More

    ಪೌರ ಕಾರ್ವಿುಕರಿಗಿಲ್ಲ ವಿಶೇಷ ದಿನ!

    ಹುಬ್ಬಳ್ಳಿ: ಸಂಭ್ರಮವಿಲ್ಲದ ಕಾರ್ವಿುಕ ದಿನ ಹಾಗೂ ತೀವ್ರಗೊಂಡಿರುವ ಕರೊನಾ 2ನೇ ಅಲೆಯ ನಡುವೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ವಿುಕರು ಶನಿವಾರ ಎಂದಿನಂತೆ ಕೆಲಸ ನಿರ್ವಹಿಸಿದರು.

    ಬೆಳಗಿನ ಜಾವ 6 ಗಂಟೆಯಿಂದ ಆಟೋ ಟಿಪ್ಪರ್ ಮೂಲಕ ಮನೆ ಮನೆಯಿಂದ ಕಸ ಸಂಗ್ರಹಿಸಿದರು. ರಸ್ತೆ ಗುಡಿಸಿದರು. ಮಾರುಕಟ್ಟೆ ಪ್ರದೇಶದಲ್ಲಿನ ಕಸ ಎತ್ತಿದರು. ಗಟಾರ ಸ್ವಚ್ಛಗೊಳಿಸಿದರು. ಒಳಚರಂಡಿ ದುರಸ್ತಿ ಕೆಲಸವನ್ನು ಕೈಗೊಂಡರು. ಮೇ 1 ಕಾರ್ವಿುಕ ದಿನ ಎಂಬುದು ಅವರಿಗೆ ವಿಶೇಷ ಎನಿಸಲೇ ಇಲ್ಲ. ನಗರ ನೈರ್ಮಲ್ಯ ಕಾಪಾಡುವಲ್ಲಿ ಪೌರ ಕಾರ್ವಿುಕರ ಕಾಯಕ ಮಹತ್ವದ್ದು. ಅವರ ಸೇವೆ ಅನಿವಾರ್ಯವೂ ಹೌದು. ಕರೊನಾಗೆ ಭಯ ಪಟ್ಟು ಮನೆಯಲ್ಲಿ ಕುಳಿತುಕೊಳ್ಳುವ ಹಾಗಿಲ್ಲ.

    ಧಾರವಾಡ ಜಿಲ್ಲೆಯಲ್ಲೂ ಕರೊನಾ 2ನೇ ಅಲೆ ತೀವ್ರಗೊಂಡಿದೆ. ಹಾಗಾಗಿ, ಅವಳಿ ನಗರದಲ್ಲಿ ಕಾರ್ವಿುಕ ದಿನದಂದು ಯಾವುದೇ ಆಚರಣೆಯ ಸಂಭ್ರಮ ಕಂಡುಬರಲಿಲ್ಲ. ಕೆಲವೆಡೆ ಸಾಂಕೇತಿಕವಾಗಿ ಆಚರಣೆ ಮಾಡಲಾಯಿತು. ಕರೊನಾ ಸೋಂಕಿನ ತೀವ್ರತೆಯ ನಡುವೆಯೂ ಪೌರ ಕಾರ್ವಿುಕರು ಅತ್ಯಂತ ಜಾಗರೂಕತೆಯಿಂದ ಸ್ವಚ್ಛತೆ ಕೆಲಸ ನಿರ್ವಹಿಸಬೇಕು. ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು-ವೈದ್ಯಕೀಯ ಸಿಬ್ಬಂದಿಯಷ್ಟೇ ಪೌರ ಕಾರ್ವಿುಕರು ಅಪಾಯಕಾರಿ ವಲಯದಲ್ಲಿ ಬರುತ್ತಾರೆ. ವೈದ್ಯರು-ವೈದ್ಯಕೀಯ ಸಿಬ್ಬಂದಿ ಹೆಚ್ಚು ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತಾರೆ ಎನ್ನಬಹುದು. ಆದರೆ, ಪೌರ ಕಾರ್ವಿುಕರಿಗೆ ಅಂತಹ ಅವಕಾಶಗಳು ಸೀಮಿತವಾಗಿರುತ್ತವೆ.

    ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಕಾಯಂ, ಗುತ್ತಿಗೆ ಸೇರಿ ಸುಮಾರು 2500 ಪೌರ ಕಾರ್ವಿುಕರಿದ್ದಾರೆ. ಒಂದೇ ಮನೆಯ 3-4 ತಲೆಮಾರಿನವರು ಕೆಲಸವನ್ನು ಮುಂದುವರಿಸಿಕೊಂಡು ಬಂದಿರುವ ಸಾಕಷ್ಟು ಉದಾಹರಣೆಗಳಿವೆ. ಕಳೆದ 3 ತಿಂಗಳಿಂದ 1001 ಗುತ್ತಿಗೆ ಪೌರ ಕಾರ್ವಿುಕರು ನೇರ ಪಾವತಿಯಡಿ ಬಂದಿರುವುದರಿಂದ ಪ್ರತಿ ತಿಂಗಳು ನಿಯಮಿತವಾಗಿ ಸಂಬಳ ಸಿಗುತ್ತಿದೆ. ಮೊದಲೆಲ್ಲ 3-4 ತಿಂಗಳು ವಿಳಂಬವಾಗುತ್ತಿತ್ತು. ಹೀಗಾಗಿ, ಸವಲತ್ತು, ಸೌಲಭ್ಯ, ಸಂಬಳಕ್ಕಾಗಿ ಗುತ್ತಿಗೆ ಪೌರ ಕಾರ್ವಿುಕರು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ.

    ಕಳೆದ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಕರೊನಾ ಮೊದಲ ಅಲೆ ಕಾಣಿಸಿಕೊಂಡಾಗ ಹು-ಧಾ ಮಹಾನಗರ ಪಾಲಿಕೆಯು ಪೌರ ಕಾರ್ವಿುಕರಿಗೆ ಮಾಸ್ಕ್, ಸ್ಯಾನಿಟೈಸರ್, ಸೋಪ್, ಹ್ಯಾಂಡ್ ಗ್ಲೋವ್ಸ್ (ಕೈಗವಸು), ಆಹಾರ ಸಾಮಗ್ರಿಗಳ ಪ್ಯಾಕೇಟ್ ವಿತರಣೆ ಮಾಡಿತ್ತು. ಈ ಬಾರಿ ಇದುವರೆಗೂ ಇವುಗಳನ್ನು ನೀಡಿಲ್ಲ. ‘ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೋವ್ಸ್ ಪೂರೈಕೆಗೆ ಟೆಂಡರ್ ಕರೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕರೊನಾದಿಂದ ಬದುಕು ಕಷ್ಟವಾಗಿದೆ. ಆದರೂ ದೈನಂದಿನ ಕೆಲಸ ಮಾಡಿಕೊಂಡು ಹೋದರೆ ಸಂಬಳ ಸಿಗುತ್ತದೆ. ಹಾಗಾಗಿ ಕೆಲಸ ಮಾಡಲೇಬೇಕು. ಮನೆಯಲ್ಲಿ ಕುಳಿತುಕೊಳ್ಳಲು ಬರುವುದಿಲ್ಲ. ನಮಗೆ ಕಾರ್ವಿುಕ ದಿನಾಚರಣೆ ಎಂಬುದರಲ್ಲಿ ವಿಶೇಷ ಏನಿಲ್ಲ. ಇದು ಪ್ರತಿ ವರ್ಷ ಬಂದು ಹೋಗುತ್ತದೆ. ದುಡಿಮೆಗೆ ತಕ್ಕಂತೆ ಸಂಬಳ ಸಿಗಬೇಕು.

    | ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ

    ಗುತ್ತಿಗೆ ಪೌರ ಕಾರ್ವಿುಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts