More

    ಪೋಷಣ್​ ಮಾಸಾಚರಣೆಯಲ್ಲೇ ಹಿನ್ನಡೆ!

    ಬೆಳಗಾವಿ: “ಮಕ್ಕಳ ಪೋಷಣೆ & ಕಲಿಕೆಗೆ ಆಕರ್ಷಣೆ, ಮೊದಲು ಊಟ&ಓದಲು ಪಾಠ’ ಎನ್ನುತ್ತ ಜಾಗೃತಿ ಮೂಡಿಸಬೇಕಿದ್ದ ಅಧಿಕಾರಿ ವರ್ಗ ಶಾಲೆಗಳಿಗೆ ಭೇಟಿ ನೀಡುತ್ತಿಲ್ಲ. ಬೆಳಗಾವಿ ಜಿಲ್ಲಾ ಪಂಚಾಯಿತಿ, ಬಿಸಿಯೂಟ ಅಕ್ಷರ ದಾಸೋಹ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರಾಷ್ಟ್ರೀಯ ಪೋಷಣ್​ ಮಾಸಾಚರಣೆ ಅವಧಿಯಲ್ಲೇ ಪೌಷ್ಟಿಕಾಂಶ ಆಹಾರ ಪದಾರ್ಥಗಳ ಸೇವನೆಯಿಂದ ಶಾಲಾ ಮಕ್ಕಳು ವಿಮುಖರಾತ್ತಿರುವ ವ್ಯತಿರಿಕ್ತ ಬೆಳವಣೆಗೆ ಆತಂಕ ಮೂಡಿಸಿದೆ.

    ಜಿಲ್ಲೆಯ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳ ವಿತರಣೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ರ್ನಿಲಕ್ಷ ಎದ್ದು ಕಾಣುತ್ತಿದೆ. ಸರ್ಕಾರ ಕೋಟ್ಯಂತರ ರೂ.ಅನುದಾನ ನೀಡಿದರೂ ನಿಗದಿತ ಅವಧಿಯಲ್ಲಿ ಮಕ್ಕಳಿಗೆ ಸಮತೋಲಿತ ಆಹಾರ ಪೋಷಕಾಂಶಗಳ ಮಹತ್ವದ ಬಗ್ಗೆ ಅರಿವು ಮೂಡಿ ಸುವಂತೆ ಆದೇಶಿಸಿದರೂ, ಶಾಲೆಗಳಿಗೆ ಕನಿಷ್ಠ ಭೇಟಿಯೂ ನೀಡದೆ ಎಸಿ ಕೊಠಡಿಗಳಲ್ಲಿ ಬೀಡು ಬಟ್ಟಿರುವ ಪರಿಣಾಮ ಕಳೆದ ಎರಡು ತಿಂಗಳಲ್ಲಿ ಆಗಿರುವ ಪೌಷ್ಟಿಕ ಆಹಾರ ವಿತರಣೆಯ ಪ್ರಮಾಣಕ್ಕಿಂತ ಸೆಪ್ಟೆಂಬರ್​ನಲ್ಲಿ ಅತ್ಯಂತ ಕಡಿಮೆ ಆಗಿದೆ.

    ಬೆಳಗಾವಿ ಜಿಲ್ಲಾ ಪಂಚಾಯತ್​ ಪ್ರಧಾನ ಮಂತ್ರಿ ಪೋಷಣ್​ ಶಕ್ತಿ ನಿರ್ಮಾಣ ಟಕದ ಅಂಕಿ ಅಂಶಗಳ ಪ್ರಕಾರ, ಮೊಟ್ಟೆ ತ್ಯಜಿಸಲು ಮುಖ್ಯ ಕಾರಣವಾಗಿದ್ದ ಶ್ರಾವಣ ಮಾಸಕ್ಕಿಂತಲೂ ಸೆಪ್ಟಂಬರ್​ನಲ್ಲಿಯೇ ಕನಿಷ್ಠ ಪ್ರಮಾಣದಲ್ಲಿ ಇದಾಗಿದೆ. ಜುಲೈ 27ರಂದು ಶೇ.82.42 ರಷ್ಟು ವಿದ್ಯಾರ್ಥಿಗಳು ಪೂರಕ ಪೌಷ್ಟಿಕ ಆಹಾರ ಪದಾರ್ಥ ಪಡೆದಿದ್ದರು. ಆಗಸ್ಟ್​ ತಿಂಗಳಿನ ಶ್ರಾವಣದ ಅವಧಿಯಲ್ಲಿ 1.5 ಲಕ್ಷ ವಿದ್ಯಾರ್ಥಿಗಳು ಮೊಟ್ಟೆ ನಿರಾಕರಿಸಿದ್ದರೂ ಬಾಳೆಹಣ್ಣು, ಶೇಂಗಾ ಚಿಕ್ಕಿ ಸೇರಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ಶೇ.83.37ರಷ್ಟು ವಿದ್ಯಾರ್ಥಿಗಳು ಸೇವಿಸಿದ್ದರು. ಆದರೆ, ಶ್ರಾವಣ ಬಳಿಕ ಸೆಪ್ಟೆಂಬರ್​ನ ಮೊದಲೆರಡು ವಾರದಲ್ಲಿ ಕೇವಲ 82.42 ಪ್ರತಿಶತ ವಿತರಣೆಯಾಗಿದ್ದು, ಸರ್ಕಾರಿ ಶಾಲೆಗಳ ಬರೋಬ್ಬರಿ 89,338 ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಸೇವನೆಯಿಂದ ವಂಚಿತರಾಗಿದ್ದಾರೆ.

    ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ಸೇರಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವುದು ಮಕ್ಕಳು ಹಾಗೂ ಪಾಲಕರ ನಿರ್ಧಾರ. ಆದರೆ, ಮೂರರಲ್ಲಿ ಯಾವುದೂ ಬೇಡ ಎನ್ನುವ ಸ್ಥಿತಿ ನಿರ್ಮಾಣವಾಗಿರುವುದು ಜಾಗೃತಿ ಕೊರತೆಯಲ್ಲದೆ, ಬೇರೇನೂ ಅಲ್ಲ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಪೂರಕ ಪೌಷ್ಟಿಕಾಂಶ ಆಹಾರ ಸೇವನೆಯ ಅಗತ್ಯತೆ ಹಾಗೂ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಶಾಲಾ ಮಕ್ಕಳಲ್ಲಿ, ಪಾಲಕರಲ್ಲಿ ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಮಹತ್ವದ ಯೋಜನೆ ಸಾಕಾರಗೊಳಿಸಬೇಕಿದೆ.

    ಪಾಲಕರ ಆಕ್ರೋಶ:ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಯಾರೊಬ್ಬರೂ ಮಕ್ಕಳು ಪೂರಕ ಪೌಷ್ಟಿಕ ಆಹಾರ ಸೇವಿಸುವ ಅಗತ್ಯತೆ ಬಗ್ಗೆ ಎಲ್ಲಿಯೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿಲ್ಲ. ಒಂದೊಮ್ಮೆ ಶಾಲೆಗೆ ಬಂದಿದ್ದರೂ, ಬಿಸಿಯೂಟ ಪೂರೈಕೆ ಮಾಡುತ್ತಿರುವ ಎನ್​ಜಿಒಗಳ ಸಿಬ್ಬಂದಿ ಜತೆಗೆ ಕುಶಲೋಪರಿ ವಿಚಾರಣೆ ಮಾಡಿ, ಕಾಲ್ಕೀಳುತ್ತಾರೆ ಎಂದು ಅಧಿಕಾರಿ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಕೇಳಿಬರುತ್ತಿದೆ.

    | ಶಿವಾನಂದ ಕಲ್ಲೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts