚರಿಸಿದರು.
    ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ, ಪ್ರಾಂಶುಪಾಲ ಡಾ.ಬಿ. ವೀರಪ್ಪ , ಬಿಕಾಂ ವಿದ್ಯಾರ್ಥಿ ಎಂ.ಕೆ.ಆದಿತ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ‘ಮಾರ್ಕೆಟಿಂಗ್ ಸ್ಟೋರೀಸ್’ ಪುಸ್ತಕ ಬಿಡುಗಡೆ ಮಾಡಲಾಯಿತು. ಗೌರಿಶಂಕರ್, ಕಿರಣ್, ಸ್ವಾತಿ, ಸಂಜನಾ ಇದ್ದರು. ಸಂಜನಾ ಪ್ರಾರ್ಥನೆ ಹಾಡಿದರು, ಮಾಧವಿ-ನಿತ್ಯಶ್ರೀ ಸ್ವಾಗತಿಸಿದರು. ಅರ್ಚನಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts