More

    ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸುಳಿವು ನೀಡಿದ ನಿರ್ಮಲಾ

    ಬೆಂಗಳೂರು: ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರುಗತಿಯಲ್ಲಿ ಇರುವ ಕಾರಣ ಪರಿಸ್ಥಿತಿ ಆಧರಿಸಿ ತೈಲ ಕಂಪನಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳುವ ಮೂಲಕ ಪರೋಕ್ಷವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸುಳಿವು ನೀಡಿದರು.

    ಖಾಸಗಿ ಹೋಟೆಲ್​ನಲ್ಲಿ ಮಂಗಳವಾರ ಆಯೋಜಿಸಿದ್ದ ‘ಆತ್ಮನಿರ್ಭರ ಭಾರತ ಅರ್ಥ ವ್ಯವಸ್ಥೆ’ ಕುರಿತು ಸಂವಾದದಲ್ಲಿ ನಿರ್ಮಲಾ ಮಾತನಾಡಿದರು. ಯೂಕ್ರೇನ್ ಬಿಕ್ಕಟ್ಟು ಜಾಗತಿಕವಾಗಿ ಅನೇಕ ಪರಿಣಾಮ ಬೀರಿದ್ದು, ಈ ಪೈಕಿ ಕಚ್ಚಾತೈಲ ಬೆಲೆ ಹೆಚ್ಚಳವೂ ಸೇರಿದೆ. ತೈಲ ಕಂಪನಿಗಳು ಪ್ರತಿ 15 ದಿನಗಳ ಸರಾಸರಿ ಕಚ್ಚಾತೈಲ ಬೆಲೆ ಆಧಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನಿಗದಿಪಡಿಸುತ್ತವೆ. ವಿಶ್ವಮಟ್ಟದಲ್ಲಿ ಕಚ್ಚಾ ತೈಲ ಏರುಗತಿ ಬೆಳವಣಿಗೆಯನ್ನು ಈ ಕಂಪನಿಗಳು ಅವಲೋಕಿಸುತ್ತಿವೆ ಎಂದರು.ಜಾಗತಿಕಮಟ್ಟದಲ್ಲಿ ಕಚ್ಚಾತೈಲ ಹೆಚ್ಚಳದ ಮೇಲೆ ತೀವ್ರ ನಿಗಾವಹಿಸಿದ್ದು, ಅದರ ಪರಿಣಾಮಗಳ ತೀವ್ರತೆ ತಗ್ಗಿಸುವ ಮಾಗೋಪಾಯಗಳ ಶೇ.85ಕ್ಕೂ ಅಧಿಕ ಪ್ರಮಾಣದ ಕಚ್ಚಾತೈಲ ಆಮದು ಅವಲಂಬಿತ ಭಾರತದ ಆರ್ಥಿಕತೆ ಬಹುದೊಡ್ಡ ಹೊರೆ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬಿಕ್ಕಟ್ಟಿನ ಪರಿಣಾಮಗಳನ್ನು ಸರ್ಕಾರ ಅವಲೋಕಿಸುತ್ತಿದೆ. ಕಚ್ಚಾತೈಲ ಆಮದು ಪ್ರಮಾಣ ತಗ್ಗಿಸುವುದಕ್ಕೆ ಪರ್ಯಾಯ ಇಂಧನ ಮೂಲಗಳ ಅಗತ್ಯವಿದೆ. ಕಚ್ಚಾತೈಲ ಆಮದು ಮಾಡಿಕೊಳ್ಳಲೆಂದು ಬಜೆಟ್ ನಲ್ಲಿ ಅನುದಾನ ಕಾದಿರಿಸಲಾಗಿದೆ ಎಂದು ತಿಳಿಸಿದರು.

    ಜಿಎಸ್​ಟಿ ವ್ಯಾಪ್ತಿಗೆ ಇಂಧನ!: ಜಿಎಸ್​ಟಿ ವ್ಯಾಪ್ತಿಯಲ್ಲಿ ಡೀಸೆಲ್, ಪೆಟ್ರೋಲ್ ಸೇರಿಸುವ ವಿಷಯ ಜಿಎಸ್​ಟಿ ಮಂಡಳಿ ಮುಂದಿದ್ದು, ಮತ್ತೊಮ್ಮೆ ಪ್ರಸ್ತಾಪಿಸುವ ಪ್ರಶ್ನೆಯೇ ಉದ್ಬವಿಸದು ಎಂದು ನಿರ್ಮಲಾ ಅಚ್ಚರಿಯ ಉತ್ತರ ನೀಡಿದರು. ಟೆಕ್ ಕಂಪನಿ ಯೊಂದರ ಸಿಇಒ ಎ.ಬಿ.ನರೇಂದ್ರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ರಾಜ್ಯಕ್ಕೆ 1.24 ಲಕ್ಷ ಕೋಟಿ ರೂ.: ರಸ್ತೆ ಸಾರಿಗೆ, ಹೆದ್ದಾರಿ, ಶಿಕ್ಷಣ, ನೀರಾವರಿ ಸೇರಿ ವಿವಿಧ ಯೋಜನೆಗಳಡಿ ಕರ್ನಾಟಕಕ್ಕೆ 2022-23ನೇ ಆರ್ಥಿಕ ವರ್ಷದಲ್ಲಿ 1.24 ಲಕ್ಷ ಕೋಟಿ ರೂ.ಗೂ ಅಧಿಕ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಯೋಜನೆಗಲಿಗೆ 9,795 ಕೋಟಿ ರೂ., 2022-23ರ ಅಂತ್ಯದ ವೇಳೆಗೆ ರಾಜ್ಯದಲ್ಲಿ 1,064 ಕಿ.ಮೀ. ಉದ್ದದ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ 33,913 ಕೋಟಿ ರೂ. ವಿನಿಯೋಗಿಸಲಿದೆ.ಮುಕ್ತ ಮಾರುಕಟ್ಟೆಯಲ್ಲಿ 67,570 ಕೋಟಿ ರೂ. ಸಾಲ ಪಡೆಯುವುದಕ್ಕೆ ಅವಕಾಶ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ, ಪುನರುಜ್ಜೀವನ ಯೋಜನೆಗಡಿ 282.60 ಕೋಟಿ ರೂ. ಸಮಗ್ರ ಶಿಕ್ಷಾ ಅಭಿಯಾನದಡಿ 861.52 ಕೋಟಿ ರೂ., ರಾಷ್ಟ್ರೀಯ ಆರೋಗ್ಯ ಮಿಷನ್​ನಡಿ 1,354.02 ಕೋಟಿ ರೂ., ಇಂಧನ ಕ್ಷೇತ್ರದಲ್ಲಿ ಸುಧಾರಣೆ ತರಲು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚುವರಿ 9,653 ಕೋಟಿ ರೂ. ಸಾಲ ಪಡೆಯುವುದಕ್ಕೆ ನೆರವು ನೀಡಲಿದೆ ಎಂದು ವಿವರಿಸಿದ್ದಾರೆ.

    ಹಂಚಿಕೆ ಪ್ರಮಾಣ ಏರಿಕೆ: ಕರ್ನಾಟಕದ ತೆರಿಗೆ ಹಂಚಿಕೆಯು 2009-14ರ ಅವಧಿಯಲ್ಲಿ 54,396 ಕೋಟಿ ರೂ.ಗಳು ಇದ್ದುದು 2014-19ರ ಅವಧಿಯಲ್ಲಿ ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕೇಂದ್ರದ ಅನುದಾನ ಹಂಚಿಕೆಯು 2019-14ರಲ್ಲಿ 39,919 ಕೋಟಿ ರೂ. ಇದ್ದುದು 2014-19ರಲ್ಲಿ 91,374 ಕೋಟಿ ರೂ.ಗಳಿಗೇರಿದೆ. 2019-20ರ ತೆರಿಗೆ ಹಂಚಿಕೆಯು 30,199 ಕೋಟಿ ರೂಪಾಯಿ., 2020-21ರಲ್ಲಿ 21,694, 2021-22ರಲ್ಲಿ 24,273 ಕೋಟಿ ರೂಪಾಯಿಗಳಾಗಿತ್ತು. 2022-23ರಲ್ಲಿ 29,783.21 ಕೋಟಿ ರೂ.ಗಳು ಆಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತುಲನಾತ್ಮಕ ಅಂಕಿ-ಅಂಶಗಳನ್ನು ಒದಗಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts