More

    ಪೊಲೀಸರ ವಿರುದ್ಧ ಭುಗಿಲೆದ್ದ ಆಕ್ರೋಶ

    ಹುಬ್ಬಳ್ಳಿ: ಕಾಶ್ಮೀರಿ ವಿದ್ಯಾರ್ಥಿಗಳನ್ನು ಪೊಲೀಸರು ಏಕಾಏಕಿ ಬಿಡುಗಡೆಗೊಳಿಸಿರುವುದರ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಬಜರಂಗ ದಳ-ವಿಶ್ವ ಹಿಂದು ಪರಿಷತ್ ಮತ್ತಿತರ ಸಂಘಟನೆಯವರು ಭಾನುವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.

    ಸಂಜೆ 7ರ ಸುಮಾರಿಗೆ ಗೋಕುಲ ರಸ್ತೆ ಠಾಣೆ ಎದುರು ಪ್ರತಿಭಟನೆ ನಡೆಸಿ, ಪೊಲೀಸ್ ಆಯುಕ್ತರು ಸ್ಥಳಕ್ಕೆ ಬಂದು ವಿವರಣೆ ನೀಡಬೇಕು ಎಂದು ಆಗ್ರಹಿಸಿದರು. ಅರ್ಧ ಗಂಟೆ ಕಳೆದರೂ ಆಯುಕ್ತರು ಬರದಿದ್ದಾಗ ಆಕ್ರೋಶಿತರಾದ ಪ್ರತಿಭಟನಾಕಾರರು ಅಲ್ಲಿಂದ ಎದ್ದು, ಎದುರಿನ ಗೋಕುಲ ರಸ್ತೆಗೆ ಕುಳಿತು ಘೊಷಣೆ ಕೂಗಿದರು. ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಟೈರ್​ಗೆ ಬೆಂಕಿ ಹಚ್ಚಿದರು. ಪೊಲೀಸರು ಸಮಾಧಾನಪಡಿಸಲು ಯತ್ನಿಸಿದರೂ ಜಗ್ಗಲಿಲ್ಲ.

    ಕೆಲವೇ ನಿಮಿಷದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದರು. ಮಹಿಳಾ ಕಾರ್ಯಕರ್ತರೂ ಸ್ಥಳಕ್ಕೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

    ಪೊಲೀಸ್ ಆಯುಕ್ತರು ಸ್ಥಳಕ್ಕೆ ಬಂದು ವಿವರಣೆ ನೀಡಬೇಕು. ಅದಲ್ಲದಿದ್ದರೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ. ಅಲ್ಲೇ ಅಡುಗೆ ಮಾಡಿ ಸೇವಿಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಸಿದರು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ಶ್ರೀರಾಮ ಸೇನೆಯವರು, ಸಾರ್ವಜನಿಕರು ಸಹ ಬಂದು ಪ್ರತಿಭಟನಾಕಾರರನ್ನು ಸೇರಿಕೊಂಡರು. ಗೋಕುಲ ರಸ್ತೆಯಲ್ಲಿ ವಾಹನ ಸಂಚಾರವೂ ವ್ಯತ್ಯಯವಾಯಿತು.

    ರಾತ್ರಿ 9.30ರ ಸುಮಾರಿಗೆ ಸ್ಥಳಕ್ಕೆ ಬಂದ ಪೊಲೀಸ್ ಆಯುಕ್ತ ಆರ್. ದಿಲೀಪ ಅವರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಡಿಸಿದರು. ಬಿಡುಗಡೆ ಮಾಡಿರುವ ಆರೋಪಿಗಳನ್ನು ಪುನಃ ಬಂಧಿಸಿ ಎಂದು ಆಗ್ರಹಿಸಿದರು. ಗದ್ದಲದಲ್ಲಿ ಯಾರ ಮಾತು ಯಾರಿಗೂ ಕೇಳದಂಥ ಪರಿಸ್ಥಿತಿ ನಿರ್ವಣವಾಗಿತ್ತು.

    ಈ ಸಂದರ್ಭದಲ್ಲಿ ಪಕ್ಕದಲ್ಲೇ ಇರುವ ಗೋಕುಲ ರಸ್ತೆ ಠಾಣೆಗೆ ಬರುವಂತೆ ಪ್ರತಿಭಟನಾಕಾರರ ಮುಖಂಡರಿಗೆ ಆಯುಕ್ತರು ತಿಳಿಸಿ, ತೆರಳಿದರು.

    ಠಾಣೆಯಲ್ಲಿ ಕೆಲವು ನಿಮಿಷ ಮಾತುಕತೆ ನಡೆಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಪೊಲೀಸ್ ಆಯುಕ್ತರು ನಂತರ ಪುನಃ ಪ್ರತಿಭಟನಾಕಾರರಲ್ಲಿಗೆ ಬಂದು ಮಾತನಾಡಿದರು.

    ‘ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ದೇಶದ್ರೋಹ ಕಾಯ್ದೆಯಡಿ ಅವರನ್ನು ಬಂಧಿಸಿದ್ದೆವು. ಪ್ರಕರಣವನ್ನು ರ್ತಾಕ ಅಂತ್ಯಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಕೆಲವೊಂದು ತಾಂತ್ರಿಕ ಅಂಶಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಕಾನೂನು ಪ್ರಕಾರ ಏನೇನು ಮಾಡಬೇಕೊ ಅದೆಲ್ಲವನ್ನೂ ಮಾಡುತ್ತೇವೆ. ನಮ್ಮ ಮೇಲೆ ವಿಶ್ವಾಸ ಇಡಿ’ ಎಂದು ಹೇಳಿ, ಠಾಣೆಗೆ ಮರಳಿದರು.

    ಇದರಿಂದ ಪ್ರತಿಭಟನಾಕಾರರಿಗೆ ಪೂರ್ಣ ಸಮಾಧಾನವಾಗಲಿಲ್ಲ. ಆದರೆ, ಆಯುಕ್ತರು ತಮ್ಮ ಮೇಲೆ ವಿಶ್ವಾಸ ಇಡುವಂತೆ ಹೇಳಿದ್ದಾರೆ. ಕೆಲವೊಂದು ತಾಂತ್ರಿಕ ಅಂಶ ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಅವರಿಗೆ ಸ್ವಲ್ಪ ಅವಕಾಶ ನೀಡಿ, ತಾತ್ಕಾಲಿಕವಾಗಿ ಪ್ರತಿಭಟನೆ ಸ್ಥಗಿತಗೊಳಿಸುತ್ತೇವೆ ಎಂದು ಮುಖಂಡರು ತಿಳಿಸಿದರು.

    ಬಜರಂಗ ದಳ ಮುಖಂಡ ಶಿವಾನಂದ ಸತ್ತಿಗೇರಿ, ವಿಶ್ವ ಹಿಂದು ಪರಿಷತ್ತಿನ ಗೋವರ್ಧನರಾವ್, ಸುಭಾಸಸಿಂಗ್ ಜಮಾದಾರ, ಶಿವಯ್ಯ ಹಿರೇಮಠ, ಗಂಗಾಧರ ಸಂಗಮಶೆಟ್ಟರ್, ಯುವ ವಕೀಲರ ಸಂಘದ ಮುಖಂಡ ಅಶೋಕ ಅಣವೇಕರ, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ಸಂತೋಷ ಚೌಹಾಣ, ಜಯತೀರ್ಥ ಕಟ್ಟಿ, ಉಮೇಶ ದುಶಿ; ಮಾಜಿ ಸೈನಿಕ ಮೋಹನ ಚಿತ್ತಲೆ, ಮಂಜುನಾಥ ಹೆಬಸೂರು, ವಿನಾಯಕ ತಲಗೇರಿ, ಇತರರು ಪಾಲ್ಗೊಂಡಿದ್ದರು.

    ಆಯುಕ್ತರ ಚುಟುಕು ಉತ್ತರ

    ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಆಯುಕ್ತ ಆರ್. ದಿಲೀಪ, ತನಿಖೆ ನಡೆಸುತ್ತಿದ್ದೇವೆ. ಪ್ರಕರಣವನ್ನು ನಿರ್ಲಕ್ಷಿಸಿಲ್ಲ. ಸವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ವಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದಷ್ಟೇ ಹೇಳಿ ತೆರಳಿದರು.

    ವ್ಯಾಪ್ತಿ ಸಮಸ್ಯೆ?

    ಕಾಶ್ಮೀರಿ ವಿದ್ಯಾರ್ಥಿಗಳು ಹುಬ್ಬಳ್ಳಿ ತಾಲೂಕು ಕೊಟಗುಂಡಹುಣಸಿ ಬಳಿ ಇರುವ ವಸತಿ ನಿಲಯದಲ್ಲಿ ವಿಡಿಯೋ ಮಾಡಿ ವಾಟ್ಸ್​ಆಪ್​ಗೆ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಕೊಟಗುಂಡಹುಣಸಿ ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಗೆ ಬರುತ್ತದೆ. ಶನಿವಾರ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡವರು ಗೋಕುಲ ರಸ್ತೆ ಠಾಣೆ ಪೊಲೀಸರು. ಪ್ರಕರಣದ ವ್ಯಾಪ್ತಿ ಗೋಕುಲ ರಸ್ತೆ ಠಾಣೆಗೆ ಬರುವುದಿಲ್ಲ ಎಂದು ಜಿಲ್ಲಾ ಪೊಲೀಸರಿಗೆ ಹಸ್ತಾಂತರಿಸುವ ಕುರಿತು ಇಲಾಖೆಯಲ್ಲಿ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts