More

    ಪೊಲೀಸರಿಂದ ವಿಶೇಷ ಕಾರ್ಯಾಚರಣೆ


    ವಿಜಯವಾಣಿ ಸುದ್ದಿಜಾಲ ಹಾಸನ
    ಎನ್‌ಆರ್ ವೃತ್ತದಲ್ಲಿ ಮಂಗಳವಾರ ರಾತ್ರಿ ನಡೆದ ಕೊಲೆ, ಅತ್ಯಾಚಾರ ಪ್ರಕರಣದಿಂದ ಸಾರ್ವಜನಿಕ ವಲಯದಲ್ಲಿ ಎದ್ದ ಆಕ್ರೋಶದ ಅಲೆಯಿಂದ ಎಚ್ಚೆತ್ತ ಪೊಲೀಸರು ಬುಧವಾರ ರಾತ್ರಿಯಿಂದ ನಗರದಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
    ರಾತ್ರಿ 10 ಗಂಟೆಗೆ ನಗರ ಹಾಗೂ ಹೊರವಲಯದಲ್ಲಿನ ಬಾರ್, ರೆಸ್ಟೋರೆಂಟ್‌ಗಳನ್ನು ಬಾಗಿಲು ಮುಚ್ಚಿಸಿದ ಪೊಲೀಸರು, ರಸ್ತೆಯಲ್ಲಿ ವಿನಾಕಾರಣ ಸಂಚರಿಸುವವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.
    ಪೊಲೀಸರ ಬಿಗಿ ಕ್ರಮಗಳಿಂದಾಗಿ ಬುಧವಾರ ರಾತ್ರಿ ಮದ್ಯಪಾನ ಮಾಡಿ ರಸ್ತೆ ಬದಿಯಲ್ಲಿ ನಿಂತಿದ್ದ, ಓಡಾಡುತ್ತಿದ್ದ ಕುಡುಕರು ಪೇಚಾಟಕ್ಕೆ ಸಿಲುಕುವಂತಾಯಿತು. ಕೊಲೆ, ಅತ್ಯಾಚಾರ ಪ್ರಕರಣದ ಆರೋಪಿಯ ಹುಡುಕಾಟದಲ್ಲಿ ತೊಡಗಿರುವ ಪೊಲೀಸರು ಅನುಮಾಸ್ಪಾದವಾಗಿ ಓಡಾಡುತ್ತಿರುವ ಆರೋಪದ ಮೇಲೆ ಹಲವರನ್ನು ಠಾಣೆಗಳಿಗೆ ಎಳೆದು ತಂದರು.
    ಇದರಲ್ಲಿ ಬಹುತೇಕರು ಮದ್ಯಪಾನ ಮಾಡಿ ಇನ್ನೂ ಮನೆ ಸೇರಲು ಮೀನಮೇಷ ಎಣಿಸುತ್ತಿರುವವರೇ ಆಗಿದ್ದರು. ಮದ್ಯದ ಅಮಲಿನಲ್ಲಿದ್ದ ಅವರನ್ನು ಠಾಣೆಗೆ ಕರೆದೊಯ್ಯುತ್ತಲೇ ನಶೆ ಇಳಿದು ಹೋಗಿ, ತಮ್ಮನ್ನು ಬಿಡುಗಡೆ ಮಾಡುವಂತೆ ಅಂಗಲಾಚಿದರು. ಮೊಬೈಲ್ ಬಳಸಿ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರಿಗೆ ತಮ್ಮನ್ನು ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ನೀಡಿದರು.
    ವಶದಲ್ಲಿದ್ದವರನ್ನು ಬಿಡುಗಡೆ ಮಾಡಿಸಲು ಕುಟುಂಬದವರು, ಆಪ್ತರು ಠಾಣೆಗೆ ಎಡತಾಕಿದರೂ ಪೊಲೀಸರು ಮಧ್ಯರಾತ್ರಿಯಲ್ಲಿ ಏಕೆ ಓಡಾಡುತ್ತಿದ್ದರು ಎನ್ನುವ ಪ್ರಶ್ನೆ ಮುಂದಿಟ್ಟು ಎಣ್ಣೆ ಏಟಿನಲ್ಲಿದ್ದ ಹಲವರನ್ನು ’ಚೆನ್ನಾಗಿ ವಿಚಾರಿಸಿಕೊಂಡರು’. ಮುಂಜಾನೆವರೆಗೂ ಠಾಣೆಯಲ್ಲಿರಿಸಿಕೊಂಡಿದ್ದ ಕುಡುಕರನ್ನು ಮುಂಜಾನೆ ಕಳುಹಿಸಿಕೊಟ್ಟರು.
    ಲಾಕ್‌ಡೌನ್ ನಂತರ ಪೊಲೀಸ್ ಇಲಾಖೆ ಉದಾಸೀನ ಮನೋಭಾವದಿಂದ ವರ್ತಿಸುತ್ತಿದೆ ಎಂಬ ಆರೋಪಗಳಿಗೆ ಇಂಬು ನೀಡುವಂತೆ ಅಪರಾಧ ಪ್ರಕರಣಗಳು ಹೆಚ್ಚಳವಾಗಿರುವ ಬಗ್ಗೆ ಕೇಳಿ ಬಂದ ಟೀಕೆಗಳಿಂದ ಎಚ್ಚೆತ್ತ ಪೊಲೀಸರು ಮೈಕೊಡವಿ ಮೇಲೆದ್ದಿದ್ದು, ಗುರುವಾರವೂ ನಗರದಲ್ಲಿ ಕಾರ್ಯಾಚರಣೆ ಮುಂದುವರಿಯಿತು.
    (ಬಾಕ್ಸ್ ಐಟಂ)
    ಇನ್ನೂ ಸಿಕ್ಕಿಬೀಳದ ಹಂತಕ:
    ನಗರದ ಎನ್‌ಆರ್ ವೃತ್ತದಲ್ಲಿ ಮಹಿಳೆಯ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ಅತ್ಯಾಚಾರ ನಡೆಸಿದ ಪ್ರಕರಣದ ಆರೋಪಿಯ ಪತ್ತೆಗಾಗಿ ರಚಿತವಾಗಿರುವ ಮೂರೂ ತಂಡಗಳು ಹುಡುಕಾಟ ಮುಂದುವರಿಸಿವೆ.
    ಮೊಬೈಲ್ ಕರೆಗಳು, ಆರೋಪಿಯ ಚಹರೆಯ ಸುಳಿವುಗಳನ್ನು ಹಿಡಿದು ಪೊಲೀಸ್ ತಂಡಗಳು ಆರೋಪಿಯನ್ನು ಪತ್ತೆಹಚ್ಚಲು ಸಾಕಷ್ಟು ಶ್ರಮವಹಿಸಿದ್ದು, ಗುರುವಾರವೂ ಅವರ ಪ್ರಯತ್ನಕ್ಕೆ ಫಲ ದೊರಕಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts