More

    ಪೊಲೀಸ್ ಪೇದೆ ಮೇಲೆ ಹಲ್ಲೆ : ಗಾಂಜಾ ನಶೆಯಲ್ಲಿದ್ದ ಗುಂಪು

    ವಿಜಯವಾಣಿ ಸುದ್ದಿಜಾಲ ಆನೇಕಲ್
    ಮದ್ಯ, ಗಾಂಜಾ ನಶೆಯಲ್ಲಿ ಅಮಾಯಕರನ್ನು ಸುಲಿಗೆ ಮಾಡುತ್ತಿದ್ದ ಖದೀಮರು ಈಗ ಪೊಲೀಸರ ಮೇಲೆಯೇ ಹಲ್ಲೆ ಮಾಡುವ ಮೂಲಕ ನಾಗರಿಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದ್ದಾರೆ.
    ಪಟ್ಟಣದ ದೇವರ ಕೊಂಡಪ್ಪ ವೃತ್ತದಲ್ಲಿ ಗುರುವಾರ ಸಂಜೆ ಗಾಂಜಾ ಸೇವಿಸಿ ತೂರಾಡುತ್ತಿದ್ದ ಯುವಕರ ತಂಡವನ್ನು ಆನೇಕಲ್ ಠಾಣೆ ಪೇದೆ ರಂಗನಾಥ್ ಪ್ರಶ್ನಿಸಿದ್ದಾರೆ. ಈ ವೇಳೆ ಯುವಕರ ಗುಂಪು ಪೇದೆಯನ್ನು ಅವಾಚ್ಯವಾಗಿ ನಿಂದಿಸುವ ಜತೆಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದೆ.


    ದಿನ್ನೂರು ರಸ್ತೆಯ ನೀಲಗಿರಿ ತೋಪಿನತ್ತ ತೆರಳಿದವರನ್ನು ಹಿಡಿಯಲು ರಂಗನಾಥ್ ಸಹ ನೀಲಗಿರಿ ತೋಪಿಗೆ ನುಗ್ಗಿದ್ದಾರೆ. ಈ ವೇಳೆ ಯುವಕರ ಗುಂಪಿನಲ್ಲಿದ್ದ ರೌಡಿ ವರುಣ್ ಹಾಗೂ ಡ್ಯಾನಿ, ರಂಗನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಮರ್ಮಾಂಗ ಹಾಗೂ ದೇಹದ ಹಲವು ಕಡೆ ಕಚ್ಚಿ ಗಾಯಗೊಳಿಸಿದ್ದು, ಬಳಿಕ ಎರಡು ಬೈಕಿನಲ್ಲಿ ನಾಲ್ವರ ತಂಡ ಪರಾರಿಯಾಗಿದೆ.
    ತೀವ್ರವಾಗಿ ಗಾಯಗೊಂಡಿದ್ದ ರಂಗನಾಥ್, ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ರಂಗನಾಥ್ ಅವರನ್ನು ರಕ್ಷಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಶುಕ್ರವಾರ ನಾರಾಯಣ ಹೆಲ್ತ್‌ಸಿಟಿಗೆ ದಾಖಲು ಮಾಡಲಾಗಿದೆ. ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಬಂಧನ: ಪಟ್ಟಣ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಡ್ಯಾನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಆತ ಗಾಂಜಾ ಮತ್ತಿನಲ್ಲಿದ್ದು, ವಿಚಾರಣೆಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.

    ಆರೋಗ್ಯ ವಿಚಾರಣೆ: ಬೆಂಗಳೂರು ಗ್ರಾಮಾಂ.ತರ ಅಡಿಷನಲ್ ಎಸ್‌ಪಿ ಪುರುಷೋತ್ತಮ್ ಶುಕ್ರವಾರ ಪೇದೆಯ ಆರೋಗ್ಯ ವಿಚಾರಿಸಿದರು. ನಿಮ್ಮೊಂದಿಗೆ ಇಲಾಖೆ ಇದೆ ಎನ್ನುವ ಭರವಸೆ ನೀಡುವ ಜತೆಗೆ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದರು.

    ಪೇದೆಯ ಮೇಲೆ ಹಲ್ಲೆ ಮಾಡಿರುವ ದುರುಳರನ್ನು ಶೀಘ್ರವೇ ಬಂಧನ ಮಾಡುತ್ತೇವೆ. ಹಲ್ಲೆ ಮಾಡಿರುವುದು ಅಕ್ಷಮ್ಯ. ಇಲಾಖೆ ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.
    ಮಲ್ಲಿಕಾರ್ಜುನ ಬಾಲದಂಡಿ ಬೆಂಗಳೂರು ಗ್ರಾಮಾಂತರ ಎಸ್‌ಪಿ

    ಪೊಲೀಸರ ಮೇಲೆಯೇ ದಬ್ಬಾಳಿಕೆ ನಡೆದರೆ, ಸಾಮಾನ್ಯ ಜನರ ಸ್ಥಿತಿ ಏನು ಎನ್ನುವುದು ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿದೆ. ಗೃಹ ಇಲಾಖೆ ಇಂತಹ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
    ಟಾಟ್ ಪ್ರಕಾಶ್, ವಕೀಲರ ಸಂಘದ ಮಾಜಿ ಅಧ್ಯಕ್ಷ, ಆನೇಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts