More

    ಪೊಲೀಸರಿಂದ ಮತ್ತಷ್ಟು ಕಟ್ಟುನಿಟ್ಟು

    ಲಕ್ಷ್ಮೇಶ್ವರ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬುಧವಾರ ಪಟ್ಟಣದಲ್ಲಿ ಜನತೆ ದಿನಸಿ, ತರಕಾರಿಗೆ ಮುಗಿಬಿದ್ದಿದ್ದರು. ಗುರುವಾರದಂದು ಪೊಲೀಸ್ ಇಲಾಖೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಲಾಕ್​ಡೌನ್ ನಿಯಮ ಪಾಲನೆ ಮಾಡಿಸುವಲ್ಲಿ ಯಶ್ವಸಿಯಾದರು.

    ಈ ಕುರಿತು ದಿಗ್ವಿಜಯ/ ವಿಜಯವಾಣಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಸಿಪಿಐ ಆರ್.ಎಚ್. ಕಟ್ಟಿಮನಿ, ಪಿಎಸ್​ಐ ಶಿವಯೋಗಿ ಲೋಹಾರ ನೇತೃತ್ವದಲ್ಲಿ ಬೆಳಗ್ಗೆ ಲಾಠಿ ಹಿಡಿದು ಕಾರ್ಯಪೃವೃತ್ತರಾದ ಪೊಲೀಸ್ ಸಿಬ್ಬಂದಿ ಪಟ್ಟಣ ಪ್ರವೇಶದ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ನಿಲ್ಲಿಸಿ ವಾಹನಗಳು ಮಾರ್ಕೆಟ್ ಒಳ ಬರದಂತೆ ತಡೆದರು. ಇಷ್ಟಾಗಿಯೂ ಮಾರ್ಕೆಟ್ ಒಳಗೆ ಪ್ರವೇಶಿಸಿದ ಬೈಕ್ ಸವಾರರಿಗೆ ಲಾಠಿ ರುಚಿ ತೋರಿಸಿ ಬೈಕ್ ವಶಪಡಿಸಿಕೊಂಡರು.

    ದಿನಸಿ, ತರಕಾರಿ ಮತ್ತು ಕೃಷಿ ಸಂಬಂಧಿತ ಪರಿಕರಗಳ ಖರೀದಿಗಾಗಿ ಬಂದಿದ್ದ ಜನರಿಗೆ ಅಂಗಡಿಗಳ ಮುಂದೆ ಸಾಲುಗಟ್ಟಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡರು. ಇದಕ್ಕೆ ಆಯಾ ಅಂಗಡಿಗಳ ಮಾಲೀಕರು, ಪುರಸಭೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಸಾಥ್ ನೀಡಿದರು. ಈ ವೇಳೆ ಪೊಲೀಸರು ವಿನಾಕಾರಣ ಮಾರ್ಕೆಟ್​ನಲ್ಲಿ ಸುತ್ತಾಡಲು ಬಂದವರಿಗೆ, ಮಾಸ್ಕ್ ಧರಿಸದವರಿಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಲಾಠಿ ರುಚಿ ತೋರಿಸಿದರು. ಇನ್ನು ಕೆಲವರಿಗೆ ಬಸ್ಕಿ ಹೊಡೆಸಿದರು.

    ಬುಧವಾರ ಅಮಾವಾಸ್ಯೆ ಇದ್ದುದರಿಂದ ಪಟ್ಟಣದ ಮಾರ್ಕೆಟ್​ಗೆ ಸುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಜನದಟ್ಟಣೆ ಆಗಿತ್ತು. ಜನರ ನಿಯಂತ್ರಣ ಮಾಡುವ ಪೊಲೀಸರ ಕಾರ್ಯಕ್ಕೆ ಎಲ್ಲರ ಸಹಕಾರವೂ ಅಗತ್ಯವಾಗಿದೆ. ಮೇ 3 ರವರೆಗೆ ಲಾಕ್ ಡೌನ್ ಮತ್ತು 144 ಕಲಂ ಜಾರಿಯಲ್ಲಿದೆ. ಜನರು ನಿಯಮಗಳನ್ನು ಮೀರಬಾರದು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    | ಆರ್.ಎಚ್. ಕಟ್ಟಿಮನಿ, ಸಿಪಿಐ

    ವಿನಾಕಾರಣ ಬೈಕ್​ನಲ್ಲಿ ಸುತ್ತಾಡುವವರನ್ನು ತಡೆದು ದಂಡ ಹಾಕಲಾಗಿದೆ. ಸುಮಾರು 100 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಚೆಕ್ ಪೋಸ್ಟ್​ಗಳ ಮೇಲೆ ನಿಗಾ ಇಡಲಾಗಿದ್ದು, ಅದೇಗೂ ನೆರೆಯ ಜಿಲ್ಲೆಯಿಂದ ಬಂದವರನ್ನು ಪತ್ತೆ ಮಾಡಿ ತಹಸೀಲ್ದಾರರ ಸೂಚನೆಯಂತೆ ಕ್ವಾರಂಟೈನ್ ಮಾಡಲಾಗುತ್ತಿದೆ.

    | ಶಿವಯೋಗಿ ಲೋಹಾರ, ಪಿಎಸ್​ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts