More

    ಪೌರಾಯುಕ್ತರ ಮೇಲೆ ಹಲ್ಲೆ ಪ್ರಕರಣ: ಪೌರಸೇವಾ ನೌಕರರ ಅನಿರ್ಧಿಷ್ಟಾವಾಧಿ ಧರಣಿ ತಾತ್ಕಾಲಿಕವಾಗಿ ವಾಪಸ್

    ಸಾಗರ: ನಗರದ ಕೆನರಾ ಬ್ಯಾಂಕ್ ಎದುರಿನ ಹಣ್ಣಿನ ಅಂಗಡಿ ತೆರವು ವಿಚಾರದಲ್ಲಿ ಪೌರಾಯುಕ್ತರ ಮೇಲೆ ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹಪಡಿಸಿ ಪೌರಸೇವಾ ನೌಕರರ ಸಂಘ ಆರಂಭಿಸಿದ್ದ ಅನಿರ್ದಿಷ್ಟಾವಧಿ ಧರಣಿ ಹಿಂತೆಗೆದುಕೊಂಡಿದೆ. ಆದರೆ ಹಲ್ಲೆಕೋರರನ್ನು ಬಂಧಿಸುವವರೆಗೆ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಚತಾ ಕಾರ್ಯ ಸ್ಥಗಿತಗೊಳಿಸಲು ನಿರ್ಧರಿಸಿದ್ದು ಆರೋಪಿಗಳ ಬಂಧನಕ್ಕೆ ಶುಕ್ರವಾರದವರೆಗೆ ಗಡುವು ನೀಡಿದೆ.
    ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಮಾಡುವುದಿಲ್ಲ. ಆದರೆ ಸ್ವಚ್ಛತೆ, ನೀರು ಪೂರೈಕೆ ಸೇರಿದಂತೆ ಇತರ ಚಟುವಟಿಕೆಗಳು ಇರುವುದಿಲ್ಲ ಎಂದು ಸಂಘ ಸ್ಪಷ್ಟಪಡಿಸಿದ್ದು, ಶುಕ್ರವಾರದೊಳಗೆ ಹಲ್ಲೆಕೋರರನ್ನು ಬಂಧಿಸದಿದ್ದರೆ ಮತ್ತೆ ಪ್ರತಿಭಟನೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಶುಕ್ರವಾರದೊಳಗೆ ಹಲ್ಲೆ ನಡೆಸಿದವರನ್ನು ಬಂಧಿಸದಿದ್ದರೆ ಹೋರಾಟವನ್ನು ಜಿಲ್ಲಾ ಕೇಂದ್ರ ಮತ್ತು ರಾಜ್ಯಮಟ್ಟಕ್ಕೂ ವಿಸ್ತರಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
    ಗುರುವಾರ ನಡೆದ ಪೌರಸೇವಾ ನೌಕರರ ಸಂಘದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಾಗರಾಜ ಮೇಸ್ತ್ರಿ, ಪೌರಸೇವಾ ನೌಕರರ ಸಂಘದ ಗೌರವಾಧ್ಯಕ್ಷರಾಗಿರುವ ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರ ಮೇಲೆ ನಗರಸಭೆ ಸದಸ್ಯ ತಸ್ರೀಫ್ ಇಬ್ರಾಹಿಂ ಸೇರಿದಂತೆ ಇತರರು ಹಲ್ಲೆಗೆ ಯತ್ನಿಸಿದ ಘಟನೆಯನ್ನು ಸಂಘ ಖಂಡಿಸುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಕಚೇರಿ ಕೆಲಸಗಳಿಗೆ ಅಡ್ಡಿ ಮಾಡದಿರಲು ನಿರ್ಧರಿಸಲಾಗಿದೆ. ಆದರೆ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಸರಬರಾಜು ಮಾಡದೆ ಪ್ರತಿಭಟನೆ ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.
    ಹಣ್ಣಿನ ಅಂಗಡಿ ತೆರವು ಮಾಡುವ ಪೂರ್ವದಲ್ಲಿ ಅಂಗಡಿ ಮಾಲೀಕರಿಗೆ ತಿಳಿಸಲಾಗಿತ್ತು. ಅಂಗಡಿ ತೆರವು ಕಾರ್ಯಾಚರಣೆಗೆ ಮುನ್ನ ನೀವೇ ಅಂಗಡಿ ತೆರವು ಮಾಡಿ ಎಂದು ಹೇಳಿದ್ದರೂ ಹಣ್ಣಿನ ಅಂಗಡಿ ಮಾಲೀಕರು ಉದ್ದಟತನ ಪ್ರದರ್ಶನ ಮಾಡಿದ್ದಾರೆ. ಅಂಗಡಿ ತೆರವು ಸಂದರ್ಭದಲ್ಲಿ ನಾವು ಹಣ್ಣುಗಳನ್ನು ಬೀದಿಗೆ ಎಸೆಯಲಿಲ್ಲ, ಹಣವನ್ನೂ ಮುಟ್ಟಿಲ್ಲ. ಪೌರ ಕಾರ್ಮಿಕರ ಮೇಲೆ ಆರೋಪ ಹೊರಿಸಲು ಪೂರ್ವ ನಿಯೋಜಿತವಾಗಿ ಈ ತಂತ್ರ ಬಳಸಿದ್ದಾರೆ ಎಂದು ದೂರಿದರು.
    ಸಂಘದ ಜಿಲ್ಲಾ ನಿರ್ದೇಶಕ ಮದನ್ ಮಾತನಾಡಿ, ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರ ಮೇಲಿನ ಹಲ್ಲೆ ಯತ್ನ ಖಂಡಿಸಿ ಮೌನ ಪ್ರತಿಭಟನೆ ನಡೆಸಿದ್ದೇವೆ. ಪೌರಾಯುಕ್ತರಿಗೆ ರಕ್ಷಣೆ ಇಲ್ಲ ಎಂದ ಮೇಲೆ ಪೌರ ಕಾರ್ಮಿಕರ ಗತಿಯೇನು ಎನ್ನುವುದು ಗಂಭೀರವಾದ ಪ್ರಶ್ನೆ. ಹಲ್ಲೆ ಯತ್ನ ನಡೆಸಿದವರನ್ನು ಬಂಧಿಸುವ ತನಕ ಸ್ವಚ್ಚತೆ ಮತ್ತು ಕುಡಿಯುವ ನೀರು ಪೂರೈಕೆ ಮಾಡದೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
    ಐವರ ವಿರುದ್ಧ ದೂರು ದಾಖಲು: ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರ ಮೇಲಿನ ಹಲ್ಲೆ ಯತ್ನಕ್ಕೆ ಸಂಬಂಧಪಟ್ಟಂತೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎ.ನಾಗರಾಜ್ ದೂರು ಆಧರಿಸಿ ನಗರಠಾಣೆ ಪೊಲೀಸರು ಐವರ ವಿರುದ್ದ ಪ್ರಕರಣ ದಾಖಲು ಮಾಡಿದ್ದಾರೆ. ನಗರಸಭಾ ಸದಸ್ಯ ತಸ್ರೀಫ್ ಇಬ್ರಾಹಿಂ, ಮಹ್ಮದ್ ಜಿಲಾನಿ, ಶಹಬಾದ್ ಅಹ್ಮದ್ ಅಡೂರು, ವಾಸಿಮ್, ರಶೀದ್ ಮತ್ತು 50ಕ್ಕೂ ಹೆಚ್ಚಿನ ಜನರ ವಿರುದ್ದ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts